ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆಯಲ್ಲಿ ಮಂಡ್ಯ ಮೊದಲ ಸ್ಥಾನ ಪಡೆಯಲು ಪೈಪೋಟಿಗೆ ಬಿದ್ದಂತಾಗಿದೆ. ಹೆಣ್ಣಿನ ಶೋಷಣೆ ಭ್ರೂಣದಲ್ಲಿಯೇ ಪ್ರಾರಂಭವಾಗುತ್ತದೆ. ಕೊನೆಗೆ ಭ್ರೂಣ ಹತ್ಯೆ, ಅತ್ಯಾಚಾರ, ದೌರ್ಜನ್ಯಗಳು ಕೊಲೆಗಳಲ್ಲಿ ಕೊನೆಗೊಳ್ಳುತ್ತದೆ, ಇತ್ತೀಚಿನ ದಿನಗಳಲ್ಲಿ ಇವು ಹೆಗ್ಗಿಲ್ಲದೆ ನಡೆಯುತ್ತಿದೆ ಎಂದು ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಆತಂಕ ವ್ಯಕ್ತಪಡಿಸಿದರು.
ಅವರು ಮಂಡ್ಯ ಪಟ್ಟಣದ ಗಾಂಧಿ ಪ್ರತಿಮೆಯ ಮುಂದೆ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿಯ ವತಿಯಿಂದ ಹೆಣ್ಣು ಭ್ರೂಣ ಹತ್ಯೆ ವಿರೋಧಿ ಅಭಿಯಾನಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಮಂಡ್ಯದ ಹಾಡ್ಯದ ಆಲೆಮನೆ ಪ್ರಕರಣ, ಕರ್ನಾಟಕದ ಜನರೆದುರು ಮಂಡ್ಯ ಜಿಲ್ಲೆಯ ಜನರು ತಲೆತಗ್ಗಿಸುವ ಸಂಗತಿ. ಹೆಚ್ಚುತ್ತಿರುವ ಈ ಅನಿಷ್ಟ ಪಿಡುಗು ಮತ್ತು ಹೆಣ್ಣು ಭ್ರೂಣ ಹತ್ಯೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರೆ ಹೆಚ್ಚು ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ನಾಚಿಕೇಡಿನ ಸಂಗತಿ. ಹೆಣ್ಣು ಭ್ರೂಣ ಹತ್ಯೆಯ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು ಮತ್ತೆ ಜಾಮೀನಿನ ಮೇಲೆ ಹೊರ ಬಂದು ಮತ್ತದೇ ಕೆಲಸಗಳಲ್ಲಿ ಭಾಗಿಯಾಗುತ್ತಿರುವುದು, ನಮ್ಮ ಕಾನೂನಿನ ದೌರ್ಬಲ್ಯವನ್ನು ಎತ್ತಿ ತೋರುತ್ತದೆ. ಈ ಅನಿಷ್ಟ ಪಿಡುಗನ್ನು ತಡೆಗಟ್ಟಲು ಜೊತೆಯಾಗಿ ಶ್ರಮಿಸೋಣ ಎಂದು ತಿಳಿಸಿದರು.
ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಈ ನೆಲದಲ್ಲಿ ಪುರುಷ ಪ್ರಾಧಾನ್ಯತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾ ಹೆಣ್ಣನ್ನು ಕೀಳು, ಕನಿಷ್ಠ, ಹೊರೆ ಎಂಬ ಮನೋಭಾವದಿಂದಾಗಿ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚುತ್ತಿವೆ. ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಮತ್ತು ಸೊಸೆಯಾಗಿ ಬೇಕು. ಆದರೆ ಮಗಳಾಗಿ ಮಾತ್ರ ಬೇಡ ಎನ್ನುವುದು ನೀಚ ಮನಸ್ಥಿತಿ. ಈ ಮನಸ್ಥಿತಿಗಳ ವಿರುದ್ದ ಹೋರಾಟ ನಡೆಸಬೇಕು. ಹೆಣ್ಣಿನ ಘನತೆ ನಮ್ಮೆಲ್ಲರ ಆದ್ಯತೆ ಆಗಬೇಕು ಎಂದು ತಿಳಿಸಿದರು.
ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಕುಮಾರಿ ಮಾತನಾಡಿ, ಗಾಂಧಿ ಜಯಂತಿಯಂದು ಈ ಹೆಣ್ಣು ಭ್ರೂಣ ಹತ್ಯೆ ವಿರೋಧಿ ಅಭಿಯಾನಕ್ಕೆ ಚಾಲನೆಕೊಟ್ಟಿರುವ ಮಹಿಳಾ ಮುನ್ನಡೆಯ ಜೊತೆಗೆ ಸಿಐಟಿಯು ಸಂಘಟನೆ ಕೂಡಾ ಬೆಂಬಲವಾಗಿ ನಿಲ್ಲುತ್ತದೆ. ಮಂಡ್ಯದಲ್ಲಿ ಹೆಚ್ಚುತ್ತಿರುವ ಅನಿಷ್ಟ ಪಿಡುಗನ್ನು ತಡೆಗಟ್ಟಲು ನಾವೆಲ್ಲರೂ ಜೊತೆಯಾಗಿ ನಿಂತು ಶ್ರಮವಹಿಸಬೇಕಿದೆ. ಹೆಣ್ಣೆಂದರೆ ಹೊರೆ ಹೆಣ್ಣೆಂದರೆ ಕೀಳು, ಕನಿಷ್ಠ ಎನ್ನುವ ಮನಸ್ಥಿತಿ ಹಾಗೂ ಪುತ್ರ ವ್ಯಾಮೋಹದಿಂದ ಹೆಣ್ಣನ್ನು ಭ್ರೂಣದಲ್ಲಿಯೇ ಕೊಲ್ಲಲಾಗುತ್ತಿದೆ. ಸಂಘ ಸಂಸ್ಥೆಗಳಾದ ನಾವು ಕೂಡಾ ಈ ಅನಿಷ್ಟ ಪಿಡುಗಿನ ವಿರುದ್ಧ ದುಡಿಯುವ ಪಣತೊಡೋಣ. ಈ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಲತಾ ಶಂಕರ್, ಮಹಿಳಾ ಮುನ್ನಡೆಯ ಶಿಲ್ಪ, ಜ್ಯೋತಿ, ಸೌಮ್ಯ, ಶಾಂತ, ರೇವತಿ ಮಮತ, ಶೃತಿ,ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಮುಖಂಡರಾದ ಚಂದ್ರು, ರವಿ ಅರುಣ, ಅಭಿಷೇಕ್ ವಿದ್ಯಾರ್ಥಿ ಸಂಘಟನೆಯ ಉದಯ್, ನಿತ್ಯಾ ಹಲವರು ಭಾಗವಹಿಸಿದ್ದರು.
