ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀರಂಗಪಟ್ಟಣದಲ್ಲಿ ರಸ್ತೆಯಲ್ಲಿ ಇಕ್ಕೆಲದಲ್ಲಿ ಎರಡು ನೆಲಮಾಳಿಗೆ ಪತ್ತೆಯಾಗಿದ್ದು, ಸುಸ್ಥಿತಿಯಲ್ಲಿವೆ.
ಸರಿ ಸುಮಾರು ಆರು ಅಡಿ ಅಗಲ, 15 ಅಡಿ ಉದ್ದವಿರುವ ಚುರ್ಕಿ ಗಾರೆ, ಇಟ್ಟಿಗೆ ಹಾಗೂ ಕಲ್ಲುಗಳಿಂದ ನಿರ್ಮಾಣವಾಗಿದ್ದು, ಈಗಲು ಯಾವುದೇ ಮಳೆ, ಗಾಳಿಗೆ ಜಗ್ಗದೆ ಶಿಥಿಲಗೊಳ್ಳದೆ ಇರುವುದು ವಿಶೇಷ. ಆದರೆ ಅವುಗಳನ್ನು ಗಿಡ ಗಂಟಿಗಳು ಬೆಳೆದು ಆವರಿಸಿಕೊಂಡು ಹುದುಗಿ ಹೋಗಿದ್ದವು. ಇವುಗಳನ್ನೆಲ್ಲ ತೆರವುಗೊಳಿಸಿ ಕೋಟೆಯ ನೆಲಮಾಳಿಗೆಯನ್ನು ಸಂರಕ್ಷಿಸುವ ಸಲುವಾಗಿ ಸ್ವಚ್ಛತಾ ಕಾರ್ಯವನ್ನು ವಿವಿಧ ಸಂಘಟನೆಗಳು ಕೈಗೊಂಡಿದ್ದವು.
ತಮ್ಮ ಕಾರ್ಯದ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಿ.ಎಸ್.ವೆಂಕಟೇಶ್ “ಇಲ್ಲಿಗೆ ಬರಲು ಆಗದಂತೆ ಬೆಳೆದುಕೊಂಡಿದ್ದ ತುಂಬಾ ಗಿಡ ಗಂಟೆಗಳನ್ನು ಮಕ್ಕಳ ಜೊತೆಗೂಡಿ ತೆರವುಗೊಳಿಸಿದ್ದೇವೆ. ಸುಮಾರು ಒಂದು ತಿಂಗಳಿನಿಂದ ತಿಳಿಸುತ್ತಾ ಬಂದಿದ್ದರೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ. ಈಗಲಾದರು ಬಂದು ಇದನ್ನು ರಕ್ಷಣೆ ಮಾಡಿ, ವರದಿ ಮಾಡಿ ಸರಕಾರಕ್ಕೆ ಕಳುಹಿಸಿ ಸೂಕ್ತವಾದ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಅಚೀವರ್ ಅಕಾಡೆಮಿಯ ಸ್ಥಾಪಕರಾದ ಡಾ. ರಾಘವೇಂದ್ರ ಮಾತನಾಡಿ, “ಎರಡು ತಿಂಗಳ ಹಿಂದೆ ಪ್ರಜಾವಾಣಿಯಲ್ಲಿ ಗಣಂಗೂರು ನಂಜೇಗೌಡರು ಬರೆದ ಬರಹದಲ್ಲಿ ಈ ಜೋಡಿ ನೆಲ ಮಾಳಿಗೆಗಳ ಬಗ್ಗೆ ತಿಳಿದು ಅವರನ್ನು ಕರೆದುಕೊಂಡು ಇಲ್ಲಿ ನೋಡಲು ಬಂದಾಗ ಇಲ್ಲಿಗೆ ಬರಲಾಗದಂತೆ ಗಿಡಗಂಟಿಗಳು ನಿಂತಿದ್ದವು. ಹಾಗಾಗಿ ಇವತ್ತು ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ” ಎಂದರು.
ಶ್ರೀರಂಗಪಟ್ಟಣದ ಸಮರ್ಪಣಾ ಟ್ರಸ್ಟ್‌ನ ಅಧ್ಯಕ್ಷರಾದ ಜಯಶಂಕರ್ ಮಾತನಾಡಿ,”ನೆಲಮಾಳಿಗೆಯ ಒಳಗೆ ತುಂಬಾ ಅದ್ಭುತವಾದ ಕಟ್ಟಡವನ್ನು ಕಟ್ಟಿದ್ದಾರೆ. ಕಲ್ಲಿನ ಕಂಬಗಳನ್ನು ನೆಟ್ಟು ಅದರ ಮೇಲೆ ಚುರ್ಕಿ ಗಾರೆಯನ್ನು ಹಾಕಿ ಕಟ್ಟಿ ನಿಲ್ಲಿಸಿದ್ದಾರೆ. ಸೈನಿಕರು ಪಾಳಿ ಬದಲಿಸುತ್ತಿದ್ದ ಜಾಗ ಇದು ಎಂದು ಸಂಶೋಧಕರಿಂದ ಕೇಳಿದ್ದೇವೆ” ಎಂದರು.
“ವರ್ತುಲಾಕಾರದ ಕೋಟೆಗೆ ಚೇಂಬರುಗಳನ್ನು ಹಾಕಿ, ಶತ್ರು ಸೈನಿಕರನ್ನು ಇಲ್ಲಿ ನಿಂತು ಕಾವಲು ಕಾಯುತ್ತಿದ್ದರು. ಕೆಳಭಾಗದಲ್ಲಿ ಶಸ್ತ್ರಾಸ್ತ್ರಗಳನ್ನು ಇಡುತ್ತಿದ್ದ ಕುರುಹುಗಳನ್ನು ಇಲ್ಲಿ ನೋಡಬಹುದು. ಇಷ್ಟು ಮಾಹಿತಿ ನಮಗೆ ತಿಳಿದುಬಂದಿದೆ. ಇಲ್ಲಿ ಸಂಶೋಧನೆ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಹೊರ ತೆಗೆಯಬೇಕು” ಎಂದು ಪುರಾತತ್ವ ಇಲಾಖೆಯವರನ್ನು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಹುದುಗಿದ್ದ ಮಣ್ಣಿನ ಗುಡ್ಡೆಯಲ್ಲಿ ನೆಲಮಾಳಿಗೆ ಪತ್ತೆ
ಶೇಷಾದ್ರಿಪುರ ಕಾಲೇಜಿನ ವಿದ್ಯಾರ್ಥಿಗಳು, ಪರಿವರ್ತನಾ ಶಾಲೆಯ ತಂಡ, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಶ್ರೀರಂಗಪಟ್ಟಣದ ಪ್ರಜ್ಞಾವಂತರ ವೇದಿಕೆಯ ಸಿ.ಎಸ್.ವೆಂಕಟೇಶ್, ಸಮರ್ಪಣಾ ಟ್ರಸ್ಟಿನ ಜಯಶಂಕರ್ ಹಾಗೂ ಅವರ ತಂಡದವರು ಸ್ವಚ್ಚತಾ ಕಾರ್ಯದಲ್ಲಿ ಕೈ ಜೋಡಿಸಿ, ಪಾಲ್ಗೊಂಡಿದ್ದರು.
The good message thought to public