ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ 19 ಮಂದಿ ವಿರುದ್ಧ ಮಂಡ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ್ದಾರೆ.
ಫೆಬ್ರವರಿ 12ರಂದು ಮಂಡ್ಯ ಜಿಲ್ಲೆಯ ಯುವತಿ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಆತ್ಮಹತ್ಯೆಗೆ ಮಾರಸಿಂಗನಹಳ್ಳಿಯ ಹರಿಕೃಷ್ಣ ಮತ್ತು ಆತನ ಕುಟುಂಬಸ್ಥರೇ ಕಾರಣವೆಂದು ಆಕೆಯ ತಾಯಿ ಲಕ್ಷ್ಮಿ ಆರೋಪಿಸಿದ್ದರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಪೊಲೀಸರು ತನಿಖೆ ನಡೆಸದೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂದು ಡೆತ್‌ನೋಟ್ ಬರೆದಿಟ್ಟು ಶುಕ್ರವಾರ ಲಕ್ಷ್ಮಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿನ ಬಳಿಕ, ಪೊಲೀಸರು 19 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
21 ವರ್ಷದ ಯುವತಿ ವಿಜಯಲಕ್ಷ್ಮಿ ಮತ್ತು ಮಾರಸಿಂಗನಹಳ್ಳಿಯ ಹರಿಕೃಷ್ಣ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ, ಹರಿಕೃಷ್ಣ ಪ್ರೀತಿಯ ಹೆಸರಿನಲ್ಲಿ ಆಕೆಯನ್ನು ಶೋಷಿಸಿ, ಮೋಸ ಮಾಡಿದ್ದ. ಆ ಕಾರಣದಿಂದಲೇ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮಿ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಆದರೆ, ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ತಮ್ಮ ಮಗಳು ಸಾವನ್ನಪ್ಪಿ 20 ದಿನಗಳಾದರೂ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ. ಆರೋಪಿಗಳ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿಲ್ಲ. ಆರೋಪಿಯೊಂದಿಗೆ ಶಾಮೀಲಾಗಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಹೋಗಿದ್ದಕ್ಕೆ ಗ್ರಾಮಸ್ಥರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ಲಕ್ಷ್ಮಿ ತಮ್ಮ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.
ತಮ್ಮ ಡೆತ್‌ನೋಟ್‌ನಲ್ಲಿ ಆರೋಪಿಗಳ ಹೆಸರನ್ನೂ ಉಲ್ಲೇಖಿಸಿದ್ದು, ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಲಕ್ಷ್ಮಿ ಅವರ ಸಾವಿನ ಬಳಿಕ, ಗ್ರಾಮಸ್ಥರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದೀಗ, ಪೊಲೀಸರು ಹರಿಕೃಷ್ಣ, ಆತನ ಕುಟುಂಬಸ್ಥರು ಸೇರಿದಂತೆ 19 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.