ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ಡಿಸೆಂಬರ್ 20, 21, 22ರಂದು ಮೂರು ದಿನಗಳ ಕಾಲ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರ ಸಹಕಾರ, ಬೆಂಬಲ ಅತ್ಯವಶ್ಯಕ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಹೇಳಿದರು.
ಅವರು ಮಂಡ್ಯ ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲೆಯ ಸಾಹಿತಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡ್ಯದ ಆತಿಥ್ಯ, ಸತ್ಕಾರವನ್ನು ಎಲ್ಲರೂ ನೆನೆಯಬೇಕು. ಆ ನಿಟ್ಟಿನಲ್ಲಿ ಸಮ್ಮೇಳನ ಯಶಸ್ವಿಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಮಂಡ್ಯಕ್ಕೆ ತನ್ನದೇ ಆದ ಸೊಗಡಿದೆ. ವೈಶಿಷ್ಟ್ಯ ಇದೆ. ಸಮ್ಮೇಳನ ಯಶಸ್ಸಿ ಎಲ್ಲರ ಸಲಹೆ, ಮಾರ್ಗದರ್ಶನ, ಅನಿಸಿಕೆ ಪಡೆಯಲಾಗುತ್ತಿದೆ. ಸಮಿತಿಯೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಸಮ್ಮೇಳನವನ್ನು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ನೆರವೇರಿಸಲಾಗುವುದು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
— N Chaluvarayaswamy (@NCheluvarayaS) November 18, 2024
ನಮ್ಮ ಮಂಡ್ಯದಲ್ಲಿ ಡಿಸೆಂಬರ್ 20 ರಿಂದ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಇಂದು ಸಾಹಿತಿಗಳ ಸಭೆ ನಡೆಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.#ಮಂಡ್ಯ #ಸಾಹಿತ್ಯಸಮ್ಮೇಳನ #ಕನ್ನಡ pic.twitter.com/yDJ21oWg9y
ಸಾಹಿತ್ಯ ಸಮ್ಮೇಳನದ ಕುರುಹು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಲಾಮಂದಿರ, ಅಂಬೇಡ್ಕರ್ ಭವನ, ರೈತ ಭವನಗಳ ದುರಸ್ತಿ ಕಾರ್ಯ ಚಾಲನೆ ನೀಡಲಾಗಿದೆ. ಶಿವಪುರ ಧ್ವಜ ಸತ್ಯಾಗ್ರಹ ಪ್ರತಿಷ್ಠಾನ ರಚನೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪನೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್ ಜೋಷಿ ಮಾತನಾಡಿ, ಪ್ರಜಾಪ್ರಭುತ್ವ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರದ ಸಹಕಾರ ಸಹಭಾಗಿತ್ವ, ಸಮನ್ವಯತೆ ಸಮಾಲೋಚನೆ ಮುಖ್ಯ. ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಜಿಲ್ಲಾಡಳಿತ ಅತಿ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ಸಮ್ಮೇಳನದ ಯಶಸ್ವಿಗೆ ಎಲ್ಲರ ಸಹಕಾರ ಬೆಂಬಲ ಮುಖ್ಯ ಎಂದರು.
ಫ್ರೊ.ಕೃಷ್ಣೇಗೌಡ ಮಾತನಾಡಿ, ಸಮ್ಮೇಳನದಲ್ಲಿ ಬಹುಮುಖ್ಯವಾಗಿ ಜನರು ಗ್ರಹಿಸುವುದು ಸಮ್ಮೇಳನದ ಧ್ವನಿ ಏನು? ಎಂಬುದು. ಸಮ್ಮೇಳನದ ಬಗ್ಗೆ ಜನರ ಗ್ರಹಿಕೆ ಏನು ಎಂಬುದು ಮುಖ್ಯ. ಅತಿ ದೊಡ್ಡ ಕಾರ್ಯಕ್ರಮ ಇದಾಗಿದ್ದು, ಸುಸಂಸ್ಕೃತದ ಸಮ್ಮೇಳನ ಇದಾಗಲಿ ಎಂದರು.
ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವಲ್ಲ ಇದು ಎಲ್ಲಾ ಕನ್ನಡಿಗರ ಮನ ಮನೆಯ ಸಮ್ಮೇಳನ ಎಂದು ಹೇಳಿದರು.
ಬರಹಗಾರರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಯಕ್ಷಗಾನ ಕಲೆಯ ಮೂಲ ಮಂಡ್ಯ. ಯಕ್ಷಗಾನದ ತವರು ಮಂಡ್ಯ. ಕೆಂಪಣ್ಣಗೌಡ ಮೊದಲ ಕವಿ. ಮೂಡಲಪಾಯ ಕಲೆ ಮತ್ತೆ ಬೆಳಕಿಗೆ ಬರಬೇಕು. ಮಂಡ್ಯ ಜಿಲ್ಲೆಯ ಕೊಡುಗೆಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆಯಾಗಬೇಕು. ರಾಜ್ಯಮಟ್ಟದ ವಿದ್ವಾಂಸರನ್ನು ಕರೆಸಬೇಕು ಎಂದು ಸಲಹೆ ನೀಡಿದರು.
ಕೃಷಿ ಸಂಸ್ಕೃತಿಗೆ ಮಂಡ್ಯ ಕೊಡುಗೆ ಅಪಾರ. ನೇಗಿಲಯೋಗಿ ಪರಿಕಲ್ಪನೆ ಚರ್ಚೆಯಾಗಬೇಕು. ಸಮ್ಮೇಳನಕ್ಕೆ ಘನತೆಯೇ ಗೋಷ್ಠಿ. ಗೋಷ್ಠಿ ಬಗ್ಗೆ ಚರ್ಚೆ ಆಗಬೇಕು. ಸಾಹಿತ್ಯ, ಕೃಷಿ, ಸಂಸ್ಕೃತಿ ಮತ್ತು ಜಾನಪದ ಗೋಷ್ಠಿಯಾಗಬೇಕು. ಅನುವಾದ ಗೋಷ್ಠಿ ಆರಂಭಿಸುವ ಮೂಲಕ ಅನುವಾದ ಗೋಷ್ಠಿ ಮೊದಲು ಮಾಡಿದ ಕೀರ್ತಿ ಮಂಡ್ಯ ಸಮ್ಮೇಳನಕ್ಕೆ ಸಲ್ಲಬೇಕು ಎಂದರು.
ಇದನ್ನು ಓದಿದ್ದೀರಾ? ಬೆಂಗಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ನಲ್ಲಿ ಭೀಕರ ಅಗ್ನಿ ದುರಂತ: ಸಿಬ್ಬಂದಿ ಯುವತಿ ಸಾವು
ಕನ್ನಡ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಗೌಡ ಮಾತನಾಡಿ, ಮಂಡ್ಯ ಮಾದರಿ ಇಟ್ಟುಕೊಂಡು ಸಮ್ಮೇಳನ ಆಯೋಜಿಸಲಿ. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಜಿ.ನಾರಾಯಣ್, ಶಂಕರೇಗೌಡ್ರು, ಸಾಹುಕಾರ್ ಚೆನ್ನಾಯ್ಯ, ಶೀಂಕಠೇಗೌಡ್ರ ಹೆಸರನ್ನು ಮಹಾದ್ವಾರಗಳಿಗೆ ಇಡಬೇಕು. ಜಿಲ್ಲೆಯ ಮಹನೀಯರನ್ನು ನೆನೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಕೃಷ್ಣೇಗೌಡ ಹುಸ್ಕೂರು, ವಿ ಹರ್ಷ ಸೇರಿದಂತೆ ಇನ್ನಿತರರ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.
