ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಇಂದು ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಮುಖಂಡ ಕೆ.ಎಲ್.ಕೆಂಪೂಗೌಡರ ಮುಂದಾಳತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಒಕ್ಕೂಟ ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಖಾತ್ರಿಗೊಳಿಸಬೇಕು, ಕನಿಷ್ಠ 8.5ರಷ್ಟು ಇಳುವರಿಗೆ ಎಫ್‌ಆರ್‌ಪಿ ದರವನ್ನು ನಿಗದಿಪಡಿಸಬೇಕು ಹಾಗೂ ಬರ ಪರಿಹಾರದಲ್ಲಿ ಇರುವ ತಾರತಮ್ಯವನ್ನು ಸರಿಪಡಿಸಿ ಎಲ್ಲ ರೈತರಿಗೆ ಶೀಘ್ರವಾಗಿ ಬರ ಪರಿಹಾರದ ಮೊತ್ತವನ್ನು ಪಾವತಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ರೈತ ವಿರೋಧಿ ಮೂರು ಕಾಯ್ದೆಗಳು ಮತ್ತು ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಬೇಕು. ವಿದ್ಯುತ್ ಖಾಸಗೀಕರಣ, ಬ್ಯಾಂಕ್‌ಗಳ ಖಾಸಗೀಕರಣವನ್ನು ಕೈಬಿಡುವಂತೆ ಒಕ್ಕೂಟ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಬಾಕಿ ಇರುವ ಕಬ್ಬಿನ ಹಣವನ್ನು ಪಾವತಿಸಲು ಕ್ರಮವಹಿಸುವುದು ಹಾಗೂ ರೈತರ ಹಾಲಿನ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕೃಷಿ ಪಂಪ್‌ಸೆಂಟ್‌ಗಳಿಗ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳುವ ರೈತರಿಗೆ ಅಕ್ರಮ ಸಕ್ರಮಕ್ಕೆ ಹಿಂದಿನ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಪ್ರತಿಭಟಿಸಿದರು.
ಗಣಿಗಾರಿಕೆ ನಿಷೇಧಿಸಲು ಒತ್ತಾಯ
ಕೆಆರ್‌ಎಸ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ಶಾಶ್ವತವಾಗಿ ಮಾಡದಂತೆ ನಿಷೇಧ ಮಾಡಿ, ಪರೀಕ್ಷಾರ್ಥ ಸ್ಪೋಟಕ ಮಾಡಬಾರದು. ರಾಜ್ಯದಲ್ಲಿ ರೈತರ ಆತ್ಮಹತ್ಯೆಯನ್ನು ತಡೆಗಟ್ಟಲು ಸರ್ಕಾರವು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್ ಕೆಂಪೂಗೌಡ, ಬೋರಾಪುರ ಶಂಕರಗೌಡ, ಜಿ.ಎಸ್ ಲಿಂಗಪ್ಪಾಜಿ, ಪ್ರಸನ್ನಗೌಡ, ಗೋವಿಂದೇಗೌಡ, ಶಿವಳ್ಳಿ ಚಂದ್ರು, ಎಸ್.ಕೆ ರವಿಕುಮಾರ್, ಗೂಳೂರು ರಾಮಕೃಷ್ಣ, ಜವರೇಗೌಡ, ಎಂ.ಎಸ್ ವಿಜಯ್ ಕುಮಾರ್, ಟಿ.ಎಲ್ ವಿನೋದ್ ಬಾಬು, ವೈ.ಪಿ ಮಂಜುನಾಥ್, ಲತಾ ಶಂಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
