ಒಂದೆಡೆ, ಸಕ್ಕರೆ ಕಾರ್ಖಾನೆಯು ತನ್ನ ಕಬ್ಬು ನುರಿಯುವ ಸಾಮರ್ಥ್ಯವನ್ನು ಹೆಚ್ಚಿಸಲು, ಹೆಚ್ಚು ವಿದ್ಯುತ್ ಉತ್ಪಾದಿಸಲು ಹಾಗೂ ಎಥನಾಲ್ ಘಟಕ ಸ್ಥಾಪಿಸಲು ಭಾರೀ ಪ್ರಯತ್ನ ಮಾಡುತ್ತಿದೆ. ಮತ್ತೊಂದೆಡೆ, ಆ ಕಾರ್ಖಾನೆಯಿಂದ ಹೊರಬರುವ ಧೂಳು, ತ್ಯಾಜ್ಯದಿಂದ ಸುತ್ತಲಿನ ಗ್ರಾಮಗಳ ಜನರು ಅನಾರೋಗ್ಯದ ಆತಂಕದಲ್ಲಿದ್ದಾರೆ. ಕಾರ್ಖಾನೆಯ ತ್ಯಾಜ್ಯವು ನದಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಎಥನಾಲ್ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು. ಕಾರ್ಖಾನೆಯ ತ್ಯಾಜ್ಯ ನದಿಗೆ ಸೇರುವುದನ್ನು ತಡೆಯಬೇಕೆಂದು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ – ಇದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಮಾಕವಳ್ಳಿ ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳ ಜನರ ಪರಿಸ್ಥಿತಿ.
ಮಾಕವಳ್ಳಿಯಲ್ಲಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ (ಐಸಿಎಲ್) ವಿರುದ್ಧ ಅಲ್ಲಿನ ಸುತ್ತಮುತ್ತಲ ಗ್ರಾಮಗಳ ರೈತರು ಹೋರಾಟ ನಡೆಸುತ್ತಲೇ ಇದ್ದಾರೆ. ಕಾರ್ಖಾನೆಯು ಹಲವು ನಿಯಮಗಳನ್ನು ಪಾಲಿಸುತ್ತಿಲ್ಲ. ಕಾರ್ಖಾನೆಯ ತ್ಯಾಜ್ಯವನ್ನು ಪಕ್ಕದಲ್ಲೇ ಹರಿಯುತ್ತಿರುವ ಹೇಮಾವತಿ ನದಿಗೆ ನೇರವಾಗಿ ಹರಿಸಲಾಗುತ್ತಿದೆ. ಕಾರ್ಖಾನೆಯಲ್ಲಿ ಕಲ್ಲಿದ್ದಲು ಬಳಸುತ್ತಿದ್ದು, ಧೂಳು ಮತ್ತು ಕಲ್ಲಿದ್ದಲು ಪುಡಿಗಳು ಗ್ರಾಮವನ್ನು ವ್ಯಾಪ್ತಿಸುತ್ತಿವೆ. ಬೆಳೆ ಹಾನಿಯಾಗಿ ಕೃಷಿಯಲ್ಲಿ ಇಳುವರಿ ಕೂಡ ಕಮ್ಮಿಯಾಗುತ್ತಿದೆ. ಕಲ್ಲಿದ್ದಲು ಬಳಕೆಗೆ ಅವಕಾಶ ನೀಡಬಾರದು, ಹೊಗೆ ಚಿಮಣಿಯನ್ನು ಎತ್ತರಿಸಬೇಕು. ಎಥನಾಲ್ ಘಟಕ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ರೈತರು ಒತ್ತಾಯಿಸುತ್ತಲೇ ಇದ್ದಾರೆ.
ಆದರೂ, ಕಾರ್ಖಾನೆಯು ರೈತರ ಆತಂಕವನ್ನು ಪರಿಗಣಿಸಿದಂತೆ ಕಾಣತ್ತಿಲ್ಲ. ಕಾರ್ಖಾನೆ ಸದ್ಯ ಪ್ರತಿನಿತ್ಯ 3,500 ರಿಂದ 4,800 ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಅದು ಸದ್ಯಕ್ಕೆ ಸರಾಸರಿ ದಿನಕ್ಕೆ 4,000 ಟನ್ ಕಬ್ಬು ನುರಿಯುತ್ತಿದೆ. ಹೀಗಿದ್ದರೂ, ತನ್ನ ಸಾಮರ್ಥ್ಯವನ್ನು 6,000 ಟನ್‌ಗೆ ಹೆಚ್ಚಿಸಲು ಮತ್ತು ಎಥನಾಲ್ ಘಟಕ ಸ್ಥಾಪನೆಗೆ ಮುಂದಾಗಿದೆ. 2012ರಲ್ಲಿಯೂ ಎಥನಾಲ್ ಘಟಕ ಸ್ಥಾಪಿಸುವ ಸಾಹಸಕ್ಕೆ ಕಾರ್ಖಾನೆ ಕೈ ಹಾಕಿತ್ತು. ಆದರೆ, ರೈತರ ನಿರಂತರ ಹೋರಾಟದಿಂದ ಹಸಿರು ನ್ಯಾಯಾಲಯವು ಘಟಕ ಸ್ಥಾಪನೆಯನ್ನು ರದ್ದುಗೊಳಿಸಿತ್ತು.

ಇದೀಗ, ಮತ್ತೆ ಎಥನಾಲ್ ಘಟಕ ಸ್ಥಾಪನೆಗೆ ಮುಂದಾಗಿದೆ. ಅಲ್ಲದೆ, ತನ್ನ ಕಬ್ಬು ನುರಿಯುವ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು 150 ಕಿ.ಲೋ ಡಿಸ್ಟಲರಿ (ಸ್ಪಿರಿಟ್-ಮದ್ಯ) ಉತ್ಪಾದನೆ ಹಾಗೂ 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮುಂದಾಗಿದೆ. ಇದರಿಂದ ಪರಿಸರಕ್ಕೆ ಮತ್ತಷ್ಟು ಹಾನಿಯಾಗುತ್ತದೆ. ಮಾತ್ರವಲ್ಲದೆ, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.
ಕಾರ್ಖಾನೆಯು ಪರಿಸರ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲವೆಂದು ರೈತರು ಆರೋಪಿಸಿದ್ದಾರೆ. ಕಾರ್ಖಾನೆಯ ಹೊಗೆ ಚಿಮಣಿಯು 90 ಮೀ. ಎತ್ತರಕ್ಕೆ ಇರಬೇಕು. ಆದರೆ, ಈ ಕಾರ್ಖಾನೆಯ ಚಿಮಣಿ ಕೇವಲ 70 ಮೀ. ಮಾತ್ರವೇ ಇದೆ. ಇದರಿಂದ ಹೊಗೆ ಮತ್ತು ಧೂಳು ಹಳ್ಳಿಗಳ ಮನೆ, ಬೆಳೆಗಳ ಜೊತೆ ಬೆರೆಯುತ್ತಿದೆ. ಕಾರ್ಖಾನೆಯ ಬೂದಿ ತಿನ್ನುವ ಆಹಾರ, ಉಸಿರಾಡುವ ಗಾಳಿ ಮೂಲಕ ಜನರ ದೇಹ ಸೇರುತ್ತಿದೆ ಎಂದು ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಕವಳ್ಳಿ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಂಗಳೂರಿನ ಪರಿಸರ ಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ. ಅವರು ಶುದ್ಧ ಕುಡಿಯುವ ನೀರು ಮತ್ತು ಮಾಕವಳ್ಳಿಯಲ್ಲಿ ಸಿಗುವ ನೀರನ್ನು ಬಾಟಲಿಗಳಲ್ಲಿ ತಂದು ಅಧಿಕಾರಗಳ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ತಮ್ಮೂರಿನಲ್ಲಿ ಸಿಗುವ ನೀರು ಹಳದಿ, ಕೆಂಪು ಮಿಶ್ರಿತ ಕಲುಷಿತ ನೀರಾಗಿದ್ದು, ನದಿ ನೀರು ಕೂಡ ಕಾರ್ಖಾನೆಯ ತ್ಯಾಜ್ಯದ ಕಾರಣದಿಂದಾಗಿ ವಿಷವಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ಕಾರ್ಖಾನೆಯ ಸುತ್ತಲಿನ ಹಳ್ಳಿಗಳಲ್ಲಿ ಮನೆಗಳು, ಬೆಳೆಗಳು, ಆಹಾರದ ಮೇಲೆ ಬೂದಿ ಬೀಳುತ್ತಿದೆ. ಈ ಬಗ್ಗೆ ಕೆ.ಆರ್ ಪೇಟೆ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಬೂದಿ ಬೀಳುತ್ತಿರುವುದು ಸತ್ಯವೆಂದು ಒಪ್ಪಿಕೊಂಡಿದ್ದಾರೆ. ಆದರೂ, ಕಾರ್ಖಾನೆಯು ‘ಏರ್ ಪೊಲ್ಯೂಷನ್ ಮಾನಿಟರಿಂಗ್ ಸಿಸ್ಟಮ್’ನಲ್ಲಿ ಬೂದಿ ಬೀಳುತ್ತಿಲ್ಲವೆಂದು ಸುಳ್ಳು ಮಾಹಿತಿ ನೀಡಿದೆ” ಎಂದು ರೈತರು ಆರೋಪಿಸಿದ್ದಾರೆ.

ತಮ್ಮ ಸಮಸ್ಯೆಗಳ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ರೈತ ಹೋರಾಟಗಾರ ಕರೋಟಿ ತಮ್ಮಣ್ಣ, “ಕೋರಮಂಡಲ್ ಸಕ್ಕರೆ ಕಾರ್ಖಾನೆಯವರ ಅಸಡ್ಡೆಯಿಂದ ಸುತ್ತಲಿನ ಪರಿಸರ ಹಾಳಾಗುತ್ತಿದೆ. ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಬೆಳೆ ಹಾನಿಯಾಗಿ ಕೃಷಿಯಲ್ಲಿ ಇಳುವರಿ ಕೂಡ ಕಮ್ಮಿಯಾಗುತ್ತಿದೆ. ಅಷ್ಟೇ ಅಲ್ಲ ಹೇಮಾವತಿ ನದಿ ನೀರು ಕಲುಷಿತವಾಗುತ್ತಿದೆ. ನದಿ ಮತ್ತು ನಮ್ಮ ಬದುಕನ್ನು ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸುತ್ತಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತ್ಯಾಜ್ಯ ನೀರನ್ನು ಶುದ್ಧೀಕರಿಸಿ ನೀರನ್ನು ಹೊರ ಬಿಡಬೇಕು. ಆದರೆ, ಅದನ್ನು ಮಾಡಲಾಗುತ್ತಿಲ್ಲ. ಅಸ್ತಮ, ಕ್ಯಾನ್ಸರ್ ಬರುವ ಆತಂಕ ಜನರಲ್ಲಿದೆ. ಗರ್ಭಾವಸ್ಥೆಯಲ್ಲಿಯೇ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಹುಟ್ಟುವ ಮಕ್ಕಳು ಅನಾರೋಗ್ಯದಿಂದ ಹುಟ್ಟುತ್ತಿವೆ. ಜಾನುವಾರುಗಳಿಗೂ ತೊಂದರೆಯಾಗುತ್ತದೆ” ಎಂದು ರೈತ ಮುಖಂಡ ರವಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಕಂಬಳಿ ನೇಕಾರರ ಅತಂತ್ರ ಬದುಕಿಗೆ ಬೇಕು ಸರ್ಕಾರದ ಆಸರೆ
ಇಷ್ಟೆಲ್ಲ ಸಮಸ್ಯೆಗಳಿವೆ. ಇವುಗಳ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮಂಡ್ಯದ ಜಿಲ್ಲಾಡಳಿತ, ಅಷ್ಟೇ ಏಕೆ ತಮ್ಮ ಕ್ಷೇತ್ರದ ಮೂಲಕ ಇದುವರೆಗೂ ಆಯ್ಕೆಯಾದ ಎಲ್ಲ ಶಾಸಕರ ಬಳಿಯೂ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದ್ದೇವೆ. ಆದರೆ, ಯಾವೊಬ್ಬ ಜನಪ್ರತಿನಿಧಿಯೂ ಆ ಕುರಿತು ಮಾತನಾಡಲು ಸಿದ್ದರಿಲ್ಲ. ಕಾರ್ಖಾನೆಯು ಎಥನಾಲ್ ಘಟಕ ಸ್ಥಾಪಿಸುವ ಮೂಲಕ ಮತ್ತಷ್ಟು ತ್ಯಾಜ್ಯವನ್ನ ಪರಿಸರಕ್ಕೆ ಬಿಡಲು ಸಜ್ಜಾಗಿದೆ ಎಂದು ರೈತರು ಕಿಡಿಕಾರಿದ್ದಾರೆ.
ಕೋರಮಂಡಲ್ ಸಕ್ಕರೆ ಕಾರ್ಖಾನೆ ಐಪಿಎಲ್‌ನ ಫೇಮಸ್ ಕ್ರಿಕೆಟ್ ಟೀಂ ಚನೈ ಸೂಪರ್ ಕಿಂಗ್ಸ್ ತಂಡದ ಅಧ್ಯಕ್ಷನಾಗಿದ್ದ ಶ್ರೀನಿವಾಸನ್ ಎಂಬ ಪ್ರಭಾವಿ ವ್ಯಕ್ತಿಗೆ ಸೇರಿದ್ದಾಗಿದೆ. ಆತ ಪ್ರಭಾವದಿಂದಾಗಿ ಯಾವೊಬ್ಬ ಅಧಿಕಾರಿಯೂ ತುಟಿಕ್-ಪಿಟಿಕ್ ಎನ್ನುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
“ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಕಾರ್ಖಾನೆಯು ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದೆಯೇ ಅಥವಾ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ” ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಛೇರ್‌ಮನ್ ಶಾಂತ ತಿಮ್ಮಯ್ಯ ಹೇಳಿದ್ದಾರೆ.