ಮೈಷುಗರ್ ವ್ಯಾಪ್ತಿಯ ರೈತರು ಕಬ್ಬಿನ ಹಣ ಪಾವತಿಯ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗದೇ ತಮ್ಮ ಕಬ್ಬನ್ನು ಇತರೆ ಖಾಸಗಿ ಕಾರ್ಖಾನೆಗಳಿಗೆ ಪರಭಾರೆ ಮಾಡದೇ ಮೈಷುಗರ್ ಕಂಪನಿಗೆ ಸರಬರಾಜು ಮಾಡಿ ಮೈಷುಗರ್ ಕಾರ್ಖಾನೆಯ ಉಳಿವಿಗೆ ಕೈ ಜೋಡಿಸಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.
ಮೈಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ತಮ್ಮ ಕಬ್ಬನ್ನು ಮೈಷುಗರ್ ಕಂಪನಿಗೆ ಸರಬರಾಜು ಮಾಡುವುದು ಮತ್ತು ಕಬ್ಬು ಸರಬರಾಜು ಮಾಡಿದ ಹಣವನ್ನು ಸರಕಾರದ ನಿಯಮದಂತೆ 14 ದಿವಸಗಳ ಒಳಗಾಗಿ ರೈತರಿಗೆ ಕಬ್ಬಿನ ಹಣ ಪಾವತಿಸಲು ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆ ವತಿಯಿಂದ ಕೊಡಿಸುವ ಸಂಬಂಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಸ್ತುತ ಈ ಕಾರ್ಖಾನೆಯು ಈಗಾಗಲೇ ಹಣಕಾಸಿನ ಮುಗ್ಗಟ್ಟಿನಲ್ಲಿದೆ. ಹಣಕಾಸಿನ ಯಾವುದೇ ರೀತಿಯ ಪರ್ಯಾಯ ಏರ್ಪಾಡು ಇಲ್ಲದೆ ಕಾರ್ಖಾನೆ ಪ್ರಾರಂಭಿಸಿ ಕಬ್ಬು ನುರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.
2024-25ನೇ ಸಾಲಿನ ಹಂಗಾಮಿನಲ್ಲಿ ಮೈಷುಗರ್ ಕಾರ್ಖಾನೆ, ಮಂಡ್ಯ ವ್ಯಾಪ್ತಿಯ ರೈತರ ಕಬ್ಬನ್ನು ಇತರೆ ಕಾರ್ಖಾನೆಗಳಾದ ಎನ್‌ಎಸ್‌ಎಲ್ ಷುಗರ‍್ಸ್, ಕೊಪ್ಪ, ಐಸಿಎಲ್ ಷುಗರ‍್ಸ್, ಕೆ.ಆರ್.ಪೇಟೆ, ಶ್ರೀ ಚಾಮುಂಡೇಶ್ವರಿ ಷುಗರ‍್ಸ್, ಕೆ.ಎಂ ದೊಡ್ಡಿ ಹಾಗೂ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ, ಅಳಗಂಚಿ ಮತ್ತು ಕುಂತೂರು ಸಕ್ಕರೆ ಕಾರ್ಖಾನೆಗಳಿಗೆ ರೈತರಾಗಲೀ ಇಲ್ಲವೇ ಕಾರ್ಖಾನೆಯವರಾಗಲೀ ಅನಧಿಕೃತ ಪರಭಾರೆ ಮಾಡಬಾರದೆಂದು ಸೂಚಿಸಿದೆ. ಹಾಗೂ ಅವರಿಗೆ ಮೈಷುಗರ್ ವ್ಯಾಪ್ತಿಯ ಕಬ್ಬು ಖರೀದಿಸದಂತೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಸಕ್ಕರೆ ಕಾರ್ಖಾನೆ ಕಂಪನಿಯು ಮಂಡ್ಯ ಜಿಲ್ಲೆಯ ಶತಮಾನದ ಭವ್ಯ ಇತಿಹಾಸವನ್ನು ಹೊಂದಿದ್ದು, ಸದರಿ ಸಕ್ಕರೆ ಕಾರ್ಖಾನೆೆಯನ್ನು ಉಳಿಸುವುದು ನಮ್ಮೆಲ್ಲರ ಹೊಣೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿ ಮೈಸೂರು ಶುಗರ್ ಕಂಪನಿ ಲಿ ಮಂಡ್ಯ ಕಾರ್ಖಾನೆಯ ವ್ಯಾಪ್ತಿಯಲ್ಲಿನ ಕಬ್ಬುನ್ನು ಒಪ್ಪಿಗೆ ಮತ್ತು ಒಪ್ಪಿಗೆ ರಹಿತ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಪರಭಾರೆಯಾದರೆ ಕಾರ್ಖಾನೆಯನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಬ್ಬು ಬೆಳೆಗಾರರು ಕಬ್ಬು ಸರಬರಾಜು ಮಾಡುವ ಮೂಲಕ ಸಹಕರಿಸಬೇಕು ಎಂದು ಕೋರಿದ್ದಾರೆ.
