ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

Date:

Advertisements

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು ಅವರು ಸಮಾಜದ ದೀಪ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಸ್ಮರಿಸಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆಯಿಂದ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ಪರಿವರ್ತನೆ ಹರಿಕಾರ ಡಿ.ದೇವರಾಜ ಅರಸುರವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

“ಡಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಅವುಗಳನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಜನರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಡಲು ದೂರದೃಷ್ಟಿ ಹೊಂದಿದ್ದ ವ್ಯಕ್ತಿತ್ವ ಡಿ.ದೇವರಾಜ ಅರಸು ಅವರದ್ದು” ಎಂದು ಹೇಳಿದರು.

Advertisements

“ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಈ ನಾಡಿಗೆ ಹತ್ತಾರು ಕೊಡುಗೆ ಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಹೊತ್ತು ಕೊಟ್ಟ ಹರಿಕಾರ. ಹಿಂದುಳಿದ ವರ್ಗಕ್ಕೆ ಶಕ್ತಿ ನೀಡಿದ ಮಹಾನ್ ವ್ಯಕ್ತಿ. ಅವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ನಾನೂ ಕೂಡ ಇಂದು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆಂದರೆ ಅರಸು ಅವರು ನೀಡಿದ ಕೊಡುಗೆ ಬಿಸಿಎಂ ಹಾಸ್ಟೆಲ್ ಕಾರಣ. ವಿದ್ಯಾರ್ಥಿನಿಲಯ ಕೇವಲ ಕಲ್ಲಿನ ಗೋಡೆಯಲ್ಲ, ಜ್ಞಾನದ ದೇಗುಲ. ಎಷ್ಟೋ ಬಡಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಬಿಸಿಎಂ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪನೆ ಮಾಡಿದ ಮಹಾನ್‌ ಮುತ್ಸದಿ ರಾಜಕಾರಣಿ ಡಿ ದೇವರಾಜ ಅರಸು ಅವರು” ಎಂದರು.

“ಇತಿಹಾಸದ ಕ್ರಾಂತಿಕಾರಕ ಹೆಜ್ಜೆಯಾದ ʼಉಳುವವನೇ ಭೂಮಿಯ ಒಡೆಯʼ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಇತಿಹಾಸದ ದಾಖಲೆಗಳ ಪ್ರಕಾರ 7 ಲಕ್ಷದ 70 ಸಾವಿರಕ್ಕೂ ಹೆಚ್ಚು ಜನರಿಗೆ ಸುಮಾರು 30 ಲಕ್ಷ ಹೆಕ್ಟೇ‌ರ್ ಜಾಗವನ್ನು ಕಲ್ಪಿಸಿ ಉಳುವವರ ಬದುಕಿಗೆ ಆಸೆರೆಯಾಗಿ ನಿಂತ ಏಕೈಕ ನಾಯಕ ಡಿ. ದೇವರಾಜ ಅರಸು ಅವರು” ಎಂದು ತಿಳಿಸಿದರು.

“ಮೊಟ್ಟ ಮೊದಲ ಬಾರಿಗೆ ತಲೆಯ ಮೇಲೆ ಮಲವನ್ನು ಹೊರುವ ಅನಿಷ್ಠ ಪದ್ಧತಿಯನ್ನು ನಿಷೇಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 60 ವರ್ಷ ಮೇಲ್ಪಟ್ಟವರು ಯಾರಿಗೂ ಕೈ ಚಾಚದೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ವೃದ್ದಾಪ್ಯ ವೇತನ ಜಾರಿಗೆ ತಂದರು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಹಾಕಾರಿಯಾಗುವಂತೆ ಭಾಗ್ಯಜ್ಯೋತಿ ಯೋಜನೆ ಮೂಲಕ ಅವರ ಬದುಕಿಗೆ ಬೆಳಕನ್ನು ಚೆಲ್ಲಿದರು” ಎಂದು ಹೇಳಿದರು.

“ವಿಶೇಷವಾಗಿ ಕನ್ನಡ ನಾಡು ನುಡಿ ಬಗ್ಗೆ ಅಪಾರವಾದ ಅಭಿಮಾನವನ್ನು ಡಿ.ದೇವರಾಜ ಅರಸು ಅವರು ಬೆಳೆಸಿಕೊಂಡಿದ್ದರು. 1973ರ ನವೆಂಬರ್ 1ರಂದು ಮೈಸೂರು ಸಂಸ್ಥಾನವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದ ಕೀರ್ತಿಯೂ ಕೂಡ ಅವರಿಗೆ ಸಲ್ಲುತ್ತದೆ” ಎಂದರು.

“ಹಿಂದಿನ ಕಾಲದಲ್ಲಿಯೇ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಿದ್ದರು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದರು. ಮೊಟ್ಟ ಮೊದಲು ಬಾರಿಗೆ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ ವ್ಯಕ್ತಿ ಅವರು. ಅವರ ಆದರ್ಶ, ಚಿಂತನೆ, ಮೌಲ್ಯವನ್ನು ಅರ್ಥ ಮಾಡಿಕೊಂಡು ಅವರಂತೆ ನಾವೆಲ್ಲರೂ ಮುಂದೆ ಸಾಗೋಣ” ಎಂದು ಕರೆ ನೀಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಮಾತನಾಡಿ, “ಬಡವರ ಪರವಾಗಿ ಧ್ವನಿ ಎತ್ತಿದ ವ್ಯಕ್ತಿಗಳನ್ನು ನಾವು ನೆನೆಯಬೇಕು, ಜನ್ಮದಿನಾಚರಣೆಗಳನ್ನು ಹೆಸರಿಗೆ ಮಾತ್ರ ಮಾಡುವಂಥದ್ದಲ್ಲ. ಅ ವ್ಯಕ್ತಿಯ ಸಾಧನೆ, ವಿಚಾರ, ಚಿಂತನೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಮಾಡುವುದು. ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆಯನ್ನು ಕೇವಲ ಅಂಕ ಗಳಿಸಲು ತಿಳಿದುಕೊಳ್ಳಬೇಡಿ, ಅವರ ಸಾಧನೆಗಳನ್ನು ಸದಾ ಕಾಲ ನೆನಪಿಸಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಪರಿಣಾಮಕಾರಿಯಾಗಿ ಪರಿಚಯಿಸಿ” ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂಜಿಆರ್ ಅರಸು ಅವರು ಮಾತನಾಡಿ, “ಜನಸಂಖ್ಯೆ ಹೆಚ್ಚಾಗಿದೆ. ಎಲ್ಲಾರಿಗೂ ವಸತಿಯ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆಯೆಂದು ಬಹುಮಹಡಿ ಪರಿಕಲ್ಪನೆಯನ್ನು ತಂದವರು ಡಿ.ದೇವರಾಜ ಅರಸು ಅವರು” ಎಂದು ಹೇಳಿದರು.

ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ಮಂಡ್ಯ ಜಿಲ್ಲೆಯಲ್ಲಿ ಶೇ.100ರಷ್ಟು ಫಲಿತಾಂಶ ನೀಡಿದ ಬಿಸಿಎಂ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದೇಶಿ ವಿದ್ಯಾ ವಿಕಾಸ್ ಯೋಜನೆಯಡಿ ಜಿಲ್ಲೆಯ ಧನರಾಜ್ ಬಿ ಎಂ ಎಂಬ ವಿದ್ಯಾರ್ಥಿಗೆ ₹10 ಲಕ್ಷದ ಚೆಕ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ, ನಗರಸಭೆ ಅಧ್ಯಕ್ಷ ನಾಗೇಶ್‌, ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸ್ವಾಮಿ, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್‌, ಅಮ್ಮದ್ ಪಾಷಾ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೊರಬ | 30 ಅಡಿ ಬಾವಿಗೆ ಬಿದ್ದ ಆಕಳು ರಕ್ಷಣೆ

ಸೊರಬ, ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಬಾವಿಗೆ ಬಿದ್ದ ಆಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ...

ಶಿವಮೊಗ್ಗ | ಹಳೆ ದ್ವೇಷ : ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಶಿವಮೊಗ್ಗ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿಗೆ ಇನ್ನೊಬ್ಬ ಚಾಕುವಿನಿಂದ ಇರಿದು...

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

Download Eedina App Android / iOS

X