ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಾಲಿಗೆ ಹರಿಬಿಟ್ಟಿರುವ, ಅಶ್ಲೀಲವಾಗಿ ನಿಂದಿಸಿರುವ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ನಾಲಿಗೆಗೆ ಲಗಾಮು ಹಾಕಬೇಕು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತ ಬಾರದಂತೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿ ಮಂಡ್ಯದ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
“ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ಬಳಿ ಹಲವು ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದು, ”ಸಮ್ಮೇಳನದಲ್ಲಿ ಭಾಷಣ ಮಾಡಲು ಸಿ ಟಿ ರವಿಗೆ ಆಹ್ವಾನ ನೀಡಲಾಗಿದೆ. ಆತನಿಗೆ ಮಾತನಾಡಲು ವೇದಿಕೆಯಲ್ಲಿ ಅವಕಾಶ ಕೊಡಬಾರದು. ಆತನು ಸಮ್ಮೇಳನಕ್ಕೆ ಬಾರದಂತೆ ನಿರ್ಬಂಧ ಹೇರಬೇಕು” ಎಂದು ಒತ್ತಾಯಿಸಿದ್ದಾರೆ.
”ಮಾನವ ಪ್ರೀತಿಯ ಮಂಡ್ಯದ ಮಣ್ಣಿನ ಮೇಲೆ ಮಹಿಳಾ ವಿರೋಧಿಗಳು ಕಾಲಿಡಬಾರದು. ನೀಚ ನಾಲಿಗೆಯ ಸಿ ಟಿ ರವಿ ಭಾಷಣದ ಅಗತ್ಯ ಮಂಡ್ಯಕ್ಕಿಲ್ಲ. ಮಹಿಳಾ ವಿರೋಧಿ ಸಿ ಟಿ ರವಿ ಮಂಡ್ಯಕ್ಕೆ ಕಾಲಿಡಬಾರದು” ಎಂದು ಎಚ್ಚರಿಕೆ ನೀಡಿದ್ದಾರೆ.
”ಬುದ್ದ, ಬಸವ, ಅಂಬೇಡ್ಕರ್, ಸಾವಿತ್ರಿ ಬಾ ಫುಲೆ ಹಾಗೂ ಗಾಂಧಿ ಕಂಡ ದೇಶದಲ್ಲಿ ದೇಶ ವಿರೋಧಿ, ಮಹಿಳಾ ವಿರೋಧಿ, ಸಾಮರಸ್ಯ ವಿರೋಧಿಗಳಿಗೆ ಅವಕಾಶ ನೀಡಬಾರದು. ಗೋ ಬ್ಯಾಕ್ ಸಿ ಟಿ ರವಿ” ಎಂದು ಫಲಕ ಹಿಡಿದು ಪ್ರತಿಭಟಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಹಿಳಾ ಮುನ್ನಡೆಯ ಪೂರ್ಣಿಮ, ಕರ್ನಾಟಕ ಜನಶಕ್ತಿಯ ಅಂಜಲಿ, ಕೃಷ್ಣ ಪ್ರಕಾಶ್ ಸೇರಿದಂತೆ ಹಲವರು ಇದ್ದರು.