ಕಳೆದ ಮೂರು ತಿಂಗಳಿನಿಂದ ಕೂಲಿಕಾರರಿಗೆ ಕೆಲಸ ನೀಡದೆ ಕೂಲಿಕಾರರ ವಿರೋಧಿಯಾಗಿ ಅಹಂಕಾರದಿಂದ ವರ್ತಿಸುತ್ತಿರುವ ಮಂಡ್ಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ ಆರ್ ಅವರನ್ನು ಕೂಡಲೇ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದ)ದ ಜಿಲ್ಲಾ ಕಾರ್ಯದರ್ಶಿ ಟಿ ಎಲ್ ಕೃಷ್ಣೇಗೌಡ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಜನತೆಯ, ಅದರಲ್ಲೂ ಬಡವರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ಈ ಅಧಿಕಾರಿಗೆ ಜನರೊಡನೆ ನೇರವಾಗಿ ಸಂಪರ್ಕವಿರುವ ಯಾವುದೇ ಹುದ್ದೆ ನೀಡಬಾರದು. ಅವರು ಮಂಡ್ಯ ಜಿಲ್ಲೆಯ ನಿವಾಸಿಯಾಗಿದ್ದು, ಸ್ಥಳೀಯರೂ ಆಗಿದ್ದಾರೆ. ಸ್ಥಳೀಯರನ್ನು ಇಂತಹ ಜವಾಬ್ದಾರಿ ಹುದ್ದೆಯಲ್ಲಿ ಮುಂದುವರೆಸಬಾರದು” ಎಂದು ಆಗ್ರಹಿಸಿದರು.
“ಜುಲೈ 04ರಂದು ಕೆಲಸ ಮತ್ತು ಕೂಲಿಗಾಗಿ ಕೂಲಿಕಾರರು ತಮ್ಮ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಒಂದು ಮನವಿ ಪತ್ರ ಸ್ವೀಕರಿಸಲು ಸತಾಯಿಸಿ ಮಧ್ಯಾಹ್ನದವರೆಗೆ ಕೂಲಿಕಾರರನ್ನು ಬಿಸಿಲಿನಲ್ಲಿ ಕಾಯಿಸಿದ್ದಾರೆ. ನಂತರ ಪ್ರತಿಭಟನಾ ಸ್ಥಳಕ್ಕೆ ಬರಲು ನಿರಾಕರಿಸಿದ ಸಿಇಒ, ಸಂಘದ ಮುಖಂಡರನ್ನು ಕಾರಿಡಾರ್‌ನಲ್ಲೇ ನಿಲ್ಲಿಸಿಕೊಂಡು ಹಿರಿಯ ಮುಖಂಡರ ಜತೆಗೆ ಏಕವಚನ ಮತ್ತು ಅಹಂಕಾರದಿಂದ ಮಾತನಾಡಿದ ನಂದಿನಿ ಐಎಎಸ್ ಅವರ ವರ್ತನೆ ಖಂಡನೀಯ” ಎಂದರು.
“ಪ್ರತಿಭಟನೆ ಸಂದರ್ಭದಲ್ಲಿ ನಡೆದ ಮಾತಿನ ಚಕಮಕಿಯನ್ನು ನೆಪ ಮಾಡಿಕೊಂಡು ಇಂದು ಇಡೀ ಜಿಲ್ಲೆಯ ಪಂಚಾಯಿತಿ ನೌಕರರನ್ನು ಬಲವಂತವಾಗಿ ಮಂಡ್ಯಕ್ಕೆ ಕರೆಸಿಕೊಂಡು ಪ್ರತಿಭಟನೆ ನಡೆಸಿರುವುದು ಅಧಿಕಾರದ ದುರುಪಯೋಗವಾಗಿದೆ. ತಮ್ಮ ಅಧಿಕಾರವನ್ನು ಈ ರೀತಿಯಾಗಿ ಯಾವುದೇ ಅಧಿಕಾರಿ ದುರುಪಯೋಗ ಮಾಡಿಕೊಂಡಿರಲಿಲ್ಲ. ಸಿಇಒ ಅವರಿಗೆ ರಾಜಕಾರಣ ಮಾಡುವ ಇಚ್ಚೆಯಿದ್ದರೆ ಹುದ್ದೆಯನ್ನು ತೊರೆದು ನೇರವಾಗಿ ರಾಜಕಾರಣ ಮಾಡಲಿ, ಅದು ಬಿಟ್ಟು ಹಿಂಬಾಗಿಲ ರಾಜಕಾರಣ ಮತ್ತು ಭವಿಷ್ಯದ ರಾಜಕೀಯ ಮಹತ್ವಾಕಾಂಕ್ಷೆಗೆ ಜಿಲ್ಲೆಯನ್ನು ಬಲಿಕೊಡಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜುಲೈ 9ರ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನಲೆ ಎಸ್ ಕೆ ಎಂ ಮತ್ತು ಜೆಸಿಟಿಯು ಪೋಸ್ಟರ್ ಬಿಡುಗಡೆ
“ಇಂತಹ ಜನ ವಿರೋಧಿ, ಅಧಿಕಾರ ದುರುಪಯೋಗದ ಅಧಿಕಾರಿಯನ್ನು ಜಿಲ್ಲೆಯಲ್ಲಿ ಮುಂದುವರೆಸಿದರೆ ಸಿಪಿಐಎಂ ತೀವ್ರವಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ” ಎಂದು ಎಚ್ಚರಿಕೆ ನೀಡಿದರು.