ರಾಜ್ಯದ ಪ್ರಮುಖ ಪಾರಂಪರಿಕ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನಾವಿಕ(ಬೋಟ್ ಮ್ಯಾನ್)ರ ಹುದ್ದೆಯನ್ನು ಕಾಯಂಗೊಳಿಸಿ ಅವರಿಗೆ ಆರ್ಥಿಕ ಭದ್ರತೆ ಒದಗಿಸಬೇಕು ಎಂದು ರಾಜ್ಯ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಲ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
“ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಂದ ರಾಜ್ಯಸರ್ಕಾರಕ್ಕೆ ಪ್ರತಿ ತಿಂಗಳು ₹45ರಿಂದ ₹50 ಲಕ್ಷ ಆದಾಯ ಬರುತ್ತಿದೆ. ಈ ಕೇಂದ್ರದ ಯಶಸ್ಸಿನಲ್ಲಿ ನಾವಿಕರ ಪಾತ್ರ ಮುಖ್ಯವಾಗಿದೆ. ಹೀಗಿದ್ದರೂ ಆರ್ಥಿಕ ಭದ್ರತೆಯಿಲ್ಲದೆ ಅವರು ಪರದಾಡುವಂತಾಗಿದೆ. ಇದರಿಂದ ಅವರ ಆರ್ಥಿಕ ಭದ್ರತೆ, ಸಾಮಾಜಿಕ ಸಮಾನತೆ ಮತ್ತು ಬೆಳವಣಿಗೆಗೆ ಹಿನ್ನಡೆಯಾಗಿದೆ. ಇದು ಸರಿಯಾಗಬೇಕು” ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಕೆ ನಿತೀಶ್
“ಇದೇ ಇಲಾಖೆಯಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಆನೆ ಮಾವುತರಿಗೆ ಸರ್ಕಾರ ಶಾಶ್ವತ ಹುದ್ದೆ ನೀಡಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ನಾವಿಕರು ತಮ್ಮ ಪ್ರಾಣ ಪಣಕ್ಕಿಟ್ಟು ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಸರ್ಕಾರ ಇತ್ತ ಗಮನಹರಿಸುತ್ತಿಲ್ಲ. ಮಾನವೀಯತೆ ದೃಷ್ಟಿಯಿಂದಾದರೂ ʼನಾವಿಕ ಹುದ್ದೆʼಯನ್ನು ಖಾಯಂಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಿದ್ದೇ ಆದಲ್ಲಿ ಅವರೊಂದಿಗೆ ಅವರ ಕುಟುಂಬಗಳೂ ಸ್ವಾವಲಂಬಿಯಾಗಿ ಬದುಕು ನಡೆಸಲು ಅನುಕೂಲವಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೂಡಲೇ ಅವರ ಸೇವಾ ನಿಯಮಗಳಲ್ಲಿ ಬದಲಾವಣೆ ತರಬೇಕು” ಎಂದು ಮನವಿ ಮಾಡಿದ್ದಾರೆ.
