ದ್ವಿಚಕ್ರ ವಾಹನಕ್ಕೆ ಅಡ್ಡಬಂದಳು ಎಂಬ ಕ್ಷುಲ್ಲಕ ಕಾರಣಕ್ಕೆ ಶಾಲಾ ವಿದ್ಯಾರ್ಥಿನಿಯ ಮೇಲೆ ಸವಾರನೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಮಂಡ್ಯ ನಗರದ ಸುಭಾಷ್ ನಗರ 3ನೇ ಕ್ರಾಸ್ ನಲ್ಲಿ ಮಾ. 6ರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ನಡೆದಿದೆ.
ಹಳದಿ ಟೀಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದ ಶಾಲಾ ವಿದ್ಯಾರ್ಥಿನಿಯು ತನ್ನ ಸೈಕಲ್ ಮೂಲಕ ಅವಸರದಲ್ಲಿ ಶಾಲೆಗೆ ತೆರಳುವಾಗ ಅಡ್ಡ ಬಂದಳೆಂದು ಆಕ್ರೋಶಗೊಂಡು, KA-11 EW 4842 ವಿದ್ಯುತ್ ಚಾಲಿತ ಸ್ಕೂಟರ್‌ನಲ್ಲಿ ಬಂದ ಹಿರಿಯ ಬೈಕ್ ಸವಾರ ವಿದ್ಯಾರ್ಥಿನಿಯನ್ನು ಬೆದರಿಸಿದ್ದಲ್ಲದೇ, ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಹಲ್ಲೆಯ ವೇಳೆ ವಿದ್ಯಾರ್ಥಿನಿಯು ಕಣ್ಣೀರಿಟ್ಟಿದ್ದಾಳೆ. ಘಟನೆಯ ದೃಶ್ಯವನ್ನು ಕಾರಿನಲ್ಲಿದ್ದವರೋರ್ವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಶಾಲಾ ವಿದ್ಯಾರ್ಥಿನಿ ಎಂಬುದನ್ನು ನೋಡದೇ ಆಕೆಯನ್ನು ದಬಾಯಿಸಿ, ಏರುಧ್ವನಿಯಲ್ಲಿ ಬೆದರಿಸುವ ಮೂಲಕ ಸಾರ್ವಜನಿಕವಾಗಿಯೇ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿರುವ ಈತನ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಣೆ ಹಾಗೂ ಮಂಡ್ಯ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಎಫ್ಐಆರ್ ದಾಖಲು
ವಿದ್ಯಾರ್ಥಿನಿಗೆ ಹಲ್ಲೆ ನಡೆಸಿದ ದೃಶ್ಯದ ಹರಿದಾಡಿದ ಬಳಿಕ, ಹಲ್ಲೆ ನಡೆಸಿದವನ ವಿರುದ್ಧ ಸಂತ್ರಸ್ತ ವಿದ್ಯಾರ್ಥಿನಿಯ ಪೋಷಕರು, ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆ ನಡೆಸಿದವನನ್ನು ಸ್ಥಳೀಯ ನಿವಾಸಿ ರಮೇಶ ಎಂದು ಗುರುತಿಸಲಾಗಿದ್ದು, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸರು, ಐಪಿಸಿ 1860 ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
