ಇಂದು ಮನುಸ್ಮೃತಿ ಸುಟ್ಟ ಐತಿಹಾಸಿಕ ದಿನ. ಮನುವಾದಿ ಬಗೆಗೆ ಪೆಟ್ಟು ಕೊಟ್ಟ ದಿನವೂ ಹೌದು. ಅಸ್ಪೃಶ್ಯತೆ, ಜಾತೀಯತೆ, ಲಿಂಗ ತಾರತಮ್ಯ, ಅಸಮಾನತೆಯ ಸಾರುವ ಮನುಸ್ಮೃತಿ ಕೃತಿಯನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು 1927ರ ಡಿ.25ರಂದು ಸುಟ್ಟ ಐತಿಹಾಸಿಕ ದಿನದ ಅಂಗವಾಗಿ ಮಂಡ್ಯದಲ್ಲಿಯೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ಮುಂದಾಳತ್ವದಲ್ಲಿ ಮನುಸ್ಮೃತಿಯನ್ನು ಸುಟ್ಟು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ಸೇರಿದ ದಸಂಸ, ಕರ್ನಾಟಕ ಜನಶಕ್ತಿ ಹಾಗೂ ಜಾಗೃತ ಕರ್ನಾಟಕದ ಕಾರ್ಯಕರ್ತರು ಮನುಸ್ಮೃತಿಗೆ ಬೆಂಕಿಯಿಟ್ಟು ಸುಟ್ಟು ಹಾಕಿದರು.
ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ತಳ ಸಮುದಾಯಗಳ ಬಂಡಾಯಕ್ಕೀಗ 97 ವರ್ಷಗಳು ಸಂದಿವೆ. ಸ್ವಾತಂತ್ರ್ಯಾ ನಂತರವೂ ಪರಿಸ್ಥಿತಿ ಬದಲಾಗಿಲ್ಲ, ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮೃತಿಗೆ ಕೊಳ್ಳಿ ಇಟ್ಟು ಸಮತೆಯ ಜ್ಯೋತಿಯನ್ನು ಬೆಳಗಿಸೋಣ ಎಂದು ಕರೆ ನೀಡಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಜಾತಿ ಅಸಮಾನತೆ, ಲಿಂಗ ತಾರತಮ್ಯ ದಲಿತರು – ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ ಸತಿ ಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯ ವಿವಾಹ ಮೊದಲಾದ ಅನಿಷ್ಟಗಳು ಶತಮಾನಗಳ ಕಾಲ ಮುಂದುವರಿಯಲು ಕಾರಣವಾದ ಮನುಸ್ಮೃತಿಯನ್ನು ಡಾ.ಅಂಬೇಡ್ಕರ್ 1927ರ ಡಿಸೆಂಬರ್ 25ರಂದು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು. ಸ್ವಾತಂತ್ರ್ಯ ಭಾರತಕ್ಕೆ ಸಂವಿಧಾನವನ್ನು ರೂಪಿಸುವ ಸಂದರ್ಭದಲ್ಲಿ ಸಮ ಸಮಾಜದ ನಿರ್ಮಾಣದ ಕನಸು ಹೊತ್ತು ಸಮಾನತೆ ಸಹೋದರತೆ, ಭ್ರಾತೃತ್ವದ ಆಶಯದೊಂದಿಗೆ ಸಂವಿಧಾನವನ್ನು ರೂಪಿಸಿಕೊಂಡೆವು. ಈ ಸಂವಿಧಾನ ರಚನೆಗೆ ಬಾಬಾ ಸಾಹೇಬರ ಕೊಡುಗೆ ಅಗಾಧವಾದದ್ದು” ಎಂದು ಸ್ಮರಿಸಿದರು.
ಇದನ್ನು ಓದಿದ್ದೀರಾ? ಸಜ್ಜನರ ಸಲ್ಲಾಪ – 3: ತಿಂಗಳ ಅತಿಥಿಯಾಗಿ ಬಿ.ಟಿ.ಲಲಿತಾನಾಯಕ್
ಸಂವಿಧಾನ ಸಮರ್ಪಣೆಯಾದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯು ನಮ್ಮ ಸಂವಿಧಾನದ ಮೇಲೆ ಅಸಹನೆಯನ್ನು ಹೊರಹಾಕಿತ್ತು. ‘ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ. ಸಂವಿಧಾನ ರಚನಾಕಾರರು ಮನುಸ್ಮೃತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ’ ಎಂದು ಮೂದಲಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಆಂತರಿಕವಾಗಿಯೂ ಬಹಿರಂಗವಾಗಿಯೂ ಡಾ.ಅಂಬೇಡ್ಕರ್ ಮೇಲೆ, ಸಂವಿಧಾನದ ಮೇಲೆ ಅಸಹಿಷ್ಣುತೆಯನ್ನು ಆರ್‌ಎಸ್‌ಎಸ್ – ಬಿಜೆಪಿ ಸಂಘ ಪರಿವಾರ ಹೊರಹಾಕುತ್ತಲೇ ಬಂದಿದೆ. ಮನು ಪ್ರಣೀತ ಭಾರತವನ್ನು ಬದಿಗೆ ಸರಿಸಿ, ಸಮಾನತೆ ಸಾರಿದ ಬೌದ್ಧತತ್ವ ಪ್ರಣೀತ, ಪ್ರಜಾತಾಂತ್ರಿಕ ಸಂವಿಧಾನವನ್ನು ಅಂಬೇಡ್ಕರ್ ಈ ದೇಶಕ್ಕೆ ರೂಪಿಸಿಕೊಟ್ಟಿದ್ದನ್ನು ಸಹಿಸಿಕೊಳ್ಳದ ಶಕ್ತಿಗಳು ಇಂದು ಬಲವಾಗಿವೆ ಬಲವಾಗುತ್ತಿವೆ. ಜನರ ದಿಕ್ಕು ತಪ್ಪಿಸಿ, ಸುಳ್ಳು ಹಬ್ಬಿಸುವ ಕಾರ್ಯದಲ್ಲಿ ಸಕ್ರಿಯವಾಗಿವೆ, ಇದರ ವಿರುದ್ದ ಬಹುಜನರು ಜಾಗೃತರಾಗಬೇಕು” ಎಂದು ಕರೆ ನೀಡಿದರು.
ಮನುಸ್ಮೃತಿಯನ್ನು ಒಪ್ಪಿಕೊಳ್ಳುವುದೆಂದರೆ ಭಾರತವನ್ನು ಶತಮಾನಗಳ ಕಾಲ ಹಿಂದಕ್ಕೆ ಕರೆದೊಯ್ದಂತೆ. ಇದನ್ನು ಸ್ಪಷ್ಟವಾಗಿ ಆರ್‌ಎಸ್‌ಎಸ್‌ನ ಗೋಳ್ವಾಲ್ಕರ್ ಹೀಗೆ ಹೇಳಿದ್ದರು. “ಜಾತಿ ವ್ಯವಸ್ಥೆ ಸ್ಥಿರವಾಗಿ ಉಳಿಯಬೇಕು. ಹೀಗಾಗಿ ನಮ್ಮ ಉದ್ದೇಶವೇ ಭಾರತವನ್ನು ನೂರಿನ್ನೂರು ವರ್ಷ ಹಿಂದಕ್ಕೆ ಕರೆದೊಯ್ಯುವುದಲ್ಲ, ಬದಲಾಗಿ ಸಾವಿರ ವರ್ಷ ಹಿಂದಕ್ಕೆ ಕರೆದೊಯ್ಯುವುದು” ಎಂದಿದ್ದರು. ಈ ಮಾತುಗಳನ್ನು ನಾವು ಸದಾ ನೆನಪಿನಲ್ಲಿಡಬೇಕು. ಸಂವಿಧಾನ ಉಳಿಯಬೇಕಾದರೆ ಮನು ಸಿದ್ಧಾಂತ ಸಂಪೂರ್ಣ ನಶಿಸಿ ಹೋಗಬೇಕು. ಬಾಬಾ ಸಾಹೇಬರು ಮನುಸ್ಮೃತಿಯನ್ನು ಸುಟ್ಟಿದ್ದು ಒಂದು ಚಾರಿತ್ರಿಕ ವಿದ್ಯಮಾನ. ಈ ಪ್ರಕ್ರಿಯೆಯನ್ನು ನಾವು ಮುಂದುವರಿಸಬೇಕಿದೆ ಎಂದರು.
ಇದನ್ನು ನೋಡಿದ್ದೀರಾ? ಮಂಡ್ಯ | ‘ರಸ್ತೆ ಮೇಲೆ ಓಡಾಡಲು ನಿರ್ಬಂಧ; ಸಂಕಷ್ಟಕ್ಕೆ ಸಿಲುಕಿದ ಕುಟುಂಬ!
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಿದ್ದರಾಜು, ಸಿಐಟಿಯುನ ಸಿ.ಕುಮಾರಿ, ನ್ಯಾಯವಾದಿಗಳಾದ ಬಿ.ಟಿ.ವಿಶ್ವನಾಥ್, ಕರ್ನಾಟಕ ರಾಜ್ಯ ರೈತ ಸಂಘದ ಪಾಂಡು, ಲಕ್ಷ್ಮಣ್ ಚೀರನಹಳ್ಳಿ, ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಜಾಗೃತ ಕರ್ನಾಟಕದ ನಾಗೇಶ್, ಮಹಿಳಾ ಮುನ್ನಡೆಯ ಶಿಲ್ಪ, ಹುರುಗಲವಾಡಿ ರಾಮಯ್ಯ, ಗಂಜಾಂ ರವಿಚಂದ್ರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.