ಮಂಡ್ಯ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ಆರಂಭ ಮಾಡಿ, ಕಬ್ಬು ಅರೆಯುವ ಕೆಲಸ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಮ್ಮ ಮನವಿಯಲ್ಲಿ, “ಈಗಾಗಲೇ ಬರದಿಂದ ತತ್ತರಿಸಿರುವ ರೈತರು ಅಲ್ಪಸ್ವಲ್ಪ ಉಳಿಸಿ ಬೆಳೆಸಿಕೊಂಡ ಕಬ್ಬು ಸತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕಳೆದ ಹಂಗಾಮಿನಲ್ಲಿ ಕಾರ್ಖಾನೆಗಳು ಜನವರಿ ತಿಂಗಳಲ್ಲಿ ಕಬ್ಬು ಅರೆಯುವ ಕೆಲಸ ಸ್ಥಗಿತಗೊಳಿಸಿದ್ದವು. ನಾಲಾ ಅಚ್ಚುಕಟ್ಟು ಪ್ರದೇಶದ ಕಬ್ಬು, ನಿರೀಕ್ಷೆಗೆ ಮೀರಿ ಒಣಗಿದ ಪರಿಣಾಮ ಇಳುವರಿ ಕುಂಠಿತವಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಕೊಳವೆ ಬಾವಿಗಳು ಬತ್ತಿದ್ದು, ಕೆರೆಗಳು ಒಣಗಿ ಹೋಗಿರುವುದರಿಂದ ಕಬ್ಬು ಬೆಳೆಗಾರರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹೀಗಿರುವಾಗ ಇನ್ನೂ ತಡಮಾಡಿ ಕಾರ್ಖಾನೆ ಪ್ರಾರಂಭಿಸಿದರೆ ಗಾಯದ ಮೇಲೆ ಬರೆ ಹಾಕಿದಂತೆ ಆಗುತ್ತದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಲೆ ನೀರು ಬಿಡಲು ಸಿದ್ದತೆ ಆಗಿದೆ. ಕಾರ್ಖಾನೆಗಳಿಗೆ ನೀರು ಸೌಲಭ್ಯ ದೊರೆಯುತ್ತದೆ ಮತ್ತು ಇಳುವರಿ ಇಲ್ಲದ ಕಬ್ಬು ಕಟಾವು ಮಾಡಿ ಮುಂಗಾರು ಸಿದ್ದತೆ ಮಾಡಿಕೊಳ್ಳುವ ರೈತರಿಗೆ ಅನುಕೂಲ ಆಗುವಂತೆ ಎಲ್ಲ ಅಂಶಗಳನ್ನು ಗಮನಿಸಿಕೊಂಡು ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು” ಎಂದು ರೈತ ಸಂಘ ಮನವಿಯಲ್ಲಿ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಪರವಾಗಿ ರೈತರ ಮನವಿಯನ್ನು ಅಪಾರ ಜಿಲ್ಲಾಧಿಕಾರಿ ಡಾ.ಹೆಚ್ ಹೆಲ್ ನಾಗರಾಜು ಅವರು ಸ್ವೀಕರಿಸಿದರು.
ರಸಗೊಬ್ಬರಗಳನ್ನು ಪೂರೈಸುವಂತೆ ಮನವಿ
ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಬೆಳೆ ಸಿದ್ದತೆ ಈಗಾಗಲೇ ಪ್ರಾರಂಭವಾಗಿದ್ದು, ನಾಲೆಗಳಲ್ಲಿ ನೀರಿನ ನಿರೀಕ್ಷೆ ಇದೆ. ಹೀಗಾಗಿ ರೈತರು ಆಶಾದಾಯಕವಾಗಿದ್ದಾರೆ. ಆದ್ದರಿಂದ ಕೃಷಿಪರಿಕರಗಳು ರೈತರಿಗೆ ಸಿಗುವಂತೆ ಮತ್ತು ಈ ಬಾರಿ ಉಚಿತ ಬಿತ್ತನೆ ಬೀಜಗಳನ್ನು ಕೊಡುವಂತೆ ಮತ್ತು ರಸಗೊಬ್ಬರಗಳನ್ನು ಪೂರೈಸುವಂತೆ ಗುಣಮಟ್ಟದ ಔಷಧಿಗಳನ್ನು ಕೊಡುವಂತೆ ಮಂಡ್ಯ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರಾದ ಅಶೋಕ್ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು.
