ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ ವಿಸಿ ನಾಲೆಗೆ ಕಾರು ಉರುಳಿ ಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಸೋಮವಾರ ಮಧ್ಯಾಹ್ನ 12.30ರ ಸಮಯದಲ್ಲಿ ಪಾಂಡವಪುರದಿಂದ ಮಂಡ್ಯಕ್ಕೆ ಬರುತ್ತಿದ್ದ ಕಾರು ವಿಸಿ ನಾಲೆಗೆ ಉರುಳಿದ್ದು, ಈ ಸಂದರ್ಭದಲ್ಲಿ ಕಾರಿನ ಮಾಲೀಕ ಫಯಾಜ್ ಅಲಿಯಾಸ್ ಬ್ಯಾಟರಿ ಅವರು ಸ್ಥಳದಲ್ಲಿಯೇ ಮೃತಪಟ್ಟರೆ, ನಯಾಜ್ ಎಂಬಾತನನ್ನು ಸ್ಥಳೀಯ ಗ್ರಾಮಸ್ಥರು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ 20 ಅಡಿ ಆಳದಲ್ಲಿದ್ದ ಕಾರಿಗೆ ಹಗ್ಗಕಟ್ಟಿ ಕ್ರೇನ್ ಮೂಲಕ ನಾಲೆಯಿಂದ ಕಾರನ್ನು ಮೇಲೆಕ್ಕೆತ್ತಿದರು. ಕಾರಿನಲ್ಲಿ ನಾಪತ್ತೆಯಾಗಿದ್ದ ಅಸ್ಲಂ ಪಾಷ ಹಾಗೂ ಪೀರ್ ಖಾನ್ ಮೃತದೇಹ ದೊರಕಿತು. ಮೂವರ ಮೃತದೇಹಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು. ಮೃತದೇಹಗಳನ್ನು ಕಾರಿನಿಂದ ಹೊರತೆಗೆಯುತ್ತಿದ್ದಂತೆ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಸ್ವ-ಸಹಾಯ, ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ ಒತ್ತಾಯ
ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, “ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದು ದುರ್ದೈವದ ಸಂಗತಿ. ಈ ಘಟನೆ ನಡೆದಿರುವುದು ನೋವು ತಂದಿದೆ. ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ ಮಾಡುವ ಸಂಬಂಧ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ” ಎಂದರು.
ಸ್ಥಳಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗಮಿಸಿ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ತಡೆಗೋಡೆ ನಿರ್ಮಾಣ ಸಂಬಂಧ ಸರ್ಕಾರದ ಜತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.