ಮಂಡ್ಯದಲ್ಲಿ 25 ಶ್ರಮಿಕ ನಗರ(ಸ್ಲಂ)ಗಳಿದ್ದು, ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಮತದಾರರಿದ್ದಾರೆ. ಮಂಡ್ಯದಲ್ಲಿ ಒಬ್ಬರು ನಿರ್ದಿಷ್ಟವಾಗಿ ಗೆಲ್ಲಬೇಕೆಂದರೆ ಸ್ಲಂ ಜನರ ಮತಗಳು ನಿರ್ಣಾಯಕ ಮತಗಳಾಗಿವೆ. ಹಿಂದೆ ಸಚಿವರಾಗಿದ್ದವರು ಒಂದು ಸ್ಲಂ ವಿಚಾರವಾಗಿ ಮೋಸ ಮಾಡಿದ್ದರಿಂದ ಎಲ್ಲ ಸ್ಲಂ ಜನರು ಒಗ್ಗಟ್ಟಾಗಿ ನನ್ನನ್ನು ಸೋಲಿಸಿ ಬಿಟ್ಟರೆಂದು ಹೇಳಿರುವ ಉದಾಹರಣೆ ಇದೆ. ಅಷ್ಟು ಶಕ್ತಿ ಈ ನಮ್ಮ ಶ್ರಮಿಕ ಜನರಿಗಿದೆ.
ಮಂಡ್ಯದ ಶ್ರಮಿಕ ಜನರು ಪೂರ್ವಜರ ತಲೆಮಾರುಗಳಿಂದ ಈಗಿನ ಹೊಸ ತಲೆಮಾರುಗಳ ತನಕ ಸಾಕಷ್ಟು ಕಷ್ಟ, ನಷ್ಟ, ನೋವನ್ನು ಕಂಡುಂಡು ಒಗ್ಗಟ್ಟಿನಿಂದ ಶ್ರಮಿಕ ನಿವಾಸಿಗಳ ಒಕ್ಕೂಟ ಕಟ್ಟಿ, ಕರ್ನಾಟಕ ಜನಶಕ್ತಿ ಸಂಘಟನೆ ಜೊತೆಗೂಡಿ ಹೋರಾಡಿ, ತಮ್ಮ ಹಕ್ಕುಗಳನ್ನು ಗಳಿಸಿಕೊಳ್ಳುವ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟು ಸಾಗುತ್ತಿರುವುದು ಒಂದು ಹೊಸ ಬದಲಾವಣೆಯ ಸಂಕೇತ.

ಯಾವ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಜನರ ಬಳಿ ಮತ ಕೇಳಲು ಮಾತ್ರ ಬರುತ್ತಾರೆ. ಗೆದ್ದ ನಂತರ ನೀವ್ಯಾರು ಎಂದು ಕೇಳಿರುವ ಉದಾಹರಣೆಯಿಲ್ಲ. ಈ ತಲೆಮಾರಿನ ನಮ್ಮ ಮಂಡ್ಯದ ಶಾಸಕರು ಒಂದು ನೂತನ ಪ್ರಯತ್ನ ಮಾಡಿದ್ದಾರೆ. ಗೆದ್ದ ನಂತರ ಎಲ್ಲ ಸ್ಲಂಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಜನರಿಗೊಂದು ಭರವಸೆ ನೀಡಿದ್ದಾರೆ. ಜನರಿಗೂ ಕೂಡಾ ಒಂದು ಹೊಸ ಹುಮ್ಮಸ್ಸು, ಭರವಸೆ ತಂದು ಕೊಂಡಿದ್ದಾರೆ. ನಮ್ಮ ಶಾಸಕರಿಗೆ ಹೃದಯವಂತಿಕೆ ಮತ್ತು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮೌಲ್ಯವಾದ ಗುಣವೂ ಇದೆ. ಮಂಡ್ಯದ 35 ವಾರ್ಡ್‌ಗಳ ರಸ್ತೆ ಕಾಮಾಗಾರಿ, ಹೈಟೆಕ್ ಫುಟ್‌ಪಾತ್ ನಿರ್ಮಾಣ ಮಾಡಿ, ನಗರವನ್ನು ಸುಂದರಪಡಿಸುತ್ತಿರುವುದಕ್ಕೆ ನಮಗೆ ಸಂತೋಷವಿದೆ.
ನಗರವನ್ನು ಸುಂದರಪಡಿಸಲು ದುಡಿಯುವ ಶ್ರಮಿಕರ ಬದುಕು ಸುಂದರವಾಗುವುದೂ ಕೂಡಾ ಅಷ್ಟೇ ಮುಖ್ಯವಲ್ಲವೇ? ಇವರ ಕಾಲಘಟ್ಟದಲ್ಲಾದರು 70 ವರ್ಷಗಳ ಜನರ ಕಷ್ಟಗಳಿಗೆ ಅಂತ್ಯ ಹಾಡಲಿ. ಅಭಿವೃದ್ದಿಯ ಕೆಲಸಗಳನ್ನು ಮಾಡಿ, ಜನರ ಮನದಲ್ಲಿ ಚಿರಾಯುವಾಗಿ ಉಳಿಯಬಲ್ಲರೇ? ಇಲ್ಲವೇ ವಂಚಿಸಿ ಸುಳ್ಳು ಭರವಸೆಗಳನ್ನು ನೀಡಿ ಮತಪಡೆದ ರಾಜಕಾರಣಿಗಳ ಸಾಲಿಗೆ ಇವರು ಸೇರುವರೇ? ಭಿನ್ನ ಎನಿಸಿಕೊಳ್ಳವರೇ? ಮುಂದಿನ 3 ವರ್ಷಗಳಲ್ಲಿ ಇವರು ಬದಲಾವಣೆ ತರುತ್ತಾರೋ ಎಂದು ಭರವಸೆಯಿಂದ ಕಾದು ನೋಡುತ್ತೇವೆ. ಸ್ಲಂಗಳ ಕೆಲವು ಮುಖ್ಯವಾದ ಸಮಾಸ್ಯೆಗಳನ್ನು ಮುಂದಿಡಲು ನಮ್ಮ ಸಂಘಟನೆ ಬಯಸುತ್ತದೆ.
ಕಾಳಿಕಾಂಭ ಶ್ರಮಿಕ ಜನರ ಜಾಗದ ವಿಚಾರವಾಗಿ ಶಾಸಕರು ಹೊಸತರಲ್ಲಿ ನಮ್ಮ ಸಂಘಟನೆಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಒಳಗೊಂಡಂತೆ ಸ್ಥಳದ ಸಮಸ್ಯೆಯನ್ನು ಬಗೆಹರಿಸಲು ಪೂರ್ವ ಸಿದ್ಧತೆಯಿಲ್ಲದೆ ಸಭೆ ಮಾಡಿ ಈವರೆಗೂ ಸ್ಲಂ ಜನರ ಜಾಗ ಮತ್ತು ಮನೆಗಳ ವಿಚಾರ ಬಗೆಹರಿಯದೆ ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಇತ್ತ ಗಮನಹರಿಸಿ ಎಂದು ಒತ್ತಾಯಿಸುತ್ತೇವೆ.
ನಗರ ಪ್ರದೇಶ ಮತ್ತು ನಗರದ ಸುತ್ತ ಮುತ್ತಲಿನಲ್ಲಿ ಬಲಾಢ್ಯರು ಅಕ್ರಮವಾಗಿ ಸರ್ಕಾರದ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ದಾಖಲೆಗಳ ಸಹಿತ ಪರಿಶೀಲಿಸಿ, ಪತ್ತೆಹಚ್ಚಿ ಬಿಡಿಸಿಕೊಂಡು, ಜಾಗದ ಸಮಸ್ಯೆಯಿರುವ ಬಡಜನರಿಗೆ ಹಂಚಿಕೆ ಮಾಡಬೇಕು. ಮಂಡ್ಯದಲ್ಲಿ ಹಲವು ಪ್ರದೇಶಗಳು ಸ್ಲಂಗಳೆಂದು ಘೋಷಣೆಯಾಗಿವೆ, ಅಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿ ಹಕ್ಕುಪತ್ರ ನೀಡಿ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಸಬೇಕಿದೆ.
ಬಹಳ ಮುಖ್ಯವಾಗಿ ಹಲವು ಸ್ಲಂಗಳಲ್ಲಿ 15×15 ಅಳತೆಯ ಜಾಗದಲ್ಲಿ ಎರಡರಿಂದ ಮೂರು ಕುಟುಂಬಗಳು ವಾಸ ಮಾಡುತ್ತಿವೆ. ಇಂತಹ ಕುಟುಂಗಳ ಸರ್ವೆ ನಡೆಸಿ, ಮಂಡ್ಯ ತಾಲೂಕಿನ 10 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಜಾಗವನ್ನು ಗುರುತಿಸಿ ಹಂಚಿಕೆ ಮಾಡುವ ತುರ್ತು ಕೆಲಸವಾಗಬೇಕಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿಯವರೂ ಕೂಡಾ ಎಸಿ ಮತ್ತು ತಹಶಿಲ್ದಾರರಿಗೆ ನಿರ್ದೇಶನ ನೀಡಿದ್ದಾರೆ. ಕಂದಾಯ ಸಚಿವರಿಗೂ ಮನವಿ ಕೊಡಲಾಗಿದೆ.

ಸಚಿವರೂ ಕೂಡಾ ಅದ್ಯತೆಯ ಮೇರೆಗೆ ಈ ವಿಚಾರವಾಗಿ ತುರ್ತಾಗಿ ಗಮನವಹಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿರುತ್ತಾರೆ. ನಮ್ಮ ಸಂಘಟನೆಯಿಂದ ನಿರಂತರ ಫಾಲೋಅಪ್ ಮಾಡಲಾಗುತ್ತಿದೆ. ಇದರಲ್ಲಿ ಶಾಸಕರ ಪಾತ್ರವೇನು? ಏನು ಮಾಡಬಹುದೆಂದು ಅರಿತು, ತೊಡಕುಗಳನ್ನು ಶೀಘ್ರ ಬಗೆಹರಿಸಲಿ ಎಂಬುದು ನಮ್ಮ ಕಾಳಜಿಯುತ ಒತ್ತಾಯವಾಗಿದೆ.
ಇದನ್ನು ಓದಿದ್ದೀರಾ? ಕೆಆರ್‌ಪೇಟೆ | ವಾಟ್ಸಾಪ್ ಯುನಿವರ್ಸಿಟಿ ತಿರುಚಿದ ಇತಿಹಾಸ ಹೇಳುತ್ತಿದೆ: ಪ್ರೊ ಎಸ್ ಜಿ ಸಿದ್ದರಾಮಯ್ಯ
ದುಡಿಯುವ ಕೈಗಳಿಗೆ ಕೆಲಸಗಳನ್ನು ನೀಡಲು ಹೊಸ ಕೈಗಾರಿಕೆಗಳನ್ನು ತರಲು ಸರ್ಕಾರದಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ನಿರುದ್ಯೋಗಿ ಯುವ ಸಮುದಾಯವು ಕೆಲಸ ಅರಸಿ ದೂರ ಹೋಗಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಬದುಕು ಸಾಗಿಸಲು ಎಷ್ಟು ಕಷ್ಟದ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಅರಿತು ಉದ್ಯೋಗ ಸೃಷ್ಟಿಮಾಡಬೇಕು.
ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಬಲಿಷ್ಠಪಡಿಸಿ ರೈತ ವರ್ಗಕ್ಕೆ ಅನುಕೂಲ ಕಲ್ಪಿಸಬೇಕು ಹಾಗೂ ಹೊಸ ಉದ್ಯೋಗಗಳನ್ನು ಸೃಷ್ಟಿಮಾಡಬೇಕು. ಇಂತಹ ಕೆಲಸ ಕಾರ್ಯಗಳನ್ನು ಮಾಡಿದರೆ ನಮಗೂ ಖುಷಿ ಮತ್ತು ಮಂಡ್ಯದ ಜನತೆಯನ್ನು ತಮ್ಮ ಬಾಹುಗಳಿಂದ ನಿರಂತರವಾಗಿ ಬಿಗಿದು ಅಪ್ಪಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ಸಿದ್ದರಾಜು, ಕರ್ನಾಟಕ ಜನಶಕ್ತಿ
