ನಕ್ಷೆ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುವ ಪ್ರವೃತ್ತಿ ಎಗ್ಗಿಲ್ಲದೆ ಸಾಗಿದೆ. ಸಾಮಾನ್ಯವಾಗಿ ಕಟ್ಟಡಗಳನ್ನು ನಿರ್ಮಿಸುವವರು ನಗರಸಭೆಯಿಂದ ಪರವಾನಗಿ ಪಡೆದು ಕಟ್ಟಡಗಳನ್ನು ನಿರ್ಮಿಸುತ್ತಾರಾದರೂ ಅನುಮೋದಿತ ನಕ್ಷೆಗೂ ನಿರ್ಮಾಣವಾಗುವ ಕಟ್ಟಡಕ್ಕು ಅಜಗಜಾಂತರ ವ್ಯತ್ಯಾಸವಿರುತ್ತದೆ.
ಹೌದು, ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣದ ಪರವಾನಗಿ ನೀಡಿದ ನಂತರ ನಗರಸಭೆಯ ಇಂಜಿನಿಯರುಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರೀಶೀಲಿಸಬೇಕು. ನಕ್ಷೆ ಉಲ್ಲಂಘನೆಯಾಗದಂತೆ ಎಚ್ಚರಿಸಬೇಕು. ನಗರಸಭೆಯ ಕರ ವಸೂಲಿಗಾರರು, ಕಂದಾಯ ಅಧಿಕಾರಿಗಳು, ಎಂಜಿನಿಯರುಗಳು ಈ ಬಗ್ಗೆ ನಿಗಾ ಇಟ್ಟಿರಬೇಕು. ಆದರೆ ನಗರಸಭೆ ಅಧಿಕಾರಿಗಳು ಪರವಾನಗಿ ಕೊಟ್ಟ ಮೇಲೆ ಅತ್ತ ತಲೆ ಹಾಕುವುದೇ ಇಲ್ಲ.
ನಕ್ಷೆ ಉಲ್ಲಂಘನೆ ಮಾತ್ರವಲ್ಲದೆ, ಕಿಟಕಿಗಳ ಸಜ್ಜಾವನ್ನು ರಸ್ತೆ ಕಡೆಗೆ ಹೆಚ್ಚುವರಿಯಾಗಿ ವಿಸ್ತರಿಸುವುದು. ಚರಂಡಿಯನ್ನು ಆಕ್ರಮಿಸಿ ಕಟ್ಟಡ ನಿರ್ಮಿಸುವುದು, ಸೆಟ್ ಬ್ಯಾಕ್ ಬಿಡದಿರುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ನಾಗರೀಕರು ಅಕ್ರಮ ನಿರ್ಮಾಣದ ವಿರುದ್ಧ ದನಿ ಎತ್ತಿದರೂ ಅಕ್ರಮ ಕಟ್ಟಡಗಳ ನಿರ್ಮಾತೃಗಳು ಆ ದನಿಯನ್ನು ಹತ್ತಿಕ್ಕುತ್ತಾರೆ. ಇದರ ಪರಿಣಾಮ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯಾಗಿ ಜನಸಾಮಾನ್ಯರು ಬಡಾವಣೆಗಳಲ್ಲಿ ವಾಸಿಸಲು ಆಗದ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ಕಟ್ಟಡ ನಿರ್ಮಾಣದ ಮೂಲ ವಿನ್ಯಾಸದಲ್ಲಿ ಪಾರ್ಕಿಂಗ್ ಸ್ಥಳ ತೋರಿಸಿದ್ದರು ವಾಸ್ತವದಲ್ಲಿ ಅದು ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತದೆ. ನಾಗರೀಕರು ವಾಸಿಸುವ ಬಡಾವಣೆಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಅನುಮತಿ ನೀಡುವಾಗ ಸಾರ್ವಜನಿಕ ಅಹವಾಲು ಆಲಿಸುವ ಪರಿಪಾಠ ಇಲ್ಲದರ ಪರಿಣಾಮ ನಾಗರೀಕ ಬಡಾವಣೆಗಳಲ್ಲಿ ನರ್ಸಿಂಗ್ ಹೋಂಗಳು, ವಾಣಿಜ್ಯ ಸಂಕೀರ್ಣಗಳು ಎಗ್ಗಿಲ್ಲದೆ ನಿರ್ಮಾಣಗೊಳ್ಳುತ್ತಿವೆ. ಇದರಿಂದಾಗಿ ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ ನಿತ್ಯ ಸಂತೆಯಾಗಿದೆ.
ನಗರಸಭೆ ಸದಸ್ಯರು ಇವುಗಳ ಕುರಿತು ದನಿ ಎತ್ತುವ ಉಮೇದು ಇದ್ದರು ಮತ ಕಳೆದುಕೊಳ್ಳುವ ಭೀತಿಯಲ್ಲಿ ಮೌನಕ್ಕೆ ಶರಣಾಗಿದ್ದಾರೆ. ದಶಕಗಳಿಂದ ಇಲ್ಲಿಯೇ ಬೇರು ಬಿಟ್ಟಿರುವ ಸಿಬ್ಬಂದಿ ಸ್ಥಳೀಯ ಅರಾಜಕತೆಗೆ ಒಗ್ಗಿಹೋಗಿದ್ದಾರೆ. ಕೆಲವೊಮ್ಮೆ ನಗರಸಭಾ ಸದಸ್ಯರೆ ಈ ಅಕ್ರಮ ನಿರ್ಮಾಣಗಳ ಪರ ವಕಾಲತ್ತು ವಹಿಸುವ ಉದಾಹರಣೆಗಳು ಇವೆ. ಸದ್ಯ ಮಂಡ್ಯ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಇರುವ ಏಕೈಕ ಇಂಜಿನಿಯರ್ 35 ವಾರ್ಡುಗಳನ್ಮು ನಿಭಾಯಿಸಬೇಕಿದೆ. ಅಕ್ರಮ ಕಟ್ಟಡಗಳ ನಕ್ಷೆ ಉಲ್ಲಂಘನೆಗೆ ಬ್ರೇಕ್ ಹಾಕದಿದ್ದರೆ ಮಂಡ್ಯ ನಗರ ಕೆಲವೆ ವರ್ಷಗಳಲ್ಲಿ ಸ್ಲಂ ಆಗಿ ಪರಿವರ್ತನೆಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಕಟ್ಟಡ ನಕ್ಷೆ ಉಲ್ಲಂಘನೆ ಬಗ್ಗೆ ಹೇಳಿಕೆ ಪಡೆಯಲು ಮಂಡ್ಯ ನಗರಸಭೆ ಆಯುಕ್ತ ಎಂ ಪಿ ಕೃಷ್ಣಕುಮಾರ್ ಅವರಿಗೆ ಕರೆ ಮಾಡಲಾಗಿ ಕರೆ ಸ್ವೀಕರಿಸಲಿಲ್ಲ. ನಗರಸಭೆ ಇಂಜಿನಿಯರ್ ರಾಜುಗೌಡ ಹೇಳಿಕೆ ನೀಡಲು ನಿರಾಕರಿಸಿದರು.
ಎಇಇ ರವಿಕುಮಾರ್ ಈದಿನ.ಕಾಮ್ ಜೊತೆ ಮಾತನಾಡಿ, ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ನಮಗೆ ಅರಿವಿದೆ. ಯಾರಾದರೂ ದೂರು ಕೊಟ್ಟಲ್ಲಿ ಮಾತ್ರ ಮೂರು ನೋಟೀಸ್ ನೀಡಿ ಕಾನೂನಾತ್ಮಕ ಕ್ರಮಕೈಗೊಳ್ಳುತ್ತೇವೆ. ಆದರೆ ಶೇ.99ರಷ್ಟು ಯಾರೊಬ್ಬರೂ ದೂರು ಕೊಡುವುದಿಲ್ಲ. ಅಕ್ರಮ ನಿರ್ಮಾಣ ನಮಗೆ ಕಂಡು ಬಂದಲ್ಲಿ ಎರಡು ಪಟ್ಟು ಕಂದಾಯ ವಸೂಲಿ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ
ಇನ್ನೂ ಮಂಡ್ಯ ನಗರಸಭೆಯ ಅಧ್ಯಕ್ಷರಾದ ನಾಗೇಶ್ ಮಾತನಾಡಿ, ಈ ವಿಚಾರವನ್ನು ಪರಿಶೀಲಿಸಿ ಅಧಿಕಾರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಒಟ್ಟಾರೆಯಾಗಿ, ನೂತನ ಅಧ್ಯಕ್ಷರು ನಗರಸಭೆಯ ಆಡಳಿತಕ್ಕೆ ಚುರುಕು ಮುಟ್ಟಿಸಿ ಅಕ್ರಮ ನಿರ್ಮಾಣಕ್ಕೆ ತಡೆಯೊಡ್ಡುವರೆ ಎಂಬುದನ್ನು ಕಾದು ನೋಡಬೇಕಿದೆ. ಮಂಡ್ಯ ನೂತನ ಶಾಸಕ ಗಣಿಗ ರವಿಕುಮಾರ್ ನಗರಸಭೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಲು ಪ್ರಯತ್ನಿಸಿದರೆ ಮಂಡ್ಯ ನಗರವನ್ನು ಚಂದಗಾಣಿಸುವುದು ಕಷ್ಟವೇನಲ್ಲ. ನಗರದ ಅಭಿವೃದ್ದಿ ಕನಸು ಕಾಣುತ್ತಿರುವ ಶಾಸಕ ಗಣಿಗ ರವಿಕುಮಾರ್ ನಗರಸಭೆಯ ಆಡಳಿತ ವರ್ಗವನ್ನು ಹಿಡಿತಕ್ಕೆ ತಂದು ನಗರದ ಅಭಿವೃದ್ದಿಯನ್ನು ಸಾಧಿಸುವುದು ಈಗ ಆದ್ಯತೆಯ ವಿಷಯ ಆಗಬೇಕಿದೆ.

ರಾಷ್ಟ್ರೀಯ ದಾರಿ 275 ರಲ್ಲಿ ರಸ್ತೆ ಬದಿಯ ನಿವೇಶನ ಮತ್ತು ಮನೆಗಳಿಗೂ ತಕ್ಕ ಮೌಲ್ಯ ಪಡೆದ ನಂತರವೂ ರಸ್ತೆಗೆ ಜಾಗವಿಲ್ಲದಂತೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತೆ ಕೆಲ ಗ್ರಾಮ ಪಂಚಾಯಿತಿಗಳು (ಉ ಇಂಡವಾಳು ಗ್ರಾಮ ಪಂಚಾಯಿತಿ ತೂಬಿನಕೆರೆ ಗ್ರಾಮ ಪಂಚಾಯಿತಿ ಎಲ್ಲಿಯೂರು ಗ್ರಾಮ ಪಂಚಾಯಿತಿ) ರಾಷ್ಟ್ರೀಯ ಹೆದ್ದಾರಿ ಜಾಗವನ್ನು ಕೂಡ ಈ ಸ್ವತ್ತು ಮಾಡಿಕೊಡಲಾಗುತ್ತಿದೆ ಇದರ ಬಗ್ಗೆ ಒಂದು ಲೇಖನ ಬರೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳ ಗಮನ ಸೆಳೆಯಬೇಕಾಗಿದೆ