ಮಂಡ್ಯ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಡೆಯಲು ಹಾಗೂ ಜಿಲ್ಲೆಯಲ್ಲಿ ಪಾರದರ್ಶಕ ಆಡಳಿತ ನೀಡಲು ಒತ್ತಾಯಿಸಿ ಕೆಆರ್‌ಎಸ್ ಪಕ್ಷದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಭ್ರಷ್ಟಾಚಾರ ವಿರೋಧಿ ದಿನದ ಅಂಗವಾಗಿ ಡಿಸೆಂಬರ್ 9ರಂದು ಮನವಿ ಸಲ್ಲಿಸಿ ಅಧ್ಯಕ್ಷ ಡಿ ಜಿ ನಾಗರಾಜ್ ಅವರು ಮಾತನಾಡಿ, “ಮಂಡ್ಯ ಜಿಲ್ಲೆಯಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದು, ನಮ್ಮ ಜಿಲ್ಲೆಗೆ ಆಗಮಿಸುವ ಕರ್ನಾಟಕದ್ಯಂತ ಹಾಗೂ ಹೊರ ರಾಜ್ಯಗಳಿಂದ ಬರುವಂತಹ ಕನ್ನಡ ಪ್ರೇಮಿಗಳಿಗೆ ಯಾವುದೇ ಕುಂದು ಕೊರತೆಯಾಗದಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯವಸ್ಥೆ ನಿರ್ಮಿಸಬೇಕು” ಎಂದು ಮನವಿ ಮಾಡಿದರು.

“ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರೈತರಿಂದ ಹಣ ಸುಲಿಗೆಯ ಬಗ್ಗೆ ಹಾಗೂ ಯಾವುದೇ ಕೆಲಸ ಕಾರ್ಯಗಳಿಗೆ ತೆರಳಿದರೆ ಮೊದಲು ಟೇಬಲ್ ಕೆಳಗೆ ಹಣ, ನಂತರ ಟೇಬಲ್ ಮೇಲೆ ಕಡತ ಬರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಈ ರೀತಿಯ ವ್ಯವಸ್ಥೆಯಿದೆ. ಈ ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸಬೇಕು” ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಲೋಕಾಯುಕ್ತ ಕೋರ್ಟ್ ಆದೇಶ; ಅಧಿಕಾರಿಗಳಿಂದ ಸ್ಥಳ ಮಹಜರು
ಇದೇ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯ ವಿವಿಧ ಕಚೇರಿಗಳಿಗೆ ಭೇಟಿ ನೀಡಲಾಯಿತು. ಅಲ್ಲಿಯ ಸಿಬ್ಬಂದಿ ಗುರುತಿನ ಚೀಟಿ ಹಾಕದಿರುವುದು ಹಾಗೂ ಇನ್ನಿತರ ಲೋಪದೋಷಗಳನ್ನು ಸರಿಪಡಿಸಲು ಮೌಖಿಕವಾಗಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೇಬಕವಾಡಿ, ಪ್ರಧಾನ ಕಾರ್ಯದರ್ಶಿ ಚಂದ್ರುಕಿಲಾರ, ಜಿಲ್ಲಾ ಕಾರ್ಯದರ್ಶಿಗಳಾದ ಯೋಗಿಶ್ ಎಚ್ ಈ, ಶಶಿಧರ್ ನಂದೀಶ್, ಜಿಲ್ಲೆಯ ಎಲ್ಲ ತಾಲೂಕು ಅಧ್ಯಕ್ಷರು, ತಾಲೂಕು ಪ್ರಧಾನ ಕಾರ್ಯದರ್ಶಿಗಳು ಹಾಗೂ ಇತರ ಪದಾಧಿಕಾರಿಗಳು ಇದ್ದರು.