ಮಂಡ್ಯ ಪಟ್ಟಣದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜನಪರ ಸಂಘಟನೆಗಳು ಕೆ.ಆರ್.ಎಸ್ ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡ ಹುಲ್ಲೇಗೆರೆ ಹರೀಶ್, “ಟ್ರಯಲ್ ಬ್ಲಾಸ್ಟಿನ ಉದ್ದೇಶ ಸರ್ಕಾರ ಹೇಳುವಂತೆ ಮೇಲ್ನೋಟಕ್ಕೆ ಗಣಿಗಾರಿಕೆಗೆ ಬಗ್ಗೆ ತೀರ್ಮಾನ ಮಾಡಲು ಅಲ್ಲ. ಡಿಸ್ನಿಲ್ಯಾಂಡ್ ಯೋಜನೆಯನ್ನು ಜಾರಿ ಮಾಡಲು ತೆರೆಮರೆಯಲ್ಲಿ ಸಿದ್ದತೆ ನಡೆಸುವಂತೆ ಕಾಣುತ್ತಿದೆ” ಎಂದು ಆರೋಪಿಸಿದರು.
ಅಣೆಕಟ್ಟು ಸುರಕ್ಷತಾ ಕಾಯಿದೆ ಜಾರಿ ಮಾಡುವಂತೆ ಬೋರಾಪುರ ಶಂಕರೇಗೌಡ ಒತ್ತಾಯಿಸಿದರು.
ಕೆ.ಆರ್.ಎಸ್.ಅಣೆಕಟ್ಟೆಯ 20.ಕಿ.ಮೀ.ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಹಾಗೂ 2021ರ ಅಣೆಕಟ್ಟು ಸುರಕ್ಷತಾ ಮಸೂದೆ ಅನ್ವಯ ತಾಂತ್ರಿಕ ಪರಿಣಿತರ ಸಮಿತಿ ರಚಿಸಬೇಕು ಎಂದು ರೈತರು ಒತ್ತಾಯಿಸಿದರು.
ಅಕ್ರಮ ಗಣಿಗಾರಿಕೆಯ ಲಾಭಗಳ ಮೇಲೆ ಕಣ್ಣಿಟ್ಟಿರುವ ಗಣಿ ಮಾಲೀಕರು ಪರವಾನಗಿಯಲ್ಲಿ ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸಿ, ಕಳ್ಳತನದಿಂದ ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ ಹಾಗೂ ತಮ್ಮ ಗಣಿಗಾರಿಕೆಯನ್ನು ತಡೆ ಇಲ್ಲದೆ ನಡೆಸಲು ನ್ಯಾಯಾಲಯದ ನೆರವು ಪಡೆಯುವ ದುಸ್ಸಾಹಸ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಜಿಲ್ಲಾಡಳಿತ ಮುಂದಾಗಿರುವುದು ಖಂಡನೀಯ ವಿಚಾರ ಎಂದು ಪ್ರತಿಭಟನಾ ನಿರತ ರೈತ ಮುಖಂಡರು ತಿಳಿಸಿದರು.
ಮಂಡ್ಯ ಜಿಲ್ಲೆ ಹಾಗೂ ಕರ್ನಾಟಕದ ಕೋಟ್ಯಾಂತರ ಜನರ ಜೀವನಾಡಿ ಆಗಿರುವ ಕೆ ಆರ್ ಎಸ್ ರಕ್ಷಣೆಗಾಗಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ನಿರಂತರ ಹೋರಾಟಗಳನ್ನು ನಡೆಸುತ್ತಿದ್ದರೂ ಸರ್ಕಾರ ಮತ್ತು ಜಿಲ್ಲಾಡಳಿತ ಕೋಟ್ಯಂತರ ಜನರ ಆತಂಕವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಕರ್ನಾಟಕ ರೈತ ಸಂಘದ ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣಯ್ಯ, ಎ.ಎಲ್.ಕೆಂಪೇಗೌಡ, ಆಣಿಗೆರೆ ಮಲ್ಲಯ್ಯ, ಶಂಕರಯ್ಯ ತುಮಕೂರು, ಪ್ರಸನ್ನಗೌಡ, ಬೋರಾಪುರ ಶಂಕರೇಗೌಡ, ಕೆ.ಟಿ.ಗೋವಿಂದೇಗೌಡ, ಕೆ ಆರ್ ಪೇಟೆ ಜಯರಾಮಣ್ಣ, ರವೀಂದ್ರ, ಗೆಜ್ಜಲಗೆರೆ ಶಂಕರಯ್ಯ, ಸಿಐಟಿಯುವಿನ ಕುಮಾರಿ, ಮಹಿಳಾ ಮುನ್ನಡೆಯ ಪೂರ್ಣಿಮಾ, ಕೋಕಿಲ ಪಾಂಡವಪುರ, ಪ್ರಿಯಾ ರಮೇಶ್, ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.
ರೈತ ಸಂಘದ ಒತ್ತಾಯ ಹೀಗಿದೆ;
1. ಅಣೆಕಟ್ಟು ಸುರಕ್ಷತಾ ಮಸೂದೆ 2021 ರ ಪ್ರಕಾರ ಕೂಡಲೇ ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸುವುದು.
2. ಪಾರಂಪರಿಕ ಹಾಗೂ ಹಳೆಯ ಕಟ್ಟಡವಾದ ಕೆ ಆರ್ ಎಸ್ ರಕ್ಷಣೆಗಾಗಿ ಟ್ರಯಲ್ ಬ್ಲಾಸ್ಟ್ ನಡೆಸುವುದನ್ನು ಸ್ಥಗಿತಗೊಳಿಸುವುದು.
3.ಅರಣ್ಯ, ಪರಿಸರ, ಸ್ಪೋಟಕ ಕಾಯ್ದೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಡೆಸಲಾಗಿರುವ ಗಣಿಗಾರಿಕೆ ಚಟುವಟಿಕೆಗಳಿಗೆ ಗಣಿ ಮಾಲೀಕರಿಂದ ಬಾಕಿ ಇರುವ ರಾಜಧನವನ್ನು ಕೂಡಲೇ ವಸೂಲಿ ಮಾಡುವಂತೆ ಒತ್ತಾಯಿಸಿದ್ದಾರೆ.