ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕು ಮಾಕವಳ್ಳಿ ಬಳಿಯಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಸುತ್ತಮುತ್ತಲಿನ ರೈತರು ಹಾಗೂ ಜನರಿಗೆ ಅನುಕೂಲ ಮಾಡಿಕೊಡುವುದಕ್ಕಿಂತ ಸಮಸ್ಯೆಗಳನ್ನೇ ಹೆಚ್ಚಾಗಿ ಸೃಷ್ಟಿಸುತ್ತಿದೆ. ಸಕ್ಕರೆ ಕಾರ್ಖಾನೆಯ ಸಮೀಪದಲ್ಲಿಯೇ ಮಾಣಿಕನಹಳ್ಳಿ, ಬೀಚನಹಳ್ಳಿ, ರಾಮನಹಳ್ಳಿ, ಚೌಡೆನಹಳ್ಳಿ, ಕಾರಿಗನಹಳ್ಳಿ, ಲಿಂಗಾಪುರ, ಕೃಷ್ಣಾಪುರ, ಹಿರಿಕಳಲೆ, ಗಾಂಧಿನಗರ, ಕರೋಟಿ, ಮಾಕವಳ್ಳಿ,
ಕುಂದನಹಳ್ಳಿ, ಹೆಗ್ಗಡಹಳ್ಳಿ, ಮಲ್ಲೇನಹಳ್ಳಿ, ವಡ್ಡರಹಳ್ಳಿ, ಕುಪ್ಪಳ್ಳಿ, ನಾಟನಹಳ್ಳಿ,ಬಂಡಿಹೊಳೆ ಗ್ರಾಮಗಳಿವೆ. ಈ ಎಲ್ಲ ಗ್ರಾಮಗಳೂ ಕಾರ್ಖಾನೆಯಿಂದ ಹೊಮ್ಮವ ವಿಷಕಾರಿ ಹೊಗೆ, ಬೂದಿ, ಮಡ್ಡಿಯಿಂದಾಗಿ ಅಕ್ಷರಶಃ ನಲುಗಿಹೋಗಿವೆ. ಆರೋಗ್ಯ ಸಮಸ್ಯೆಯ ಆತಂಕದಲ್ಲಿ ಈ ಎಲ್ಲ ಹಳ್ಳಿಗಳ ಜನರು ಜೀವನ ದೂಡುತ್ತಿದ್ದಾರೆ. ಜನರ ಸುಸ್ಥರ ಆರೋಗ್ಯ ಮತ್ತು ಬದುಕಿಗಾಗಿ ಕಾರ್ಖಾನೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿಯಮಗಳನ್ನು ಪಾಲಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ.
ಕಾರ್ಖಾನೆಯ ಸುತ್ತಲಿನ ಪ್ರದೇಶಗಳಲ್ಲಿ ಬೆಳೆದ ಬೆಳೆಗಳ ಮೇಲೆ ಬೂದಿ ಬಿದ್ದು, ಬೆಳೆ ಕಪ್ಪಾಗುತ್ತಿದೆ. ಹಲವೆಡೆ ಬೆಲೆ ಹಾನಿಯಾಗಿದೆ. ಇನ್ನು ಮನೆಗಳನ್ನೂ ಬೂದಿ ಆವರಿಸಿಕೊಳ್ಳುತ್ತಿದ್ದು, ಜನರಿಗೆ ಉಸಿರಾಟವೇ ಕಷ್ಟರವಾಗಿದೆ. ವಿಷಗಾಳಿ, ಬೂದಿ, ಕೊಳಚೆ ನೀರಿನಿಂದ ಅನಾರೋಗ್ಯದ ಆತಂಕವಿದೆ.
ಮಕ್ಕಳಿಗೆ, ಬಾಣಂತಿಯರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹುಟ್ಟುವ ಮಕ್ಕಳೂ ಕೂಡ ಅನಾರೋಗ್ಯದಿಂದ ಹುಟ್ಟಿತ್ತಿವೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರನ್ನು ಕುಡಿದರೆ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಆಸ್ಪತ್ರೆಗೆ ಹೋಗುವವರ ಸಂಖೆಯು ಹೆಚ್ಚಿದೆ. ಆದರೂ, ಕಾರ್ಖಾನೆಯ ವಿರುದ್ಧ ಆರೋಗ್ಯ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ, ಸರ್ಕಾರವಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ. ಮಾಣಿಕನಹಳ್ಳಿ ಗ್ರಾಮದ ದೇವರಾಜು ಮತ್ತು ಚೆಲುವಯ್ಯ ಅವರ ಜಮೀನಿಲ್ಲಿದ್ದ ಪಂಪ್‌ಸೆಟ್‌ಗಳು ನೀರಿಲ್ಲದೆ ಬರಿದಾಗಿವೆ. ಇದಕ್ಕೆ ಕಾರಣ ಭೂಮಿಗೆ ಸೇರುತ್ತಿರುವ ಕಾರ್ಖಾನೆಯ ವಿಷಮಯ ತ್ಯಾಜ್ಯ ಎನ್ನುತ್ತಾರೆ ಗ್ರಾಮಸ್ಥರು.
ಕುಡಿಯುವ ನೀರನ್ನು ಸಂಗ್ರಹಿಸಿದರೆ ಕೇವಲ 24 ಗಂಟೆಯ ಅಂತರದಲ್ಲಿ ಬಿಳಿ ಪದರದಂತಹ ಮಡ್ಡಿ ನೀರಿನ ಮೇಲೆ ತೇಲುತ್ತದೆ. ನಂತರ ವಾಸನೆ ಬರಲು ಆರಂಭಿಸುತ್ತದೆ. ಆ ನೀರು ಕುಡಿಯುವ ಮಾತ್ರವಲ್ಲ, ದೈನಂದಿನ ಬಳಕೆಗೂ ಯೋಗ್ಯವಾಗಿಲ್ಲ.
ಇನ್ನು, ಕಾರ್ಖಾನೆಯ ತ್ಯಾಜ್ಯದ ನೀರನ್ನು ಶುದ್ಧೀಕರಿಸದೆ ನೇರವಾಗಿ ಹೇಮಾವತಿ ನದಿಗೆ ಹರಿಸಲಾಗುತ್ತಿದೆ. ವಿಷಯುಕ್ತ ತ್ಯಾಜ್ಯದ ನೀರು ನದಿಯ ಒಡಲು ಸೇರುತ್ತಿದೆ. ಜಲಚರಗಳು ಸಾಯುತ್ತಿವೆ. ಅಲ್ಲದೆ, ಪಟ್ಟಣಗಳಿಗೆ ಇದೇ ನದಿಯ ನೀರು ಕುಡಿಯಲು ಪೂರೈಕೆಯಾಗುತ್ತಿದೆ. ಹೇಮಾವತಿ ನದಿ ಸೇರುವ ತ್ಯಾಜ್ಯವು ನದಿ ನೀರಿನೊಂದಿಗೆ ಕಾವೇರಿ ನದಿಯನ್ನೂ ಸೇರುತ್ತಿದೆ.
ಕಾರ್ಖಾನೆಯು ಕಬ್ಬಿನ ಮಡ್ಡಿಯನ್ನು ಗೊಬ್ಬರ ಮಾಡದೆ ಜನರಿಗೆ ಮಾರುತ್ತಿದೆ. ಇದರ ಬಗ್ಗೆ ತಿಳಿಯದ ರೈತ ತನ್ನ ಭೂಮಿಗೆ ರಸಾಯನಿಕಯುಕ್ತ ಮಡ್ಡಿಯನ್ನು ತಂದು ಜಮೀನಿಗೆ ಹಾಕುತ್ತಿದ್ದಾರೆ. ಇದರಿಂದಾಗಿ, ಭೂಮಿಯ ಫಲವತ್ತತೆಯೂ ಕುಸಿಯುತ್ತಿದೆ. ರಸಾಯನಿಕವು ಮಣ್ಣು ಸೇರಿ, ಬರಡು ಭೂಮಿಯಾಗುತ್ತದೆ ಎಂಬುದು ಕೃಷಿ ಇಲಾಖೆಗೆ ಗೊತ್ತಿದೆ. ಆದರೂ, ಕೃಷಿ ಇಲಾಖೆ ತನಗೇನು ಗೊತ್ತಿಲ್ಲ. ತನಗೂ ಕಾರ್ಖಾನೆ ಸೃಷ್ಠಿಸುತ್ತಿರುವ ಸಮಸ್ಯೆಗೂ ಸಂಬಂಧವಿಲ್ಲ ಎಂಬಂತೆ ಕೈಕಟ್ಟಿ ಕುಳಿತಿದೆ.
ಕಾರ್ಖಾನೆ ಮಡ್ಡಿಯನ್ನ ವೈಜ್ಞಾನಿಕವಾಗಿ ಸುಣ್ಣ, ಮಣ್ಣಿನಂತೆ ಹುಡಿಯಾಗುವ ಕಲ್ಲು,ಇನ್ನಿತರೆ ವಸ್ತುಗಳನ್ನು ಬಳಸಿ, ಕಾಂಪೋಸ್ಟ್ ಮಾಡಿ, ರೈತರ ಬಳಕೆಗೆ ಕೊಡಬೇಕೆಂಬ ನಿಯಮಗಳಿವೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿರುವ ಕಾರ್ಖಾನೆ, ನೇರವಾಗಿ ಮಡ್ಡಿ ಮಾರಾಟ ಮಾಡುತ್ತಿದೆ.
ಈದಿನ.ಕಾಮ್ ಜೊತೆ ಮಾತನಾಡಿದ ಕೆ.ಆರ್ ಪೇಟೆ ತಾಲೂಕು ಉಪ ವಿಭಾಗಾಧಿಕಾರಿ ಜಗದೀಶ್, “ಸಂಭಂದಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಕೃಷಿ ಇಲಾಖೆಯ ವೈಫಲ್ಯ, ತಾಲೂಕು ಮುಖ್ಯಾಧಿಕಾರಿ ಬೇಜವಾಬ್ದಾರಿ ಕಂಡುಬಂದಿದ್ದು, ಸೂಕ್ತವಾಗಿ ಪರಿಶೀಲಿಸಲಾಗುತ್ತದೆ. ಸುತ್ತಮುತ್ತಲಿನ ರೈತರಿಗೆ, ಮನೆಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಕ್ರಮವಹಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ತಹಸೀಲ್ದಾರ್ ನಿಸರ್ಗ ಪ್ರಿಯ ಮಾತನಾಡಿ, “ಸಧ್ಯದಲ್ಲಿಯೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಿಗದಿ ಮಾಡಿ, ತೊಂದರೆಗೊಳಗಾದ ಗ್ರಾಮಗಳ ರೈತರು, ಮುಖಂಡರೊಂದಿಗೆ ಚರ್ಚಿಸುತ್ತೇವೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.