ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಅಧ್ಯಕ್ಷರಾಗಿದ್ದ ಬಿಜೆಪಿ ಮುಖಂಡ ನಾಗರಾಜಪ್ಪ ಅವರು ಕಾರ್ಖಾನೆಗೆ ಬರೋಬ್ಬರಿ 121 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ ಎಂಬುದು ಬಹಿರಂಗವಾಗಿದೆ. ಅವರ ವಿರುದ್ಧ ಸಿವಿಲ್ ದಾವೆ ಹೂಡಿ, ನಷ್ಟ ವಸೂಲಿ ಮಾಡಲು ಸರ್ಕಾರ ಸಮ್ಮತಿ ನೀಡಿದೆ.
ಮೈಷುಗರ್ ಕಾರ್ಕಾನೆಗೆ 2008-09 ಮತ್ತು 2011-12ರ ಅವಧಿಯಲ್ಲಿ ನಾಗರಾಜಪ್ಪ ಅಧ್ಯಕ್ಷರಾಗಿದ್ದರು. ತಮ್ಮ ಅಧಿಕಾರವಧಿಯಲ್ಲಿ ಮೈಷುಗರ್‌ಗೆ 121 ಕೋಟಿ ರೂ. ನಷ್ಟವುಂಟಾಗಿದೆ ಎಂದು ಆರೋಪಿಸಲಾಗಿತ್ತು. ಆ ಬಗ್ಗೆ ತನಿಖೆ ಉಪ ಲೋಕಾಯುಕ್ತರು ತನಿಖೆ ನಡೆಸಿದ್ದು, ನಷ್ಟವಾಗಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಉಪ ಲೋಕಾಯುಕ್ತರು ನೀಡಿರುವ ವರದಿಯ ಪ್ರಕಾರ, ನಾಗರಾಜಪ್ಪ ಮೇಲಿನ ಆರೋಪಗಳು ಸಾಬೀತಾಗಿವೆ. ಕಾರ್ಖಾನೆಗೆ ಉಂಟಾಗಿರುವ ನಷ್ಟವನ್ನು ಮೈಸೂರು ಶುಗರ್ ಕಂಪನಿಗೆ ಮರುಪಾವತಿಸಿಕೊಳ್ಳುವ ಸಂಬಂಧ ನಾಗರಾಜಪ್ಪ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್ ದಾವೆಯನ್ನು ಹೂಡಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಅನುಮೋದನೆ ನೀಡಿದ್ದಾರೆ.
ನಾಗರಾಜಪ್ಪ ಅವರ ಹೆಸರಿನಲ್ಲಿ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಮಾಹಿತಿಯನ್ನು ಕ್ರೋಡೀಕರಿಸಬೇಕಾಗಿದೆ. ಹೀಗಾಗಿ, ನಾಗರಾಜಪ್ಪ ಅವರಿಗೆ ಸಂಬಂಧಿಸಿದ ಕೃಷಿ ಜಮೀನು, ಕೃಷಿಯೇತರ ಆಸ್ತಿ, ನಿವೇಶನ, ವಾಹನಗಳು, ಬ್ಯಾಂಕಿನಲ್ಲಿರುವ ನಗದು, ಠೇವಣಿಗಳು, ಷೇರು ಹಾಗೂ ಇತ್ಯಾದಿ ಮಾಹಿತಿಗಳನ್ನು ದಾಖಲೆಗಳೊಂದಿಗೆ ನೀಡುವಂತೆ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿಕುಮಾರ್ ಅವರು ಕಳೆದ ಡಿ.31ರಂದು ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.