ಮಂಡ್ಯ | ಹಿಂದುತ್ವ ಶೋಭಯಾತ್ರೆಯಲ್ಲಿ ನಿಶ್ಚಲಾನಂದರ ಭಾಗವಹಿಸುವಿಕೆಗೆ ವ್ಯಾಪಕ ವಿರೋಧ

Date:

Advertisements

ಮಂಡ್ಯ ಜಿಲ್ಲೆಯಲ್ಲಿ ಕೋಮು ಸಂಘರ್ಷದ ನೆಲೆ ಮಾಡಿಕೊಳ್ಳಲು ಹಿಂದುತ್ವವಾದಿಗಳು ಹವಣಿಸುತ್ತಿದ್ದಾರೆ ಎಂಬ ಆತಂಕವಿದೆ. ಶ್ರೀರಂಗಪಟ್ಟಣ ಮಸೀದಿಯನ್ನು ವಿವಾದಿತ ತಾಣವಾಗಿಸುವ ಹುನ್ನಾರಗಳು ನಡೆಯುತ್ತಿವೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆಗಳು ನಡೆದಿವೆ. ಇದೀಗ, ಮಂಡ್ಯದಲ್ಲಿ ಶೋಭಯಾತ್ರೆ ನಡೆಸಲು‌ ಮುಂದಾಗಿದ್ದು, ಕಾರ್ಯಕ್ರಮವು ಕೋಮು ದ್ವೇಷ ಹರಡುವ ದಾಳವಾಗಬಹುದೆಂದು ಜಿಲ್ಲೆಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಏಪ್ರಿಲ್‌ 12ರಂದು ವಿಶ್ವ ಹಿಂದು ಪರಿಷತ್, ಬಜರಂಗದಳ‌ ಹಾಗೂ ಶ್ರೀರಾಮಾಂಜನೇಯ ಮಹೋತ್ಸವ ಸಮಿತಿ ಜಂಟಿಯಾಗಿ ‘ಶ್ರೀರಾಮಾಂಜನೇಯ ಮಹೋತ್ಸವ’ ಕಾರ್ಯಕ್ರಮ ಮತ್ತು ಶೋಭಾಯಾತ್ರೆ ಆಯೋಜಿಸಿವೆ. ಕಾರ್ಯಕ್ರಮದಲ್ಲಿ ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಭಾಗವಹಿಸುತ್ತಿದ್ದಾರೆ. ಮಾತ್ರವಲ್ಲದೆ, ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ, ಸಮಾಜಿಕ ಚಿಂತನೆ ಹೊಂದಿದ್ದ, ಈಗ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿರುವ ನಿಶ್ಚಲಾನಂದ ಸ್ವಾಮೀಜಿ (ಎಚ್.ಎಲ್. ನಾಗರಾಜ್) ಕೂಡ ಭಾಗವಹಿಸುತ್ತಾರೆಂದು ಆಯೋಜಕರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸೂಲಿಬೆಲೆ ಕೋಮು ದ್ವೇಷದ ಭಾಷಣ ಮಾಡುತ್ತಾರೆ. ಯುವಜನರಲ್ಲಿ ಕೋಮು ಪ್ರಚೋದನೆ ಬಿತ್ತುತ್ತಾರೆ. ಸೂಲಿಬೆಲೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಮತ್ತು ಇಂತಹ ಕೋಮುವಾದಿ ಕಾರ್ಯಕ್ರಮದಿಂದ ನಿಶ್ಚಲಾನಂದರು ದೂರ ಉಳಿಯಬೇಕು ಎಂದು ಮಂಡ್ಯದ ಜನರು ಒತ್ತಾಯಿಸಿದ್ದಾರೆ.

ಸುಳ್ಳು, ದ್ವೇಷಪೂರಿತ ಹೇಳಿಕೆಗಳ ಮೂಲಕ ಯುವಜನರನ್ನು ಪ್ರಚೋದಿಸುತ್ತಿರುವ, ಸಮಾಜದಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಸೂಲಿಬೆಲೆ ಭಾಗವಹಿಸುವ ಕಾರ್ಯಕ್ರಮದಲ್ಲಿ ನಿಶ್ಚಲಾನಂದರು ಭಾಗವಹಿಸುವ ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಮಂಡ್ಯದ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

Advertisements

“ಮಂಡ್ಯದಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಭಾಯಾತ್ರೆ ಮಂಡ್ಯ ಜನರ ಸಾಮರಸ್ಯವನ್ನು ಹಾಳು ಮಾಡುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಈ ಹಿಂದೆ ನಡೆದ ಕೆರಗೋಡು ಪ್ರಕರಣ ಇಡೀ ಜಿಲ್ಲೆಯ ಸಾಮರಸ್ಯವನ್ನು ಹಾಳು ಮಾಡಿತು. ಸಾಮರಸ್ಯದಿಂದ ಜೊತೆಯಾಗಿದ್ದ ಗ್ರಾಮದ ಜನರನ್ನು ಬದ್ದ ವೈರಿಗಳಂತೆ ಒಡೆದಾಟಕ್ಕೆ ದೂಡಲಾಯಿತು. ಆ ಗಲಭೆಯನ್ನು ತಡೆಗಟ್ಟಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಡೀ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಶ್ರಮಿಸಿತ್ತು. ಆ ಬಳಿಕ, ನಾಗಮಂಗಲದಲ್ಲಿ ಉಂಟಾದ ಗಲಭೆಯಲ್ಲಿ ಅಮಾಯಕ ಯುವಕ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಬಡ ಕುಟುಂಬದ ಮಕ್ಕಳು ಜೈಲು ಸೇರುವಂತಾಯಿತು. ಸಮಾಜದಲ್ಲಿ ಅಶಾಂತಿ ಮೂಡಿಸುವ ಪೂರ್ವ ಯೋಜಿತ ಕಾರ್ಯಕ್ರಮಕ್ಕೆ ದ್ವೇಷ ಭಾಷಣಕಾರ ಸೂಲಿಬೆಲೆ ಭಾಗವಹಿಸಬಾರದು. ಈ ಕೋಮುವಾದಿ ಕಾರ್ಯಕ್ರಮಕ್ಕೆ ನಿಶ್ಚಲಾನಂದರು ಬರುವುದು ತಪ್ಪು ಸಂದೇಶ ನೀಡುತ್ತದೆ. ಅವರು ಕಾರ್ಯಕ್ರಮದಿಂದ ದೂರ ಉಳಿಯಬೇಕು” ಎಂದು ಕರ್ನಾಟಕ ಜನಶಕ್ತಿಯ ಪೂರ್ಣಿಮ ಒತ್ತಾಯಿಸಿದ್ದಾರೆ.

“ಮಂಡ್ಯ ಜಿಲ್ಲೆಗೆ ದ್ವೇಷ ಹರಡುವ, ಗಲಭೆಗೆ ಪ್ರಚೋದನೆ ಕೊಡುವ, ಶಾಂತಿ ಸುವ್ಯವಸ್ಥೆ ಹಾಳುಮಾಡುವ ವ್ಯಕ್ತಿಗಳ ಭಾಷಣದ ಅವಶ್ಯಕತೆ ಇಲ್ಲ. ಹಲವಾರು ದಾರ್ಶನಿಕರನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟ ನೆಲ ನಮ್ಮದು. ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿ ಬದುಕಬೇಕೆಂಬ ಮಾನವೀಯತೆಯ ಮೌಲ್ಯವನ್ನು ಕಲಿತು ಮುಂದಿನ ಪೀಳಿಗೆಗೆ ತಲುಪಿಸಬೇಕೆಂಬ ಕನಸು ಹೊತ್ತು ರೈತ, ದಲಿತ, ಕಾರ್ಮಿಕ, ಮಹಿಳಾ ಸಂಘಟನೆಯ ಹಲವು ಹಿರಿಯ ಹೋರಾಟಗಾರರು ಇಂದಿಗೂ ಶ್ರಮಿಸುತ್ತಿರುವ ಜಿಲ್ಲೆ ಮಂಡ್ಯ. ಇಲ್ಲಿ ದೇವರು ಧರ್ಮದ ಹೆಸರಿನಲ್ಲಿ ಸಾಮರಸ್ಯ ಹಾಳುಮಾಡುವ ಹುನ್ನಾರ ನಡೆಯುವುದಿಲ್ಲ. ಜಿಲ್ಲಾಡಳಿತ ಕೂಡಲೇ ಹೆಚ್ಚೆತ್ತುಕೊಂಡು ದ್ವೇಷ ಭಾಷಣ ಗಲಭೆ ಸೃಷ್ಟಿಸುವ ಯಾವುದೇ ಘಟನೆಗಳು ನಡೆಯಲು ಅವಕಾಶ ಕೊಡದಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಶೋಭಯಾತ್ರೆ ಹೆಸರಲ್ಲಿ ಸಲ್ಲದ ನಡಾವಳಿಯೊಂದನ್ನು ಮಂಡ್ಯದಲ್ಲಿ ನಡೆಸುವ ಹುನ್ನಾರವಿದೆ. ಜಿಲ್ಲೆಯಲ್ಲಿ ಕೊಂಡ ಬಂಡಿ ಗ್ರಾಮದೇವತೆಗಳ ಉತ್ಸವ ಸರ್ವೇ ಸಾಮಾನ್ಯ. ಆದರೆ ಈ ಶೋಭಯಾತ್ರೆ ಹೆಸರಿನಲ್ಲಿ ಡಿಜೆ ಹಾಕಿಕೊಂಡು ಕುಣಿಯುವುದರಲ್ಲಿ ಯಾವ ಧಾರ್ಮಿಕತೆಯು ಇಲ್ಲ. ಜನರ ಧಾರ್ಮಿಕ ನಂಬಿಕೆಗಳನ್ನು ತಮ್ಮ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುವುದು ಇದರ ಉದ್ದೇಶ. ಈ ಕುರಿತು ರಾಜ್ಯ ಸರ್ಕಾರ ಎಚ್ಚರವಹಿಸಬೇಕು. ಶೋಭಯಾತ್ರೆ ಹೆಸರಿನ ರಾಜಕೀಯ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಬೇಕು” ಎಂದು ಕರುನಾಡ ಸೇವಕರು ಸಂಘಟನೆಯ ಎಂ.ಬಿ ನಾಗಣ್ಣಗೌಡ ಒತ್ತಾಯಿಸಿದ್ದಾರೆ.

“ನಿಶ್ಚಲಾನಂದರು (ಪೂರ್ವಾಶ್ರಮದ ವಿಚಾರವಂತ ಎಚ್ಎಲ್ ನಾಗರಾಜು) ಕೋಮುವಾದಿ ಸಂಘಟನೆಯೊಂದರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದುದನ್ನು ನೋಡಿದಾಗ ಆತಂಕವಾಯಿತು. ಕೋಮುಸೌಹಾರ್ದರಲ್ಲಿ ಮಂಡ್ಯ ಜಿಲ್ಲೆ ಮೊಲದ ಸ್ಥಾನದಲ್ಲಿದೆ. ನಾನು ಬಹಳ ಕಾಲ ಮಂಡ್ಯ ಜಿಲ್ಲಾ ಪ್ರಗತಿಪರ ಮುಸ್ಲಿಂ ಯುವ ವೇದಿಕೆಯ ಗೌರವಾಧ್ಯಕ್ಷನಾಗಿದ್ದೆ. ಬಹುಶಃ ಇಂಥದೊಂದು ಸಂಘಟನೆ ಅಸ್ತಿತ್ವ ತಳೆದಿರುವುದು ಇಡೀ ಇಂಡಿಯಾದಲ್ಲಿ ಮಂಡ್ಯದಲ್ಲಿ ಮಾತ್ರವೇ. ಮಂಡ್ಯದ ಜನರು ಜಾತ್ಯತೀತವಾಗಿ, ಮಾನವೀಯವಾಗಿ ಯೋಚಿಸಬಲ್ಲ ನಡೆಯಬಲ್ಲ ಹೃದಯವಂತರು. ಜಿಲ್ಲೆಯ ಕೋಮು ಸೌಹಾರ್ದದ ಹೆಣಿಗೆಯನ್ನು ಕಾಪಾಡುವುದಕ್ಕೆ ಹೆಣಗುವ ನನ್ನಂತಹ ಅಳಿಲು ಸೇವೆಯಲ್ಲಿ ತೊಡಗಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಆದರೆ, ಕೋಮುವಾದಿಗಳು ಸಾಮರಸ್ಯ ಕದಡಲು ಕೋಮು ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ನಿಶ್ಚಲಾನಂದರು ಭಾಗವಹಿಸುವುದು ಆತಂಕಕಾರಿ. ಅವರು ಇಂಥಹ ಕಾರ್ಯಕ್ರಮದಿಂದ ದೂರ ಉಳಿಯಬೇಕು” ಎಂದು ಹಿರಿಯ ವಕೀಲ ಬಿ.ಟಿ ವಿಶ್ವನಾಥ್ ಆಗ್ರಹಿಸಿದ್ದಾರೆ.

“ನಾಗರಾಜುರವರು ಮಂಡ್ಯದ ಅಪರ ಜಿಲ್ಲಾಧಿಕಾರಿಗಳಾಗಿದ್ದಾಗ ಜನಪರರು ಎಂದು ಹೆಸರುವಾಸಿಗಳಾಗಿದ್ದರು. ಸನ್ಯಾಸಿಗಳಾಗಿ ನಿಶ್ಚಲಾನಂದರಾಗಿದ್ದಾರೆ. ಆದರೆ ಅವರ ಜನಪರತೆ ಕಡಿಮೆ ಆಗಿಲ್ಲ. ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಇವರನ್ನು ರಾಜಕೀಯ ಹಾಗೂ ಧಾರ್ಮಿಕ ದಾಳವಾಗಿ ಬಳಸಲು ಹೊರಟಿದೆಯಾ ಅನುಮಾನ ಮಂಡ್ಯ ಪ್ರಗತಿಪರರನ್ನು ಕಾಡುತ್ತಿದೆ. ಎಪ್ರಿಲ್ 12ರಂದು ಹಮ್ಮಿಕೊಂಡಿರುವ ಶೋಭಾಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂಬ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿದೆ. ಇದು ಮಂಡ್ಯ ಜನತೆಯಲ್ಲಿ ಕಸಿವಿಸಿ ಉಂಟು ಮಾಡುತ್ತಿದೆ. ನಾಗರಾಜುರವರು ಜನಪರ ಅಧಿಕಾರಿಗಳಾಗಿದ್ದವರು, ಮಂಡ್ಯದಲ್ಲಿ ಇವರ ಹೆಸರಿನಲ್ಲಿ ವಿಭಚನೆ ಶಕ್ತಿಗಳ ಬೆಳವಣಿಗೆಗೆ ಅನುವು ನೀಡುವುದಿಲ್ಲ ಎಂಬ ನಂಬಿಕೆ ಇದೆ. ನಾಗರಾಜುರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸದೆ ಮಂಡ್ಯದ ಜನರ ಬಗೆಯಲ್ಲಿ ಜನಪರರಾಗಿಯೇ ಉಳಿಯಲಿ” ಎಂದು ಜಾಗೃತ ಕರ್ನಾಟಕದ ಮುಖಂಡ ನಗರಕೆರೆ ಜಗದೀಶ್ ಆಗ್ರಹಿಸಿದ್ದಾರೆ.

“ಮಂಡ್ಯದಲ್ಲಿ ಆಯೋಜಿಸುತ್ತಿರುವ ‘ರಾಮಾಂಜನೇಯ ಮಹೋತ್ಸವ’ ಶ್ರೀಸಾಮಾನ್ಯರ ರಾಮ ಮತ್ತು ಆಂಜನೇಯನನ್ನು ಹಿಂದುತ್ವದ ಭಯೋತ್ಪಾದನೆಗಾಗಿ ಬಳಸಲು ಆಯೋಜಿಸುತ್ತಿರುವ ರಾಜಕೀಯ ಕಾರ್ಯಕ್ರಮ. ಮಂಡ್ಯ ಜಿಲ್ಲೆಯ ಸೌಹಾರ್ದಪ್ರಿಯ ಜನರನ್ನು ಕೋಮು ಗಲಭೆಗೆ ಸಜ್ಜುಗೊಳಿಸುವ ಕೋಮುವಾದಿ ಕಾರ್ಯಕ್ರಮ. ದರ್ಶನ್ ಪುಟ್ಟಣ್ಣಯ್ಯರಂತಹ ಹಸಿರು ಟವಲ್ ಹಾಕಿಕೊಂಡು ರೈತರ ಹೆಸರಿನಲ್ಲಿ ಆಯ್ಕೆಯಾದ ವ್ಯಕ್ತಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗಬಹಿಸುವುದು ರೈತ ಚಳವಳಿಗೆ ಬಳಿಯುತ್ತಿರುವ ಮಸಿ ಮತ್ತು ಅತ್ಯಂತ ಖಂಡನಾರ್ಹ. ಈ ಕೋಮುವಾದಿ ಉತ್ಸವಕ್ಕೆ ಯಾವ ಧಾರ್ಮಿಕ ಕಿಮ್ಮತ್ತೂ ಇಲ್ಲ. ಆದ್ದರಿಂದ ಸಂಘ ಪರಿವಾರದ ರಾಜಕೀಯ ಆಟಗಳಿಗೆ ಮಂಡ್ಯ ಜಿಲ್ಲೆಯ ಜನ ದಾಳಗಳಾಗುವುದು ಬೇಡ” ಎಂದು ಸಿಪಿಐಎಂ ಮುಖಂಡ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X