ಮಂಡ್ಯ ಜಿಲ್ಲೆಯನ್ನು ಅಗ್ರಿಕಲ್ಚರ್ ಕ್ಯಾಪಿಟಲ್ ಆಫ್ ಇಂಡಿಯಾ ಮಾಡಬೇಕು. ಏಕೆಂದರೆ, ಮಂಡ್ಯ ಎಂದರೆ ಕೃಷಿ, ಕೃಷಿ ಎಂದರೆ ಮಂಡ್ಯ ಎಂಬ ಮಾತಿದೆ. ಆದರೆ ಮಂಡ್ಯ ಸಂಪೂರ್ಣ ಆಗಬೇಕು ಎಂದರೆ ಮಂಡ್ಯದ ಮಕ್ಕಳೆಲ್ಲ ತಮ್ಮ ತಮ್ಮ ಊರುಗಳಿಗೆ ಬಂದು ಜೀವನ ರೂಪಿಸಿಕೊಳ್ಳುವ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜಾಗೃತ ಕರ್ನಾಟಕದ ವತಿಯಿಂದ ಆಯೋಜಿಸಿದ್ದ ಕೃಷಿ ಮತ್ತು ಗ್ರಾಮೀಣ ಭಾಗಗಳು ಎಲ್ಲಾ ರೀತಿಯಲ್ಲಿಯೂ ನಗಣ್ಯವಾಗುತ್ತಿರುವಾಗ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ವಿಚಾರಗೋಷ್ಠಿಯಲ್ಲಿ, ʼಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ದಿಗೆ ಹೊಸ ದಾರಿಗಳುʼ ಎಂಬ ವಿಚಾರ ಮಂಡಿಸಿ ಅವರು ಮಾತನಾಡಿದರು.
“ಕೃಷಿಗೆ ಇರುವ ಸಮಸ್ಯೆಗಳು ಏನೆಂಬುದನ್ನು ಮೊದಲು ರೈತರು ಅರಿತುಕೊಳ್ಳುವ ಕೆಲಸ ಮಾಡಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮಂಡ್ಯ ಜಿಲ್ಲೆಯನ್ನು ಅಗ್ರಿಕಲ್ ಕೃಷಿಯನ್ನು ಉಳಿಸಿ ಬೆಳೆಸಬೇಕು ಎಂದರೆ ಮೊದಲು ನಮ್ಮ ಭೂಮಿಯ ಫಲವತ್ತತೆಯನ್ನು ಅರ್ಥ ಮಾಡಿಕೊಳ್ಳಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಏನೇ ಆವಿಷ್ಕಾರಗಳು ನಡೆದರೂ ಸಹ ಅದು ರೈತರನ್ನು ಸ್ಥಳೀಯ ಮಟ್ಟದಲ್ಲಿ ತಿಳಿಯದೆ ಸಮಸ್ಯೆ ಉಂಟಾಗುತ್ತಿದೆ. ಇನ್ನು ಹವಾಮಾನ ಬದಲಾವಣೆಯಿಂದ ನಿಜವಾಗಿ ತೊಂದರೆಗೆ ಒಳಗಾಗುತ್ತಿರುವವರು ನಮ್ಮ ರೈತರು ಮಾತ್ರ. ಇನ್ನು ಅತಿವೃಷ್ಟಿ ಮತ್ತು ಅನಾವೃಷ್ಟಿ ಯಿಂದಲೂ ಸಹ ತೊಂದರೆಗೆ ಒಳಗಾಗುತ್ತಿರುವವರು ರೈತರು ಮಾತ್ರ. ಇದೆಲ್ಲದಕ್ಕೂ ಸವಾಲೊಡ್ಡುವ ಕೆಲಸ ರೈತರಿಂದ ಆಗುವಂತಾಗಬೇಕು. ಕೃಷಿ ಯನ್ನೂ ಕಸುಬು ಎಂದು ಮಾಡುತ್ತಿರುವ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಬರೀ ದುಡ್ಡು ಮಾಡುವ ಉದ್ದೇಶದಿಂದ ಕೃಷಿ ಮಾಡುತ್ತಿರುವವರು ಸ್ಥಿತಿಯೇ ಬೇರೆಯೇ ರೀತಿ ಇದೆ. ಇದೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ಪ್ರಯೋಗಗಳನ್ನು ಪ್ರಾರಂಭ ಮಾಡಬೇಕು” ಎಂದರು.
“ರೈತರನ್ನು ಕಾಡುವ ಮುಖ್ಯ ವಿಷಯವೆಂದರೆ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವುದು ಹಾಗೂ ಬೆಂಬಲ ಬೆಲೆ ಇಲ್ಲ ಎಂಬುದಾಗಿದ್ದು, ನಾವು ಬೆಳೆದ ಬೆಳೆಗಳಿಗೆ ನಾವೇ ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಸ್ಥಳೀಯವಾಗಿ ಬೆಳೆದ ಬೆಳಗಳನ್ನು ಸ್ಥಳೀಯ ಮಟ್ಟದಲ್ಲಿ ಮಾರಾಟವಾಗುವಂತೆ ಮಾಡಬೇಕು, ಉತ್ಪನ್ನಗಳಿಂದ ಉಪ ಉತ್ಪನ್ನಗಳನ್ನು ಮಾಡುವ ಕೆಲಸ ಮಾಡಬೇಕು ಹಾಗೂ ಉಪ ಉತ್ಪನ್ನಗಳನ್ನು ಮಾಡುತ್ತೇವೆ ಎಂಬ ಮಾತುಗಳನ್ನು ಬಿಟ್ಟು ಸಣ್ಣ ಪ್ರಮಾಣದಲ್ಲಿಯಾದರು ಮಾಡುವ ಕೆಲಸ ಪ್ರಾರಂಭವಾಗಬೇಕು. ಬೆಳೆ ಬೆಳೆಯುವ ಪದ್ಧತಿ ಬದಲಾಗಬೇಕು, ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವುದನ್ನು ಕಲಿಯಬೇಕು” ಎಂದು ವಿಚಾರಗೋಷ್ಠಿಯಲ್ಲಿ ನೆರೆದಿದ್ದ ರೈತರಿಗೆ ಕಿವಿ ಮಾತು ಹೇಳಿದರು.
ಇದನ್ನೂ ಓದಿ: ಮಂಡ್ಯ | ಲಂಚ ಪಡೆವಾಗ ಲೋಕಾಯುಕ್ತ ಬಲೆಗೆ ಮೂವರು ನೌಕರರು
ವಿಚಾರಗೋಷ್ಠಿಯಲ್ಲಿ ಪ್ರಾಸ್ತಾವಿಕವಾಗಿ ನಗರಕೆರೆ ಜಗದೀಶ್ ಮಾತನಾಡಿ, “ರೈತರು ಹಾಗೂ ಶಾಸಕ ಪುಟ್ಟಣ್ಣಯ್ಯ ಅವರೊಂದಿಗೆ ಸಮಾಲೋಚನೆ ನಡೆಯಿತು. ಈ ವೇಳೆ ರೈತರು ಸಾಲ ವಸೂಲಾತಿ ಮಾಡುವವರಿಂದ ಆಗುತ್ತಿರುವ ಸಮಸ್ಯೆಗಳು, ಬೆಳೆಗಳಿಗೆ ಎಂ.ಎಸ್.ಪಿ ಬೆಲೆ ಕೊಡುವುದು, ಮಾರುಕಟ್ಟೆ ಹೆಚ್ಚಿಸಿಕೊಳ್ಳುವುದು, ಸಣ್ಣ ಮತ್ತು ಅತಿ ಸಣ್ಣ ರೈತರು ಸ್ವಾವಲಂಭಿಗಳಾಗಿ ಕೃಷಿ ಮಾಡಿ ಜೀವನ ನಡೆಸುವುದು ಹೇಗೆ ಮತ್ತು ಮರೆಮಾಚಿದ ನಿರುದ್ಯೋಗ ಕಡೆಗಾಣಿಸುವುದು ಹೇಗೆ ಎಂಬ ವಿಚಾರಗಳು ಹಾಗೂ ಕೃಷಿಗೆ ಸಂಬಂಧಪಟ್ಟಂತೆ ಮೇಳಗಳು ನಡೆಯುವಂತಾಗಬೇಕು” ಎಂದರು.
“ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗಿರುವುದೇ ರೈತರ ಪ್ರಮಾಣ ಕಡಿಮೆಯಾಗಿದ್ದು, ಬೇರೆಯವರ ಮಾತು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರೈತರು ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ರಾಜಕಾರಣಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಜಾತಿ ಧರ್ಮವನ್ನು ಮರೆತು ಒಗ್ಗಟ್ಟಾಗಿ ರಾಜಕೀಯವಾಗಿ ಪ್ರಜ್ಞಾವಂತರಾಗಿ ಮುನ್ನೆಲೆಗೆ ಬರಬೇಕು” ಎಂದರು.
ಈ ಸಂದರ್ಭದಲ್ಲಿ ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ.ಹೆಚ್.ವಿ.ವಾಸು, ಮಹಿಳಾ ಕೃಷಿಕರಾದ ಪಿ. ಆರ್. ಕಿರಣ ಪಾಲ್ತಾಡಿ, ಜಿ.ಸಂತೋಷ್, ಸೈಯ್ಯದ್ ಘನಿಖಾನ್, ನಾಗೇಶ್, ಪೃಥ್ವಿರಾಜ್, ಲಂಕೇಶ್, ನಿವೃತ್ತ ಪ್ರಾದ್ಯಾಪಕ ರಾದ ಕೃಷ್ಣ, ಸುಬ್ರಹ್ಮಣ್ಯ, ಸುಹೇಲ್ ಅಹಮದ್, ಚೇತನ್ ಸೇರಿದಂತೆ ವಿವಿಧ ರೈತ ಸಂಘಟನೆಯ ಮುಖಂಡರು, ರೈತರು ಭಾಗವಹಿಸಿದ್ದರು.