ಮಾರುಕಟ್ಟೆಗೆ ಅಗತ್ಯ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ನಾಟಿ ಬೀನ್ಸ್, ದಪ್ಪಮೆಣಸಿನಕಾಯಿ, ನುಗ್ಗೇಕಾಯಿ, ಶುಂಠಿ, ಸುವರ್ಣಗೆಡ್ಡೆ ಮುಂತಾದ ತರಕಾರಿಗಳ ಬೆಲೆ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಕಳೆದ ವಾರ ಏರುಗತಿಯಲ್ಲಿ ಸಾಗುತ್ತಿದ್ದ ಟೊಮೆಟೊ ಬೆಲೆಯಲ್ಲಿ ಸದ್ಯ ನಿಯಂತ್ರಣ ಕಂಡುಬಂದಿದೆ. ₹30ಕ್ಕೆ ಮಾರಾಟವಾಗುತ್ತಿದ್ದ ಕೆ ಜಿ ಟೊಮೆಟೊ ಇದೀಗ ₹20ಕ್ಕೆ ಇಳಿಕೆಯಾಗಿದೆ. ಎಲೆಕೋಸು, ಸೌತೆಕಾಯಿ, ಸಿಹಿಗುಂಬಳ, ಬೂದುಗುಂಬಳ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದೆ. ಫಾರಂ ಬೀನ್ಸ್ ₹80ರಿಂದ ₹100ರವರೆಗೆ ಮಾರಾಟವಾಗುತ್ತಿದ್ದರೆ, ನಾಟಿ ಬೀನ್ಸ್ ₹100ರಿಂದ ₹120ರವರೆಗೂ ಮಾರಾಟವಾಗುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ.
“ಬೇಸಿಗೆಯಂತಹ ಬಿಸಿಲು ಕಾಡುತ್ತಿದ್ದು, ಮಾರುಕಟ್ಟೆಗೆ ತಾಜಾ ತರಕಾರಿ ಬರುತ್ತಿಲ್ಲ. ಹೀಗಾಗಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮುಂದೆ ಬಿಸಿಲು ಕಡಿಮೆಯಾದರೆ ಮಾರುಕಟ್ಟೆಗೆ ಉತ್ತಮ ತರಕಾರಿ ಬರುತ್ತದೆ. ಬೆಲೆಯೂ ಕಡಿಮೆಯಾಗಲಿದೆ” ಎಂದು ತರಕಾರಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
“ಸೌತೆಕಾಯಿ, ಎಲೆಕೋಸು ಕೆಜಿಗೆ ₹25ರಂತೆ ದೊರೆಯುತ್ತಿದೆ. ಬೆಂಡೆಕಾಯಿ, ಸೋರೆಕಾಯಿ, ಪಡವಲಕಾಯಿ, ಆಲೂಗೆಡ್ಡೆ ₹30, ಬಜ್ಜಿ ಮೆಣಸಿನಕಾಯಿ, ಕ್ಯಾರೆಟ್, ಸೀಮೆಬದನೆಕಾಯಿ, ಹಾಗಲಕಾಯಿ, ಹೂಕೋಸು, ಅವರೆಕಾಯಿ, ಈರೇಕಾಯಿ, ಮೂಲಂಗಿ, ತೊಂಡೆಕಾಯಿ, ಬೀಟ್‌ರೂಟ್, ಸಿಹಿಗೆಣಸು, ಮರಗೆಣಸು, ಮಂಗಳೂರುಸೌತೆ ₹40, ಸುವರ್ಣಗೆಡ್ಡೆ, ಈರುಳ್ಳಿ ₹50ರಂತೆ ಮಾರಾಟವಾಗುತ್ತಿವೆ” ಎಂದರು.
“ಹಸಿರು ಮೆಣಸಿನಕಾಯಿ, ತಗಣಿಕಾಯಿ ₹60, ಶುಂಠಿ, ಫಾರಂ ಬೀನ್ಸ್, ಗೆಡ್ಡೆಕೋಸು ₹80, ನುಗ್ಗೇಕಾಯಿ, ನಾಟಿ ಬೀನ್ಸ್, ದಪ್ಪಮೆಣಸಿನಕಾಯಿ ₹100, ಹಸಿಬಟಾಣಿ ₹120, ಫಾರಂಬೆಳ್ಳುಳ್ಳಿ ₹160, ನಾಟಿ ಬೆಳ್ಳುಳ್ಳಿ ₹200ರಂತೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಕೈಗೆಟುಕದಂತಾಗಿದೆ. ಆಯುಧಪೂಜೆ ಹಿನ್ನೆಲೆಯಲ್ಲಿ ಒಂದು ನಿಂಬೆಹಣ್ಣಿಗೆ ₹5 ರಿಂದ ₹10ನಂತೆ ಮಾರಾಟವಾಗುತ್ತಿತ್ತು” ಎಂದು ತಿಳಿಸಿದರು.
“ಸೊಪ್ಪುಗಳಲ್ಲಿ ನಾಟಿ ಕೊತ್ತಂಬರಿ ಮತ್ತು ಮೆಂತ್ಯಸೊಪ್ಪು ದುಬಾರಿಯಾಗಿದ್ದು, ಕೀರೆ ₹10, ದಂಟು, ಪಾಲಾಕ್, ಕರಿಬೇವು ₹15, ಸಬ್ಬಸಿಗೆ, ಫಾರಂ ಕೊತ್ತಂಬರಿ, ಕಿಲ್ ಕೀರೆ ₹20, ಚಿಕ್ಕಿಸೊಪ್ಪು, ನಾಟಿ ಕೊತ್ತಂಬರಿ ₹25ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ಮೆಂತ್ಯಸೊಪ್ಪು ಕೊರತೆಯಾಗಿದ್ದು, ಪ್ರತಿ ಕಟ್ಟಿಗೆ ₹40ರಂತೆ ಮಾರಾಟವಾಗುತ್ತಿವೆ” ಎಂದು ಹೇಳಿದರು.
ಹೂವುಗಳಲ್ಲಿ ಮಲ್ಲಿಗೆ, ಕನಕಾಂಬರ, ಕಾಕಡ ಹೂ ಬೆಲೆ ದುಬಾರಿಯಾಗಿದೆ. ಕೆ ಜಿ ಕೆಂಪು ಚೆಂಡು ಹೂ ಮತ್ತು ಹಳದಿ ಚೆಂಡು ಹೂ ₹50, ಬಿಳಿ ಸೇವಂತಿಗೆ ₹230, ಸೇವಂತಿಗೆ, ಬಟನ್ಸ್ ₹250, ಸಣ್ಣಗುಲಾಬಿ ₹300, ಸುಗಂಧರಾಜ ₹400, ಕಣಗಿಲೆ, ಕಲ್ಕತ್ತಾ ಮಲ್ಲಿಗೆ ₹500, ಮರಳೆ ₹600, ಕಾಕಡ ₹800, ಮಲ್ಲಿಗೆ ₹1,000, ಕನಕಾಂಬರ ₹1,200ರವರೆಗೂ ಮಾರಾಟವಾಗುತ್ತಿರುವುದು ಕಂಡುಬಂದಿದೆ.
ಮಾರು ತುಳಸಿ ₹30ರಿಂದ ₹40, ಹಳದಿ ಚೆಂಡುಹೂ ಮತ್ತು ಕೆಂಪು ಚೆಂಡು ಹೂ ₹60, ಕಾಕಡ, ಕಣಗಿಲೆ ₹80, ಸೇವಂತಿಗೆ ₹30ರಿಂದ ₹50, ಬಟನ್ಸ್ ₹60, ಕಣಗಿಲೆ, ಕಾಕಡ ₹80, ಕನಕಾಂಬರ ₹100 ರಂತೆ ಒಂದು ಮಾರಿಗೆ ಮಾರಾಟವಾಗುತ್ತಿವೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬರ: ರೈತರ ಸಂಕಷ್ಟ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ : ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ
ಹಣ್ಣುಗಳಲ್ಲಿ ದಾಳಿಂಬೆ, ಶಿಮ್ಲಾ ಮತ್ತು ದೆಹಲಿ ಸೇಬಿನ ಬೆಲೆ ಹೆಚ್ಚಳವಾಗಿದೆ. ಪಪ್ಪಾಯ ₹25, ಕಲ್ಲಂಗಡಿ ₹30, ಪಚ್ಚಬಾಳೆ, ಕರಬೂಜ ₹40, ಸಪೋಟ ₹50, ಅನಾನಸ್, ಸೀಬೆ, ಸೀತಾಫಲ ₹60, ಕಿತ್ತಳೆ, ಮೂಸಂಬಿ ₹80, ಏಲಕ್ಕಿ ಬಾಳೆ ₹70ರಿಂದ ₹80, ಕಂದ್ರಾಕ್ಷಿ ₹120, ಕಪ್ಪು ದ್ರಾಕ್ಷಿ ₹130, ಕಿವಿಹಣ್ಣು (ಬಾಕ್ಸ್) ₹140, ದಪ್ಪದ್ರಾಕ್ಷಿ, ಕಿತ್ತಳೆ ₹180, ಶಿಮ್ಲಾ ಮತ್ತು ದೆಹಲಿ ಸೇಬು ₹160ರಿಂದ ₹200, ದಾಳಿಂಬೆ ₹270 ರಂತೆ ಪ್ರತಿ ಕೆಜಿಗೆ ಮಾರಾಟವಾಗುತ್ತಿರುವುದು ವರದಿಯಾಗಿದೆ.