ಮಂಡ್ಯದಲ್ಲಿ ಕಾವೇರಿ ಆರತಿ ಮಾದರಿಯ ಕಾರ್ಯಕ್ರಮ ಬೇಡ. ದಸರಾ ಉತ್ಸವದ ಸಂದರ್ಭದಲ್ಲಿ ಹಿಂದಿ ಭಾಷೆಗೆ ಅವಕಾಶ ನೀಡದಂತೆ ದ್ರಾವಿಡ ಕನ್ನಡ ಚಳುವಳಿಯ ಹನಕೆರೆ ಅಭಿಗೌಡ ಒತ್ತಾಯಿಸಿದ್ದಾರೆ.
ಸೋಮವಾರ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರ್ ರೋಹಿಣಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟಿಸಿದರು.
ದ್ರಾವಿಡ ಕನ್ನಡ ಚಳುವಳಿಯ ಹನಕೆರೆ ಅಭಿಗೌಡ ಮಾತನಾಡಿ, “ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಕೆಲವು ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಉತ್ತರ ಭಾರತದ ಗಂಗಾ ಆರತಿಯನ್ನು ಅಧ್ಯಯನ ಮಾಡಿ ಅದೇ ಮಾದರಿಯಲ್ಲಿ ಕಾವೇರಿ ಆರತಿ ಮಾಡುವುದಾಗಿ ಯೋಜಿಸುತ್ತಿರುವುದು ನಿರಾಶಾದಾಯಕ. ಗಂಗಾ ಮಾತ್ರ ಪವಿತ್ರವಲ್ಲ, ನಮ್ಮ ತುಂಗಾ ನದಿಯೂ ಪವಿತ್ರ” ಎಂದು ಹೇಳಿದರು.
“ಈ ಹಿಂದಿ ಆಚಾರ-ಆಚರಣೆಗಳ ಹೇರಿಕೆ, ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕೆ ಹಾನಿ ಉಂಟುಮಾಡುತ್ತಿದೆ. ಭಾರತ ಒಕ್ಕೂಟದಲ್ಲಿ ಹಿಂದಿ ಮತ್ತು ಸಂಸ್ಕೃತ ಆಚರಣೆಗಳಿಗೆ ಬೃಹತ್ ಮೊತ್ತದ ಹಣ ವ್ಯಯವಾಗುತ್ತಿದೆ. ಕರ್ನಾಟಕ ಸರ್ಕಾರವೂ ಈ ಮಾರ್ಗದಲ್ಲೇ ಹೋಗುವುದನ್ನು ತಕ್ಷಣವೇ ನಿಲ್ಲಿಸಬೇಕು,” ಎಂದು ಒತ್ತಿ ಹೇಳಿದರು.
ಕಾವೇರಿ ನದಿತೀರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಬಾರದು, ಬದಲಿಗೆ ಪ್ರತೀ ದಸರಾ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕನ್ನಡ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ಬಸವಣ್ಣನವರ ವಚನಗಳ ಚರ್ಚೆಯನ್ನು ಆಯೋಜಿಸಬೇಕು. ಈ ಮೂಲಕ ಅಸ್ಪೃಶ್ಯತೆ, ಜಾತಿ ಅಸಮಾನತೆ, ಮತ್ತು ನದಿಯ ನೀರನ್ನು ಕಲುಷಿತಗೊಳಿಸುವ ಕಾರ್ಯಕ್ರಮಗಳನ್ನು ತಡೆಯಲು ಸಾಧ್ಯ ಎಂದು ತಿಳಿಸಿದರು.

“ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಹಿಂದಿ ಕಲಾವಿದರಿಗೆ, ಗುತ್ತಿಗೆದಾರರಿಗೆ ಮತ್ತು ಕೆಲಸದವರಿಗೆ ಅವಕಾಶ ನೀಡಬಾರದು. ನಾವು ನಮ್ಮ ಕನ್ನಡ ನುಡಿ ಮತ್ತು ಸಂಸ್ಕೃತಿಯನ್ನೇ ಉತ್ತೇಜಿಸಬೇಕು. ಇದರಲ್ಲಿ ಯಾವುದೇ ರೀತಿಯ ಹಿಂದಿ ಭಾಷೆಯ ಮಿತಿಮೀರುವ ಆಕ್ರಮಣವನ್ನು ತಡೆಯಬೇಕು” ಎಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ, ನಮ್ಮ ಸ್ಥಳೀಯ ಸಂಸ್ಕೃತಿಗೆ, ನುಡಿಗೆ ಹಿನ್ನಡೆಯಾಗುವ ಕಾರ್ಯಗಳನ್ನು ಅನುಮತಿಸಬಾರದು. ಕರ್ನಾಟಕ ಸರ್ಕಾರವು ಈ ರೀತಿಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈ ಮನವಿ, ಮಂಡ್ಯ ಜಿಲ್ಲೆಯ ಜನರ ಭಾವನೆಗಳ ಪ್ರತಿಬಿಂಬಿವಾಗಿದೆ. ಜಿಲ್ಲಾಡಳಿತವು ಈ ಕುರಿತಾಗಿ ಸೂಕ್ತವಾದ ಕ್ರಮ ಕೈಗೊಂಡು, ಗಂಗಾ ಆರತಿ ರೀತಿಯ ಕಾರ್ಯಕ್ರಮ ತಡೆಗಟ್ಟಿ ಕನ್ನಡಿಗರ ಭಾವನೆಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ಪತ್ತೆಯಾಗಿದ್ದ ಟಿಪ್ಪು ಕಾಲದ ಜೋಡಿ ನೆಲಮಾಳಿಗೆಯ ಸ್ವಚ್ಛತಾ ಕಾರ್ಯ
ಮನವಿ ಸಲ್ಲಿಸುವ ಸಂದರ್ಭದಲ್ಲಿ, ಪಾಂಡವಪುರದ ರಾಜೇಂದ್ರ ಸಿಂಗ್ ಬಾಬು, ಮದ್ದೂರಿನ ಧನುಷ್ ಗೌಡ, ಜಯರಾಂ ಹೊಸೂರು ಸೇರಿದಂತೆ ದ್ರಾವಿಡ ಕನ್ನಡ ಚಳುವಳಿ ಸದಸ್ಯರು ಉಪಸ್ಥಿತರಿದ್ದರು. ಈ ಕಾಳಜಿ ಮತ್ತು ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ, ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
