ಮಾನವ ಕಳ್ಳಸಾಗಾಣೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮಂಡ್ಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾ. ಎಂ ಭೃಂಗೇಶ್ ಕರೆ ನೀಡಿದರು.
ಮಂಡ್ಯ ನಗರದ ಜಿಲ್ಲಾ ಕಾರಾಗೃಹದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸೇವಾ ಘಟಕ, ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಮಾನವ ಕಳ್ಳಸಾಗಾಣಿಕೆ ವಿರೋಧಿಸಿ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮಕ್ಕಳನ್ನು ಭಿಕ್ಷಾಟನೆಗೆ ಬಿಡುವುದು ಹಾಗೂ ಮಾನವ ಕಳ್ಳಸಾಗಣೆ ಮಾಡಿ ಅಂಗಾಂಗ ಕದಿಯುವುದು ಅಪರಾಧವಾಗಿದೆ. ಇಂತಹ ಘಟನೆಗಳು ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ” ಎಂದು ಹೇಳಿದರು.
“ಹೆಣ್ಣು ಮಕ್ಕಳನ್ನು ವೇಶ್ಯವಾಟಿಕೆಗೆ ದೂಡುವುದನ್ನು ತಡೆಗಟ್ಟಬೇಕು. ಮನುಷ್ಯನಿಗೆ ಸಿಂಪತಿ ಇರಬೇಕು. ಆದರೆ ಅದು ನಮ್ಮನ್ನು ನಾಶ ಮಾಡುವ ರೀತಿಯಲ್ಲಿ ಇರಬಾರದು. ಸಮಾಜದಲ್ಲಿ ಒಳ್ಳೆಯದನ್ನು ನೋಡಬೇಕು. ನಮಗೆ ಅರಿವಿಲ್ಲದೇ ಸಣ್ಣ ತಪ್ಪುಗಳನ್ನು ಮಾಡುತ್ತೇವೆ, ಅದನ್ನು ತಿಳಿದ ಮೇಲೆ ತಿದ್ದಿಕೊಳ್ಳಬೇಕು. ಅದನ್ನು ಹಾಗೆಯೇ ಬಿಟ್ಟರೆ ದೊಡ್ಡ ತಪ್ಪು ಎಸಗಲು ಕಾರಣವಾಗುತ್ತದೆ. ಇದಕ್ಕೆ ಕಾನೂನು ಅರಿವು ಮುಖ್ಯವಾಗಿದೆ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಒಳಚರಂಡಿ ಕಾರ್ಮಿಕರ ನೇಮಕಾತಿ, ಕಾರ್ಮಿಕ ಕಾಯ್ದೆ ಜಾರಿಗೆ ಪೌರಕಾರ್ಮಿಕರ ಆಗ್ರಹ
ಹಿರಿಯ ಸಿವಿಲ್ ನ್ಯಾಯಾಧೀಶ ಎಂ ಆನಂದ್ ಮಾತನಾಡಿ, “ಅನ್ಯಾಯ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಇದನ್ನು ಯಾರು ಹೇಳಿದರೆಂಬುದನ್ನು ಹೇಳುವುದಿಲ್ಲ, ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಇಂತಹ ಸಂದರ್ಭಗಳನ್ನು ಬಳಿಸಿಕೊಂಡು ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆ ತಡೆಗಟ್ಟಲು ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ” ಎಂದು ತಿಳಿಸಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ ಕೆ ಲೊಕೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಟಿ ರಾಜೇಂದ್ರ, ಕಾನೂನು ಸಹಾಯಕ ಪ್ರಾಧ್ಯಾಪಕ ಎಸ್ ಬಿ ಬೋರೇಗೌಡ, ಸಹಾಯಕ ಆರಕ್ಷಕ ಉಪ ನಿರೀಕ್ಷಕ ರಮೇಶ್, ಕಾನೂನು ಸಹಾಯಕ ಪ್ರಾಧ್ಯಾಪಕ ಕೆ ಎಸ್ ಜಯಕುಮಾರ್ ಇದ್ದರು.
