ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಬಡರೈತನ ಮೇಕೆಗಳು ಬಲಿಯಾಗಿರುವ ಘಟನೆ ನಡೆದಿದೆ.
ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡರೈತ ಕುಮಾರ್ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದು, “ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಇದರಿಂದ ದಿನೇ ದಿನೆ ತೊಂದರೆಯಾಗುತ್ತಿದೆ. ಕಷ್ಟಪಟ್ಟು ಸಾಕಿದ್ದ ಎಂಟು ಮೇಕೆ ಮರಿಗಳು ಬೀದಿ ನಾಯಿಗಳಿಂದ ಸತ್ತಿವೆ. ಈಗೇನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ” ಎಂದು ಅಳಲು ತೋಡಿಕೊಂಡರು.
ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ರೈತ ಕುಮಾರ್ ಅವರಿಗೆ ಆರ್ಥಿಕ ಧನಸಹಾಯದ ಜತೆಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಮಾನವೀಯತೆ ಮೆರೆದರು.
ಗ್ರಾಮದ ಮುಖಂಡ ಬಸವೇಗೌಡ ಮಾತನಾಡಿ, “ಹಲವು ವರ್ಷಗಳಿಂದ ನಮ್ಮ ಗ್ರಾಮದ ಕುಮಾರ್ ಅವರು ಮೇಕೆ ಸಾಗಾಣಿಕೆ ಮಾಡುತ್ತ ಜೀವನ ಸಾಗಿಸುತ್ತಿದ್ದು, ಬೀದಿ ನಾಯಿಗಳ ಹಾವಳಿಯಿಂದ ಎಂಟು ಮೇಕೆಗಳು ಸಾವಿಗೀಡಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದಲ್ಲಿ ಪದೇಪದೆ ಬೀದಿ ನಾಯಿಗಳು, ಜನರ ಮೇಲೆ, ರಾಸುಗಳ ಮೇಲೆ ದಾಳಿಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸುವಂತೆ ಕಸವನಹಳ್ಳಿ ರಮೇಶ್ ಆಗ್ರಹ
ಗ್ರಾಮ ಪಂಚಾಯಿತಿ ಸದಸ್ಯೆ ರಮ್ಯ ಸುರೇಶ್, ಮಾಜಿ ಸದಸ್ಯೆ ಲತಾ ವಿಶ್ವನಾಥ್, ಕುಮಾರ್, ಬಸವೇಗೌಡ, ರಾಜೇಗೌಡ, ರಂಗೇಗೌಡ, ಕುಮಾರ್ ಗೌಡ, ಸತೀಶ್, ಗೌರಮ್ಮ, ರಾಜೇಗೌಡ, ಮಹೇಶ್, ರೈತ ಕುಮಾರ್, ಗಂಜಿಗೆರೆ ಮಹೇಶ್ ಇದ್ದರು.