ಮಂಡ್ಯ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಮೂಡಿಸಿ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಡೆಂಘೀ ನಿಯಂತ್ರಣ ಕಾರ್ಯಕ್ರಮ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಒಟ್ಟು 395 ಪ್ರಕರಣಗಳು ದಾಖಲಾಗಿವೆ. ಮಂಡ್ಯ ನಗರ-75, ಮಂಡ್ಯ ಗ್ರಾಮಾಂತರ-147, ಮದ್ದೂರು-61, ಮಳವಳ್ಳಿ-24, ಪಾಂಡವಪುರ-19, ಶ್ರೀರಂಗಪಟ್ಟಣ-34, ಕೆಆರ್‌ಪೇಟೆ-14, ನಾಗಮಂಗಲ-21 ಪ್ರಕರಣಗಳು ದಾಖಲಾಗಿವೆ. ಜಿಲ್ಲಾದ್ಯಂತ ಊರಿನ ಜನರೂ ಕೂಡ ಡೆಂಘೀ ಜ್ವರ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು” ಎಂದರು.
“ಒಂದು ಪ್ರದೇಶದಲ್ಲಿ 100 ಮೀಟರ್ ಅಂತರದಲ್ಲಿ 2 ಡೆಂಘೀ ಪ್ರಕರಣಗಳು ವರದಿಯಾದಲ್ಲಿ ಅಂತಹ ಗ್ರಾಮ ಇಲ್ಲವೇ ಆ ಪ್ರದೇಶವನ್ನು ಡೆಂಘೀ ಹಾಟ್‌ಸ್ಪಾಟ್ ಎಂದು ಗುರುತಿಸಿ ಸಮರೋಪಾದಿಯಲ್ಲಿ ಡೆಂಘೀ ರೋಗ ನಿಯಂತ್ರಣ ಮಾಡಲಾಗುತ್ತದೆ. ತ್ವರಿತ ಜ್ವರ ಸಮೀಕ್ಷೆ ಹಾಗೂ ಈಡಿಸ್ ಲಾರ್ವ ಸಮೀಕ್ಷೆ ಕಾರ್ಯವನ್ನು ನಡೆಸಲಾಗುತ್ತಿದೆ” ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್ ಅವರು ತಿಳಿಸಿದರು.
“ಹಾಟ್‌ಸ್ಪಾಟ್ ಗ್ರಾಮಗಳಲ್ಲಿ ತಾತ್ಕಾಲಿಕ ಫೀವರ್ ಕ್ಲಿನಿಕ್ ತೆರೆದು ಡೆಂಘೀ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಘೀ ಜ್ವರ ಪ್ರಕರಣಗಳಿಗೆ ರಕ್ತ ಪರೀಕ್ಷೆ ಹಾಗೂ ಸಂಶಯಾಸ್ಪದ ಡೆಂಘೀ ಪ್ರಕರಣಗಳಿಂದ ರಕ್ತ ಮಾದರಿ ಸಂಗ್ರಹಿಸಿ ಜಿಲ್ಲಾ ಸರ್ವೆಲೆನ್ಸ್ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈವರೆಗೂ 6 ಫೀವರ್ ಕ್ಲಿನಿಕ್‌ಗಳು ಕರ್ತವ್ಯ ನಿರ್ವಹಿಸುತ್ತಿವೆ” ಎಂದರು.
“ಹಾಟ್‌ಸ್ಪಾಟ್ ವರದಿಯಾದ ಊರುಗಳಲ್ಲಿ ಬಿಪಿಎಲ್ ಕುಟುಂಬದವರಿಗೆ ಬೇವಿನ ಎಣ್ಣೆ ವಿತರಿಸಲಾಗುತ್ತಿದೆ. ಜತೆಗೆ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಡೆಂಘೀ ನಿಯಂತ್ರಿಸುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ, ಅರಿವು ಮೂಡಿಸಿ, ಬೇವಿನ ಎಣ್ಣೆ ವಿತರಿಸಲಾಗುತ್ತಿದೆ. ಈವರೆಗೂ 50 ಎಂಎಲ್‌ನ 4,903 ಬಾಟಲಿಗಳನ್ನು ವಿತರಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರಿನಲ್ಲಿ 600 ಕೋಟಿ ರೂ. ಹೂಡಿಕೆ, 5 ಸಾವಿರ ಉದ್ಯೋಗ ಸೃಷ್ಟಿ: ಸಚಿವ ಪ್ರಿಯಾಂಕ್ ಖರ್ಗೆ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸೀಫ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ನಿವೃತ್ತ ಡಿಹೆಚ್‌ಒ ಡಾ ಮರೀಗೌಡ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ ಕಾಂತಾರಾಜು, ಶಿಕ್ಷಣಾಧಿಕಾರಿ ಚಂದ್ರಕಾಂತ, ಮಿಮ್ಸ್ ವೈದ್ಯ ಡಾ ಹರೀಶ್ ಸೇರಿದಂತೆ ಇತರರು ಇದ್ದರು.