ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಬಸ್ ನಿಲ್ದಾಣದಿಂದ ಸರ್ಕಾರ ಪ್ರಥಮ ದರ್ಜೆ ಕಾಲೇಜು, ಜೂನಿಯರ್ ಕಾಲೇಜು, ಮಹಿಳಾ ಸರ್ಕಾರಿ ಕಾಲೇಜು ಮತ್ತು ಸರ್ಕಾರಿ ಐಟಿಐ ಕಾಲೇಜುಗಳಿಗೆ ಬಸ್ ಸೇವೆ ಆರಂಭವಾಗಿದೆ. ಕೆ.ಆರ್ ಪೇಟೆ ಶಾಸಕ ಎಚ್.ಟಿ ಮಂಜು ಅವರು ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ಕೆ.ಆರ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಐಟಿಐ ಕಾಲೇಜುಗಳು ಪಟ್ಟಣದ ಬಸ್ ನಿಲ್ಧಾಣದಿಂದ 4 ಕಿ.ಮೀ ದೂರದಲ್ಲಿವೆ. ಮಹಿಳಾ ಸರ್ಕಾರಿ ಕಾಲೇಜು ಮತ್ತು ಸರ್ಕಾರಿ ಜೂನಿಯರ್ ಕಾಲೇಜು 3 ಕಿ.ಮೀ ದೂರದಲ್ಲಿವೆ. ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ ನಿಲ್ದಾಣದಿಂದ ಕಾಲೇಜಿಗೆ, ಕಾಲೇಜಿನಿಂದ ಬಸ್ ನಿಲ್ದಾಣಕ್ಕೆ ನಡೆದುಕೊಂಡೇ ಹೋಗಬೇಕಿತ್ತು.
ಹೀಗಾಗಿ, ವಿದ್ಯಾರ್ಥಿಗಳು ನಡೆದೇ ಸುಸ್ತಾಗುತ್ತಿದ್ದರಿಂದ ಬೋಧನೆಯ ಕಡೆಗೆ ಗಮನವಿಟ್ಟು ಆಲಿಸಲಾಗುತ್ತಿಲ್ಲವೆಂದು ಹೇಳುತ್ತಲೇ ಇದ್ದರು. ಹಲವಾರು ವರ್ಷಗಳಿಂದ ಬಸ್ ನಿಲ್ದಾಣದಿಂದ ಕಾಲೇಜಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದರು. ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ಬಸ್ ವ್ಯವಸ್ಥೆಗಾಗಿ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿತ್ತು. ಮಾತ್ರವಲ್ಲದೆ, ಹಿಂದಿನ ಶಾಸಕರಿಗೆ ಮನವಿಯನ್ನೂ ಸಲ್ಲಿಸಿತ್ತು.
ಇದೀಗ, ವಿದ್ಯಾರ್ಥಿಗಳ ವರ್ಷಗಳ ಬೇಡಿಕೆ ಈಡೇರಿದೆ. ಬಸ್ ನಿಲ್ದಾಣದಿಂದ ಕಾಲೇಜುಗಳಿಗೆ ಬಸ್ ಸಂಚಾರ ವ್ಯವಸ್ಥೆ ಒದಗಿಸಲಾಗಿದೆ.
ಬಸ್ ವ್ಯವಸ್ಥೆಯ ಬಗ್ಗೆ ಮಾತನಾಡಿರುವ ಶಾಸಕ ಮಂಜು, “ವಿದ್ಯಾರ್ಥಿ ಜೀವನದಲ್ಲಿ ನಾನು ಸಹ ಬಹಳ ಕಷ್ಟಪಟ್ಟಿದ್ದೇನೆ. ಆದ್ದರಿಂದ ತಾಲೂಕಿನ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಪಟ್ಟಣದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದಿಂದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಜೂನಿಯರ್ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗೂ ಬಸ್ ಸಂಚರಿಸಲು ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳಿದ್ದಾರೆ.