ಕನ್ನಡ ಮನಸುಗಳು ಟ್ವಿಟರ್ ಅಕೌಂಟಿನಿಂದ ಪವನ್ ಧರೆಗುಂಡಿ, ಚಿಕ್ಕಮಂಡ್ಯ ಶಾಲೆಯ ಮುಂಭಾಗದಲ್ಲಿನ ಅವ್ಯವಸ್ಥೆ, ಗಲೀಜು ಮತ್ತು ಗಬ್ಬು ವಾಸನೆಯ ಕುರಿತು ಒಂದು ಟ್ವೀಟ್ ಮಾಡಿದ್ದರು. ಅದು ನಾಡಿನ ಸಿಎಂ ಸಿದ್ದರಾಮಯ್ಯನವರ ವಿಶೇಷ ಕರ್ತವ್ಯಾಧಿಕಾರಿಗೂ ಟ್ಯಾಗ್ ಮಾಡಿದ್ದರು. ಇದು ಪ್ರಜ್ಞಾವಂತರ ಗಮನ ಸೆಳೆದಿತ್ತು. ಪರಿಸರ ಪ್ರೇಮಿಗಳು ಮತ್ತು ಸರಕಾರಿ ಶಾಲಾಭಿಮಾನಿಗಳು ಸಂಬಂಧಪಟ್ಟವರಿಗೆ ಕರೆ ಮಾಡಿದ್ದರು.
ಇದಕ್ಕೆ ಸಕಾಲದಲ್ಲಿ ಸ್ಪಂದಿಸಿದ ಮಂಡ್ಯದ ಜಿಲ್ಲಾಡಳಿತ ಕೂಡಲೇ ದುರ್ವಾಸನೆ ಬೀರುತ್ತಿದ್ದ ಸ್ಥಳವನ್ನು ಶುಚಿಗೊಳಿಸುವಂತೆ ನಿರ್ದೇಶನ ನೀಡಿತ್ತು. ಹಲವು ವರ್ಷಗಳಿಂದ ಶಾಲೆಯ ಮುಂಭಾಗ ಕಸ ಸುರಿದಿದ್ದರಿಂದ ಆವರಣವನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರಿಗೆ ಇಡೀ ದಿನ ಬೇಕಾಯಿತು. ಸ್ಥಳೀಯ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ನಮಗೆ ಕಾಣದ್ದು ಪವನ್‌ಗೆ ಕಂಡಿತು!
ಧರೆಗುಂಡಿ ಪವನ್ ಮಾತನಾಡಿ, ಚಿಕ್ಕ ಮಂಡ್ಯ ಶಾಲೆಗೆ ಸುಣ್ಣ, ಬಣ್ಣ ಮಾಡಲು ವಾಲೆಂಟಿಯರ್‌ಗಳಾಗಿ ಹೋಗಿದ್ವಿ. ಶಾಲೆಯ ಪಕ್ಕದಲ್ಲಿ ತುಂಬಾ ಅಂದರೆ ತುಂಬಾನೆ ಗಲೀಜಾಗಿತ್ತು. ಶಾಲೆಯ ಅಕ್ಕ ಪಕ್ಕದ ಪರಿಸರ ಸ್ವಚ್ಛವಾಗಿರಬೇಕು ಎನ್ನುವ ಉದ್ದೇಶದಿಂದ ಒಂದು ವಿಡಿಯೋ ಮಾಡಿ ಟ್ವಿಟ್ ಮಾಡಿದ್ದೆ. ಅದಕ್ಕೆ ಜಿಲ್ಲಾಡಳಿತ ಸ್ಪಂದಿಸಿ ಗಲೀಜನ್ನು ಎತ್ತಾಕಿಸಿದೆ ಎಂದು ಮಾಹಿತಿ ನೀಡಿದರು.

ಚಿತ್ರಕೂಟದ ಅರವಿಂದ ಪ್ರಭು ಮಾತನಾಡಿ, ನಾವು ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೆವು. ಪಕ್ಕದಲ್ಲೇ ಇರುವ ನಿಲ್ದಾಣದಲ್ಲಿ ವಾಸನೆ ಸಹಿಸಿಕೊಂಡು ಬಸ್ ಹತ್ತುತ್ತಿದ್ದೆವು. ನಮಗ್ಯಾರಿಗೂ ಇದು ಕಣ್ಣಿಗೆ ಬಿದ್ದಿರಲಿಲ್ಲ. ನೂರು ಕಿಲೋ ಮೀಟರ್ ದೂರದಿಂದ ಬಂದ ಕನ್ನಡವೀರನೊಬ್ಬ ನಮ್ಮೆಲ್ಲರ ಕಣ್ಣು ತೆರೆಸಿದ. ಶಾಲೆಯ ಮಕ್ಕಳ ಜತೆಗೆ ಸಾರ್ವಜನಿಕರಿಗೂ ಪವನ್ ಈ ಕೆಲಸದಿಂದ ಒಳ್ಳೆಯದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಚಿಕ್ಕಮಂಡ್ಯ ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಚಂದನ್ ಮಾತನಾಡಿ, ಗಲೀಜು ಮಾಡಿ ಎತ್ತಾಕುವುದಕ್ಕಿಂತ ಕಸ ಹಾಕದಂತೆ ಸ್ಥಳೀಯ ಆಡಳಿತದಿಂದ ಕ್ರಮ ಆಗಬೇಕು. ಕನ್ನಡ ಮನಸ್ಸುಗಳು ತಂಡದ ಪವನ್ ಧರೆಗುಂಡಿಯವರಿಗೆ ಬಂದಂತಹ ಯೋಚನೆ ನಮಗ್ಯಾಕೆ ಬರಲಿಲ್ಲ ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ದಕ್ಷಿಣ ಭಾರತಕ್ಕೆ ಸುಪ್ರೀಂ ಕೋರ್ಟ್ ಬೆಂಚ್ ಬೇಕು: ಅಭಿಗೌಡ
ಮಂಗಲ ಯೋಗೇಶ್ ಮಾತನಾಡಿ, ಪಂಚಾಯಿತಿಯಿಂದ ಆಯ್ಕೆ ಆದವರಿಗೆ ಕಣ್ಣು, ಕಿವಿ, ನಾಲಿಗೆ ಯಾವುದೂ ಇಲ್ಲ. ಅಯ್ಯೋ ನಮಗ್ಯಾಕೆ ಬಿಡು ಅಂತ ಸುಮ್ಮನಾಗುತ್ತಾರೆ. ಕೇಳುವವರಿದ್ದಾಗಲೇ ಕೆಲಸ ಆಗುವುದು. ಗೆಳೆಯ ಪವನ್ ಎಚ್ಚರಿಸುವ ಕೆಲಸ ಮಾಡಿರುವುದರಿಂದ ಒಳೆಯದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
