ಬಿರ್ಸಾ ಮುಂಡಾ ಬುಡಕಟ್ಟು ಜನಾಂಗದವರಿಗೆ ಆರಾಧ್ಯ ದೈವವಿದ್ದಂತೆ. ಬುಡಕಟ್ಟು ಜನಾಂಗದ ಅಳಿವು ಉಳಿವಿಗಾಗಿ ಹೋರಾಡಿ ಮಡಿದ ಧೀಮಂತ ನಾಯಕ ಬಿರ್ಸಾ ಮುಂಡಾ. ಅವರ ಧೈರ್ಯ ದಿಟ್ಟತನವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ತಿಳಿಸಿದರು.
ಅವರು ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾರ 150ನೇ ಜನ್ಮ ಜಯಂತಿ ಅಂಗವಾಗಿ ಜನ ಜಾತಿಯ ಗೌರವ್ ದಿವಸ ಸಮಾರಂಭ ಹಾಗೂ ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಬಿರ್ಸಾ ಮುಂಡಾ ಜಯಂತಿಯನ್ನು ಪ್ರತಿ ವರ್ಷ ನ.15 ರಂದು ಆಚರಿಸಲಾಗುತ್ತದೆ. ಇವರನ್ನು ಭಾರತೀಯ ಇತಿಹಾಸದಲ್ಲಿ ಮಹಾನ್ ವೀರ ಎಂದು ಕರೆಯಲಾಗುತ್ತದೆ. ಬುಡಕಟ್ಟು ಸಮಾಜದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಬಿರ್ಸಾ ಮುಂಡಾ ಬುಡಕಟ್ಟು ಜನಾಂಗಕ್ಕೆ ನೀಡಿದ ಕೊಡುಗೆ, ಹೋರಾಟ ಮತ್ತು ತ್ಯಾಗವನ್ನು ಗೌರವಿಸುವುದು ಈ ಜಯಂತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಆದಿವಾಸಿಗಳು ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದು, ಅಂತಹವರ ಸಾಲಿಗೆ ಬಿರ್ಸಾ ಮುಂಡಾ ಕೂಡ ಸೇರಿದ್ದಾರೆ. ಇವರು 1875 ರ ನವೆಂಬರ್ 15 ರಂದು ಜಾರ್ಖಂಡ್‌ನ ಉಲಿಹಾತು ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಅವರ ಹುಟ್ಟಿನ ಬಗ್ಗೆ ತಿಳಿಸಿದರು.
ಇವರು ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಬುಡಕಟ್ಟು ನಾಯಕರಾಗಿ ಗುರುತಿಸಿಕೊಂಡವರು. ಬ್ರಿಟಿಷರ ಅನ್ಯಾಯ ಮತ್ತು ಬುಡಕಟ್ಟು ಜನರ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ರಾಮನಗರ | ಅರ್ಧನಾರೀಶ್ವರ ಪರಿಕಲ್ಪನೆಯ ಅರ್ಥ ಸಮಾನತೆಯಾಗಿದೆ: ನ್ಯಾ. ಬಿ.ವಿ. ರೇಣುಕ
ಇವರ ಮುಖ್ಯ ಉದ್ದೇಶವೇ ಆದಿವಾಸಿಗಳ ನೆಲ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದಾಗಿತ್ತು. ಕೇವಲ ಇವರು 25 ವರ್ಷಗಳ ಕಾಲ ಬದುಕಿದ್ದು ತಮ್ಮ ಕಿರಿ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಈತನನ್ನು ಬುಡಕಟ್ಟು ಜನಾಂಗದವರು ದೇವರಂತೆ ಪೂಜಿಸುತ್ತಾರೆ. ಇವರು ನೀಡಿರುವ ಕೊಡುಗೆಯನ್ನು ಗೌರವಿಸುದುಕ್ಕಾಗಿಯೇ ಅವರ ಜನ್ಮ ದಿನವನ್ನು ನ.15 ರಂದು ರಾಷ್ಟ್ರೀಯ ಮಟ್ಟದಲ್ಲಿ ಬುಡಕಟ್ಟು ಹೆಮ್ಮೆಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ, ಬಿರ್ಸಾ ಮುಂಡಾ ಪರಂಪರೆ ಮತ್ತು ಭಾರತದ ಬುಡಕಟ್ಟು ಸ್ವಾತಂತ್ರ‍್ಯ ಚಳುವಳಿಯಲ್ಲಿ ಅವರ ಪಾತ್ರವನ್ನು ಗೌರವಿಸಲು ಬಿರ್ಸಾ ಮುಂಡಾ ಜಯಂತಿಯನ್ನು ಪ್ರಾರಂಭಿಸಿ ಪ್ರತಿವರ್ಷ ನ.15 ರಂದು ಆಚರಣೆ ಮಾಡಲಾಗುತ್ತಿದೆ ಎಂದರು.

ಬುಡಕಟ್ಟು ಸಮಾಜದ ಹೋರಾಟ, ಸ್ವಾಭಿಮಾನ ಮತ್ತು ಅವರ ಹಕ್ಕುಗಳ ರಕ್ಷಣೆಯ ಸಂಕೇತವೆಂದು ಈ ದಿನವನ್ನು ಪರಿಗಣಿಸಲಾಗಿದೆ. ಇವರು ಪ್ರಾರಂಭಿಸಿದ ಹೋರಾಟವು ಬುಡಕಟ್ಟು ಜನರಲ್ಲಿ ಸ್ವಾಭಿಮಾನ ಮತ್ತು ಏಕತೆಯ ಭಾವನೆಯನ್ನು ಮೂಡಿಸಿತ್ತು. ಈ ದಿವಸವು ಬ್ರಿಟಿಷರ ಆಡಳಿತದ ವಿರುದ್ಧ ಪ್ರಾಣ ತ್ಯಾಗ ಮಾಡಿದ ಎಲ್ಲರನ್ನೂ ಸ್ಮರಿಸುವ ದಿನವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಿರ್ಸಾ ಮುಂಡಾ ಜಯಂತಿ ಅಂಗವಾಗಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದಂತೆ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು. ತದನಂತರ ಬುಡಕಟ್ಟು ಜನಾಂಗದವರು ಅವರ ಸಮುದಾಯದ ನೃತ್ಯ ಪ್ರದರ್ಶನವನ್ನು ಮಾಡಿದರು.
ಇದನ್ನು ಓದಿದ್ದೀರಾ? ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಗೆ ಖ್ಯಾತ ನಟ ಅಮಿತಾಭ್ ಬಚ್ಚನ್‌ಗೆ ಆಹ್ವಾನ
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ನಗರಸಭೆ ಸದಸ್ಯ ಶಿವಲಿಂಗು, ಭಾರತ ಆಡಳಿತ ಸೇವೆಯ ವೃತ್ತಿಪರ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.