ವಿಶಾಲವಾದ ಪ್ರಪಂಚದಲ್ಲಿ ಕಲಿಯುವುದು ಬಹಳಷ್ಟಿದೆ. ಯಾವಾಗಲೂ ನಮ್ಮ ಕಲಿಕೆ ಒಳ್ಳೆಯ ಆಯ್ಕೆಯ ವಿಷಯವಾಗಿರಬೇಕು. ಆದ್ದರಿಂದ, ಯುವಜನತೆಯ ಒಲವು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಯೇ ಇರಲಿ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು.
ಅವರು ನ.14ರ ಬುಧವಾರ ಜಿಲ್ಲಾಧಿಕಾರಿ ಭವನದಲ್ಲಿ ಬುದ್ಧ ಭಾರತ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಅರಕೆರೆ ಹೋಬಳಿಯ ನೇರ್ಲೆರೆ ಗ್ರಂಥಾಲಯಕ್ಕೆ ಸುಮಾರು 300 ಸ್ಪರ್ಧಾತ್ಮಕ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ವಿತರಣೆ ಸಂದರ್ಭದಲ್ಲಿ ಭಾಗಿಯಾಗಿ ಮಾತನಾಡಿದರು.
ಬಹಳಷ್ಟು ವಿದ್ಯಾರ್ಥಿಗಳಿಗೆ ಯಾವ ರೀತಿ ಓದಬೇಕು, ಯಾವ ಪುಸ್ತಕ ಓದಬೇಕು, ಓದುವುದಕ್ಕೆ ಪುಸ್ತಕವಾದರೂ ಎಲ್ಲಿ ಸಿಗುತ್ತದೆ, ಗ್ರಂಥಾಲಯಕ್ಕೆ ಹೋಗಿ ಓದಬೇಕೋ ಎಂಬ ಸಾಕಷ್ಟು ಗೊಂದಲಗಳು ಅಸ್ಪಷ್ಟತೆಗಳು ಸಾಮಾನ್ಯವಾಗಿ ಸರ್ವೇ ಸಾಮಾನ್ಯವಾಗಿ ಇರುತ್ತವೆ. ಅಂತಹ ಗೊಂದಲಗಳನ್ನು ದೂರ ಮಾಡಲು ಬುದ್ಧ ಭಾರತ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಈ ನಿಷ್ಕಲ್ಮಶವಾದ ಕೆಲಸ ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಬುದ್ಧ ಭಾರತ ಫೌಂಡೇಶನ್ ದೂರದೃಷ್ಟಿಯನ್ನಿಟ್ಟುಕೊಂಡು ಮಕ್ಕಳ ಭವಿಷ್ಯ ರೂಪಿಸಲು ತೆಗೆದುಕೊಂಡ ಕಾರ್ಯ ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಂಚಿತರಾಗದಂತೆ ಕಲಿಕೆ ನಡೆಸಿ ಉತ್ತಮ ಹುದ್ದೆಗೆ ಆಯ್ಕೆಯಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜ್ ಮಾತನಾಡಿ, ಗ್ರಾಮೀಣ ಬಡಮಕ್ಕಳಿಗೆ ಅನುಕೂಲವಾಗಲೆಂದು ಈ ಪುಸ್ತಕ ವಿತರಣೆಯನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಯುವ ಜನತೆಯೇ ಮುಂದೆ ಬಂದು ಸ್ಪರ್ಧಾತ್ಮಕ ಯುಗದಲ್ಲಿ ಭಾಗಿಯಾಗಬೇಕು, ಕಷ್ಟ ಪಡದೇ ಎಂದಿಗೂ ಸುಖ ಸಿಗುವುದಿಲ್ಲ ಎಂದು ಕಿವಿ ಮಾತು ಹೇಳಿದ ಅವರು, ಈ ಕಾರ್ಯವನ್ನು ನಿರ್ವಹಿಸುತ್ತಿರುವ ಸಂಸ್ಥೆಗೆ ಜಿಲ್ಲಾಡಳಿತದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದರು.
ಇದನ್ನು ಓದಿದ್ದೀರಾ? ಮೈಸೂರು | ಸಾಲಗಾರರ ಕಿರುಕುಳ ಶಂಕೆ: ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾದ ರಿಯಲ್ ಎಸ್ಟೇಟ್ ಉದ್ಯಮಿ
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ವಕೀಲರಾದ ರಾಮಯ್ಯ ಸೇರಿದಂತೆ ಇನ್ನಿತರರ ಗಣ್ಯರು ಮತ್ತು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.