ಅಕ್ಟೋಬರ್‌ನಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಸಮಾವೇಶ ನಡೆಯುತ್ತಿದ್ದು, ನೀರಾವರಿ ಸೌಲಭ್ಯವನ್ನು ಸಮರ್ಪಕವಾಗಿ ಎಲ್ಲ ರೈತರಿಗೆ ಸಮಾನವಾಗಿ ಹಂಚಿಕೆ ಮಾಡುವುದು, ನೀರು ಪೋಲು ತಪ್ಪಿಸುವುದು, ವಿತರಣಾ ಮತ್ತು ಹೊಲಗಾಲುವೆಗಳ ದುರಸ್ತಿ, ನೀರಿನ ಕರ ವಸೂಲಾತಿ, ಮುಖ್ಯವಾಗಿ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವುದು, ನೀರು ಬಳಕೆದಾರರ ಸಹಕಾರ ಸಂಘಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವುದು ಈ ಸಮಾವೇಶದ ಮುಖ್ಯ ಉದ್ದೇಶಗಳಾಗಿವೆ ಎಂದು ಶಾಸಕ ಮಧು ಜಿ ಮಾದೇಗೌಡ ತಿಳಿಸಿದರು.
ಮಂಡ್ಯದಲ್ಲಿ ನಡೆದ ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ಅಕ್ಟೋಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ಸಮಾವೇಶ ಆಯೋಜಿಸಲು ನಾವೆಲ್ಲರೂ ಸೇರಿ ಒಮ್ಮತದಿಂದ ತೀರ್ಮಾನಿಸಿದ್ದೇವೆ. ಸಮಾವೇಶಕ್ಕೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರನ್ನು ಆಹ್ವಾನಿಸಿ, ನೀರು ಬಳಕೆದಾರರ ಸಹಕಾರ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದಿಂದ ಪರಿಹಾರ ಪಡೆಯಲು ತೀರ್ಮಾನಿಸಲಾಗಿದೆ” ಎಂದರು.
“ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ನೀರು ಬಳಕೆದಾರರ ಸಹಕಾರ ಸಂಘಗಳು ಸಕ್ರಿಯವಾಗಿಲ್ಲ. ಸಂಘಗಳನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. ರೈತರಿಗೆ ನೀರು ಬಳಕೆದಾರರ ಸಹಕಾರ ಸಂಘದ ಮಹತ್ವವನ್ನು ತಿಳಿಸಲು ಜಿಲ್ಲಾದ್ಯಂತ ರೈತರ ಸಭೆಗಳನ್ನು ಏರ್ಪಡಿಸುವುದು ಸೂಕ್ತ” ಎಂದು ಅಭಿಪ್ರಾಯಪಟ್ಟರು.
“ಕೆಆರ್‌ಎಸ್ ಅಣೆಕಟ್ಟೆ ತುಂಬಿದ್ದರೂ, ಕೆಳಭಾಗದ ರೈತರಿಗೆ ಸುಗಮವಾಗಿ ನೀರು ತಲುಪುವಲ್ಲಿ ದೋಷ ಕಂಡುಬರುತ್ತಿದೆ. ನೀರಿನ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆ ಮಾಡಿದರೆ, ಇಂದಿನ ಜಲ ಸಂಕಷ್ಟವನ್ನು ನಿವಾರಿಸಲು ಸಾಧ್ಯವಾಗುತ್ತಿತ್ತು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನೀರು ಬಳಕೆದಾರರ ಸಹಕಾರ ಸಂಘಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
“ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸರ್ಕಾರವು ಪ್ರತಿ ವರ್ಷವೂ ₹1 ಲಕ್ಷ ಕಾರ್ಯಾನುದಾನ ಮತ್ತು ಏಕಕಾಲಿಕ ನಿರ್ವಹಣಾ ಅನುದಾನವನ್ನು ನೀಡುತ್ತಿದೆ. ಆದರೆ, ಈ ಅನುದಾನವು ಪ್ರಸ್ತುತ ಅಗತ್ಯಗಳಿಗೆ ಪೂರಕವಾಗುತ್ತಿಲ್ಲ. ಹಾಗಾಗಿ ಈ ಅನುದಾನವನ್ನು ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು” ಎಂದು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಗದಗ | ಬೆನಕನಕೊಪ್ಪ ಗ್ರಾಮದಲ್ಲಿ ರೈತ ಸಮಾವೇಶ
ಕೆಆರ್‌ಎಸ್ ಫೆಡರೇಶನ್ ಅಧ್ಯಕ್ಷ ಕೆ ಎಲ್ ದೊಡ್ಡಲಿಂಗೇಗೌಡ, ಬಿ ಎನ್ ನಂಜೇಗೌಡ, ನಿರ್ದೇಶಕರಾದ ಎಚ್ ಕೃಷ್ಣ, ಬಿ ಎಂ ರಘು, ವಿ ಕೆ ಚನ್ನಬಸವೇಗೌಡ, ಎಚ್ ಡಿ ಮಹದೇವು, ಸಿಇಒ ಬಿ ಸುರೇಶ್ ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಇದ್ದರು.