ಧರ್ಮಸ್ಥಳ ಸಂಘದ 52 ಲಕ್ಷಕ್ಕೂ ಹೆಚ್ಚು ಮಂದಿ ಸದಸ್ಯರಿಂದ ಪ್ರತಿವರ್ಷ ಸರಾಸರಿ ₹2000 ಕೋಟಿಯಷ್ಟು ಹಣ ವಸೂಲಿ ಮಾಡುತ್ತಿದೆ. ಇದರ ಒಟ್ಟು ಮೊತ್ತ ₹10,000 ಕೋಟಿಗಿಂತಲೂ ಅಧಿಕವಾಗಿದ್ದು, ಇದು ಕಪ್ಪುಹಣದ ರೂಪದಲ್ಲಿ ಧರ್ಮಸ್ಥಳಕ್ಕೆ ರವಾನೆಯಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “₹10 ಸಾವಿರ ಕೋಟಿ ತಿಂಗಳ ಬಡ್ಡಿಯನ್ನು ಯಾರು ತಿನ್ನುತ್ತಿದ್ದಾರೆ? ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ(ಎಸ್‌ಕೆಡಿಆರ್‌ಡಿಪಿ)ಯನ್ವಯ ಕೇವಲ ಮಾಸಿಕ ವರದಿ ಮಾತ್ರ ಸಿಗುತ್ತಿದೆ. ಆದರೆ ಸಾಲಗಾರರು ಪ್ರತಿವಾರ ಸಾಲದ ನಿಗದಿತ ಹಣ ಮತ್ತು ಅದಕ್ಕೆ ಬಡ್ಡಿಯನ್ನು ಕಟ್ಟುತ್ತಿದ್ದಾರೆ. ಅಲ್ಲದೇ ಈ ಬಡ್ಡಿಯನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ. ಇದು ದೇಶದ ಅತಿದೊಡ್ಡ ಹಣಕಾಸು ಹಗರಣ, ಹಣಕಾಸು ಭಯೋತ್ಪಾದನೆಯಲ್ಲವೇ” ಎಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
“ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಅಕ್ರಮ ‘ಮೀಟರ್ ಬಡ್ಡಿ’ ದಂಧೆ ರಾಜ್ಯದ ಶ್ರಮಿಕ ವರ್ಗವನ್ನು ಸಾಲದ ಚಕ್ರವ್ಯೂಹದಲ್ಲಿ ಸಿಲುಕಿಸುತ್ತಿದೆ. ಈ ಯೋಜನೆ ಕಾನೂನುಬಾಹಿರ ಹಣದ ಲೇವಾ-ದೇವಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಹಾಲಕ್ಷ್ಮಿ ಎಂಬ ಮಹಿಳೆ ಮಳವಳ್ಳಿಯಲ್ಲಿ ಧರ್ಮಸ್ಥಳ ಸಂಘದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
“ರಾಜ್ಯಾದ್ಯಾಂತ ಎಸ್‌ಕೆಡಿಆರ್‌ಡಿಪಿ ಸ್ವಸಹಾಯ ಸಂಘದ ಸದಸ್ಯರಿಗೆ ಈವರೆಗೆ ಸಂಘದ ನೋಂದಣಿ ಪ್ರತಿಯನ್ನು ನೀಡಿಲ್ಲ. ಸಂಘದ ನೀತಿ ನಿಯಮಗಳನ್ನು ಅರಿಯುವುದು ಸದಸ್ಯರ ಹಕ್ಕಲ್ಲವೆ? ಎಸ್‌ಕೆಡಿಆರ್‌ಡಿಪಿ, ಬ್ಯಾಂಕ್ ಬಿಸಿನೆಸ್ ಕರೆಸ್ಪಾಂಡೆನ್ಸ್ ಟ್ರಸ್ಟ್, ಮತ್ತು ಬಿಸಿ ಏಜೆಂಟ್ ಟ್ರಸ್ಟ್ ಆಗಿ ಕೆಲಸ ಮಾಡುತ್ತದೆ. ಆದರೆ ಈ ಸಂಬಂಧಿತ ದಾಖಲೆಗಳು ಸದಸ್ಯರ ಗಮನಕ್ಕೆ ತರಲಾಗುತ್ತಿಲ್ಲ. ಬ್ಯಾಂಕ್ ಬಡ್ಡಿದರ, ಕಮಿಷನ್ ಮತ್ತಿತರ ಮಾಹಿತಿಗಳನ್ನು ಬಹಿರಂಗಪಡಿಸದೆ ತಮಗೆ ಮನಸಿಗೆ ಬಂದಂತೆ ಕಾರ್ಯಾಚರಿಸುತ್ತಿದೆ” ಎಂದು ಗುರುತರ ಆರೋಪ ಮಾಡಿದರು.
“ಎಸ್‌ಕೆಡಿಆರ್‌ಡಿಪಿ, ಬ್ಯಾಂಕ್ ಏಜೆಂಟ್ ಆಗಿ ಕೆಲಸ ಮಾಡುವುದರಿಂದ, ಬ್ಯಾಂಕ್ ನಿರ್ಧರಿಸುವ ಬಡ್ಡಿದರ, ಸಾಲದ ಅವಧಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ವಾರಕ್ಕೆ 52 ಲಕ್ಷ ಮಂದಿ ಸದಸ್ಯರಿಂದ ವಸೂಲಿ ಮಾಡುತ್ತಿರುವ ಉಳಿತಾಯ ಹಣವನ್ನು ಸ್ವಸಹಾಯ ಗುಂಪಿನ ಬ್ಯಾಂಕ್ ಖಾತೆಗೆ ಜಮಾ ಮಾಡದೇ, ಎಸ್‌ಕೆಡಿಆರ್‌ಡಿಪಿ ಖಾಸಗಿ ಖಾತೆಗೆ ಜಮಾ ಮಾಡುತ್ತದೆ. ಇದು ಕಾನೂನುಬಾಹಿರ ಹಣ ಸಂಗ್ರಹಣೆ ಅಲ್ಲವೇ” ಎಂದು ಪ್ರಶ್ನಿಸಿದರು.
“ಗುಂಪು ವಿಮೆ ಮತ್ತು ವೈಯುಕ್ತಿಕ ವಿಮೆ ನಿಯಮಬಾಹಿರವಾಗಿ ಜಾರಿಗೊಂಡಿದೆ. ವಿಮೆ ಕಂಪನಿಯಿಂದ ಬರುವ ವಿಮೆ ಕಮಿಷನ್ ಸ್ವಸಹಾಯ ಗುಂಪಿಗೆ ತಲುಪದೇ, ಎಸ್‌ಕೆಡಿಆರ್‌ಡಿಪಿ ಏಕೆ ಪಡೆಯುತ್ತಿದೆ” ಎಂಬ ಪ್ರಶ್ನೆಗಳನ್ನು ಎತ್ತಿದರು.
“ಆರ್‌ಬಿಐ ನಿಯಮಗಳನ್ನು ಗಾಳಿಗೆ ತೂರಿ, ವಾರದ ಬಡ್ಡಿಯನ್ನು ಮನೆ ಮನೆಗೆ ತೆರಳಿ ಕಿರುಕುಳ ನೀಡುತ್ತಾ ವಸೂಲಿ ಮಾಡುವುದು ಗ್ರಾಮೀಣಾಭಿವೃದ್ಧಿಯೇ? ಎಸ್‌ಕೆಡಿಆರ್‌ಡಿಪಿ ಕೊಡುವ ಸ್ಟೇಟ್‌ಮೆಂಟ್‌ನಲ್ಲಿ ಸಹಿ ಇಲ್ಲವೇ ಮುದ್ರೆ ಇರುವುದಿಲ್ಲ. ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದಾಗ, ಬ್ಯಾಂಕ್ ಅಧಿಕಾರಿಗಳು ಈ ವ್ಯವಹಾರಕ್ಕೆ ಸಂಬಂಧವಿಲ್ಲವೆಂಬ ಉತ್ತರ ನೀಡುತ್ತಾರೆ. ಇದು ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ” ಎಂದು ಗಿರೀಶ್ ಹೇಳಿದ್ದಾರೆ.
“ಸಂಸ್ಥೆ, ನೇರವಾಗಿ ಬ್ಯಾಂಕ್ ಖಾತೆ ಇಲ್ಲವೇ ಆನ್‌ಲೈನ್ ಮೂಲಕ ಹಣ ಪಾವತಿ ನಿರ್ವಹಿಸದೆ, ಎಲ್ಲ ಹಣವನ್ನು ನಗದು ರೂಪದಲ್ಲಿ ವಸೂಲಿ ಮಾಡುತ್ತಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ಹಿನ್ನಲೆಯಲ್ಲಿ, ನಗದು ಪಾವತಿಗೆ ಒತ್ತಾಯಿಸುವುದೇನು” ಎಂದವರು ಪ್ರಶ್ನಿಸಿದರು.
“ಸರ್ಕಾರದ ಕೆರೆ ಯೋಜನೆ, ಮಧ್ಯ ವರ್ಜನ ಯೋಜನೆ, ಕೌಶಲ್ಯಾಭಿವೃದ್ಧಿ ಯೋಜನೆಗಳ ಗುತ್ತಿಗೆ ಪಡೆದು, ಸರ್ಕಾರದ ಅನುದಾನದಿಂದ ಕೆಲಸ ಮಾಡಿಸಿ, ‘ಪೂಜ್ಯರು ದಾನ ಕೊಟ್ಟರು’ ಎಂಬ ಪ್ರಚಾರ ಮಾಡುವುದು ದ್ರೋಹ ಅಲ್ಲವೇ” ಎಂದು ಗಿರೀಶ್ ಹೇಳಿದರು.
“ಎಸ್‌ಕೆಡಿಆರ್‌ಡಿಪಿ ಹಿಂದೂ ಧಾರ್ಮಿಕ ಪವಿತ್ರ ಕ್ಷೇತ್ರವೆಂದು ಹೇಳಿಕೊಳ್ಳುತ್ತಿರುತ್ತದೆ. ಆದರೆ, ನ್ಯಾಯಾಲಯದಲ್ಲಿ ‘ಧರ್ಮಸ್ಥಳ’ ಜೈನರ ಸಂಸ್ಥೆಯಾಗಿದೆಯೆಂದು ಲಿಖಿತದಲ್ಲಿ ಹೇಳಲಾಗಿದೆ. ಇದು ಲಕ್ಷಾಂತರ ಭಕ್ತರ ಭಾವನೆಗಳಿಗೆ ಮಾಡುವ ಅವಮಾನವಲ್ಲವೆ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ದಲಿತರಿಗೆ ಬಹಿಷ್ಕಾರ ಪ್ರಕರಣ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ರಸ್ತೆ ತಡೆ
“ಎಸ್‌ಕೆಡಿಆರ್‌ಡಿಪಿ ಸಂಸ್ಥಾಪಕ ಅಧ್ಯಕ್ಷ, ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಅವರು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು ಮತ್ತು ಹಣದ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕು. ಇಲ್ಲದಿದ್ದರೆ, ಸದಸ್ಯರು ಯಾವುದೇ ಸಾಲ ಅಥವಾ ಬಡ್ಡಿ ಕಟ್ಟಬಾರದು” ಎಂದು ಒತ್ತಾಯಿಸಿದರು.
“ಪ್ರತಿ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಹಾಯವಾಣಿ ತೆರೆಯಬೇಕು. ಈ ಹೋರಾಟಕ್ಕೆ ಮಂಡ್ಯದ ಸ್ಥಳೀಯ ನಾಯಕರು, ಶಾಸಕರು, ಸಚಿವರು ದಿಟ್ಟ ನಿಲುವು ತಾಳಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ” ಎಂದು ಗಿರೀಶ್ ಹರ್ಷ ವ್ಯಕ್ತಪಡಿಸಿದರು.