ಬೆಟ್ಟಿಂಗ್ ಚಟದಿಂದಾಗಿ ಸಾಲದಬಾಧೆಗೆ ಸಿಲುಕಿದ್ದ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದ ಬಳಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಹಳೇ ಬೂದನೂರು ನಿವಾಸಿ ತ್ಯಾಗ (30) ಎಂದು ಗುರುತಿಸಲಾಗಿದೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟು ಜೂಜಿಗೆ ಬಲಿಯಾಗಿದ್ದ ಯುವಕ, ಒಂದೂವರೆ ಕೋಟಿಗೂ ಹೆಚ್ಚಿನ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಬೆಟ್ಟಿಂಗ್ ದಂಧೆಕೋರರು, ಇಸ್ಪೀಟು ಅಡ್ಡಗಳ ಮಾಫಿಯಾದವರು ಮತ್ತು ಸಾಲಗಾರರ ಕಿರುಕುಳ ತಾಳಲಾರದೆ ಬೂದನೂರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ರೈಲ್ವೆ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಂಡ್ಯ ತಾಲೂಕಿನ ಕಸಬಾ ಹೋಬಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ವ್ಯಾಪಕವಾಗಿದ್ದು. ಇಲ್ಲಿನ ಗದ್ದೆ ಬಯಲುಗಳಲ್ಲಿ ವ್ಯಾಪಕ ಜೂಜು ಅಡ್ಡೆಗಳನ್ನು ನಡೆಸಲಾಗುತ್ತಿದೆ. ಈ ದಂಧೆಗಳನ್ನು ನಿರ್ವಹಿಸಲು ಪ್ರತ್ಯೇಕ ಗುಂಪುಗಳು ಸೃಷ್ಟಿಯಾಗಿದ್ದು, ಇವರ ಬೆಂಬಲಕ್ಕೆ ರಾಜಕೀಯ ನಾಯಕರು ಇರುವುದರಿಂದ ನೂರಾರು ಯುವಕರು ಈ ದಂಧೆಗೆ ಬಲಿಯಾಗುತ್ತಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾನೆಯ ವ್ಯಾಪ್ತಿಗೆ ಬರುವ ಈ ಗ್ರಾಮಗಳಲ್ಲಿ ಇಸ್ಪೀಟು ದಂಧೆಗೆ ಬೆಂಗಳೂರು, ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ ಜೂಜೂಕೋರರು ಅಗಮಿಸುತ್ತಿದ್ದು. ಹಳೇ ಮೈಸೂರು ಭಾಗದಲ್ಲಿ ಇಸ್ಪೀಟು ಧಂಧೆಗೆ ಕುಖ್ಯಾತಿಯಾಗಿದೆ. ಈಗಾಗಲೆ ನೂರಾರು ಯುವಕರು ಈ ದಂಧೆಗೆ ಬಲಿಯಾಗಿದ್ದು, ತಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಪೊಲೀಸರು ಕೂಡ ಮುಗುಮ್ಮಾಗಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಕ್ಫ್ ವಿವಾದವೆಂಬ ಕೃತಕ ಸೃಷ್ಟಿ – ಮತ್ತೊಮ್ಮೆ ಮಾಧ್ಯಮಗಳ ಬಣ್ಣ ಬಯಲು
ಈ ಹಿಂದಿನ ಎಸ್‌ಪಿ ಯತೀಶ್ ಕುಮಾರ್ ಖಡಕ್ ಧೋರಣೆಯಿಂದ ಬಾಲ ಮುಚ್ಚಿಕೊಂಡಿದ್ದ ದಂಧೆಕೋರರು ಮತ್ತೆ ಎದ್ದು ನಿಂತಿದ್ದಾರೆ. ಹಳೇ ಬೂದನೂರಿನಲ್ಲಿ ಬೀಗ ಜಡಿದಿದ್ದ ಎರಡು ಇಸ್ಪೀಟು ಕ್ಲಬ್‌ಗಳು ಮತ್ತೆ ತಮ್ಮ ದಂಧೆ ಶುರು ಮಾಡಿಕೊಂಡಿವೆ ಎನ್ನಲಾಗಿದೆ. ನೂತನ ಎಸ್‌ಪಿ ಪರಶುರಾಮ್ ಬಾಲದಂಡಿ ಇನ್ನಾದರೂ ಐಪಿಎಲ್ ಜೂಜೂ ದಂಧೆಗೆ ಕಡಿವಾಣ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.