ಅಧಿಕಾರ ವಹಿಸಿಕೊಂಡ 5 ತಿಂಗಳ ಅವಧಿಯಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆ ಕಂಪನಿಯ 270.62 ಕೋಟಿ ರೂ.ಗಳ ಸಾಲದ ಪೈಕಿ 181.84 ಕೋಟಿ ರೂ.ಗಳನ್ನು ತೀರುವಳಿ ಮಾಡಿದ್ದು, ಉಳಿದ 88.78 ಕೋಟಿ ರೂ.ಗಳ ಸಾಲವನ್ನು ತೀರುವಳಿಗೆ ಪ್ರಯತ್ನ ಮುಂದುವರಿಸಲಾಗುತ್ತಿದೆ. ಈ ಅವಧಿಯಲ್ಲಿ ಕಾರ್ಖಾನೆಯು ₹27.5 ಕೋಟಿಯಷ್ಟು ಹಣಕಾಸು ಪ್ರಗತಿ ಸಾಧಿಸಿದ್ದು, ಕಂಪನಿಯು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದು ಮೈಷುಗರ್ ನೂತನ ಅಧ್ಯಕ್ಷ ಸಿ ಡಿ ಗಂಗಾಧರ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಇತ್ತೀಚಿನ ದಿನಗಳಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಬಗ್ಗೆ ಹಲವಾರು ಉಹಾಪೋಹಗಳು ಹರಿದಾಡುತ್ತಿವೆ. ಆದರೆ, ವಾಸ್ತವದಲ್ಲಿ, ಆಗಸ್ಟ್ 2ರಿಂದಲೇ ಕಾರ್ಖಾನೆಯು ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು, ಈವರೆಗೆ 30,000 ಮೆಟ್ರಿಕ್ ಟನ್‌ಗಳಷ್ಟು ಕಬ್ಬು ನುರಿಸಲಾಗಿದೆ. ಈ ಪ್ರಗತಿಯಿಂದ, ಕಾರ್ಖಾನೆಯು 11,019 ಕ್ವಿಂಟಾಲ್ ಸಕ್ಕರೆ, 1,060 ಮೆ.ಟನ್ ಕಾಕಂಬಿ ಉತ್ಪಾದಿಸಿದ್ದು, ಸಹ-ವಿದ್ಯುತ್ ಘಟಕದಿಂದ 22,27,000 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. 12,27,400 ಯೂನಿಟ್ ವಿದ್ಯುತ್ತನ್ನು ಕಾರ್ಖಾನೆಯ ಬಳಕೆಗೆ ಮೀಸಲಿಟ್ಟು, 9,99,600 ಯೂನಿಟ್‌ಗಳನ್ನು ಚೆಸ್ಕಾಂಗೆ ರಫ್ತು ಮಾಡಲಾಗಿದೆ. ಇಷ್ಟು ಪ್ರಮಾಣದ ವಿದ್ಯುತ್ ರಫ್ತು ಮಾಡುವ ಮೂಲಕ, ಕಾರ್ಖಾನೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ” ಎಂದು ವಿವರಿಸಿದರು.
“ಮೈಸೂರಿನ ಮೈಷುಗರ್ ಕಾರ್ಖಾನೆ ಆರ್ಥಿಕವಾಗಿ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿಯೇ, ಆದಾಯ ತೆರಿಗೆ ಇಲಾಖೆಯಿಂದ ₹111.50 ಕೋಟಿ ತೆರಿಗೆ ಪಾವತಿ ಸಂಬಂಧ ನೋಟಿಸ್ ನೀಡಲಾಗಿತ್ತು. ಆದರೆ, ನಂತರದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮೈಷುಗರ್ ಪರವಾಗಿ ಬಂದಿದ್ದು, ಕಾರ್ಖಾನೆಗೆ ಈ ಬೃಹತ್ ಹಣ ಪಾವತಿಸಬೇಕಾಗಿಲ್ಲ. ಈ ಮೂಲಕ, ಮೈಷುಗರ್ ಕಂಪನಿಗೆ ₹111 ಕೋಟಿ ನಷ್ಟ ತಪ್ಪಿದಂತಾಗಿದೆ” ಎಂದು ಗಂಗಾಧರ್ ತಿಳಿಸಿದರು.
“ಮೈಷುಗರ್ ಕಂಪನಿಯು 2024-25ನೇ ಸಾಲಿನಲ್ಲಿ 2.50 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದೆ. ಈ ಗುರಿ ಸಾಧನೆಗೆ, ಬಾಕಿಯಿರುವ ಸಾಲ ತೀರುವಳಿಗೆ ಮುಂದಾಗಿದೆ. ಕಾರ್ಖಾನೆಯು ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಳ್ಳಲು ಯೋಚಿಸಿದೆ. ಈ ಆಸ್ತಿಯಿಂದ ಬಿಬಿಎಂಪಿಗೆ ಬಾಕಿ ಇದ್ದ ₹6 ಕೋಟಿ ಆಸ್ತಿ ತೆರಿಗೆಯನ್ನು 2024-25ನೇ ಸಾಲಿನ ಒಟಿಎಸ್ ಯೋಜನೆಯ ಮೂಲಕ ಪಾವತಿಸಿ, ಹಣಕಾಸು ಹೊರೆ ತಗ್ಗಿಸಿದೆ” ಎಂದರು.
“2023-24ನೇ ಸಾಲಿನಲ್ಲಿ 2003ರಿಂದ ಬಿಬಿಎಂಪಿಗೆ ಪಾವತಿಸಬೇಕಾಗಿದ್ದ ₹5.82 ಕೋಟಿ ಪೈಕಿ, ₹2.01 ಕೋಟಿ ಒಟಿಎಸ್ ಯೋಜನೆಯಡಿ ಪಾವತಿಸಿ, ಕಂಪನಿಗೆ ₹3.81 ಕೋಟಿ ಉಳಿತಾಯ ಸಾಧಿಸಲಾಗಿದೆ.
“ಮೈಸೂರು ಸಕ್ಕರೆ ಕಾರ್ಖಾನೆ ಬಗ್ಗೆ ಕಿಡಿಗೇಡಿಗಳು ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸೇರಿ ತಪ್ಪು ಮಾಹಿತಿ ನೀಡುತ್ತಿರುವುದು ಖಂಡನೀಯ. ಮೈಸೂರು ಸಕ್ಕರೆ ಕಾರ್ಖಾನೆ ಸರ್ಕಾರದ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾಗಿದ್ದು, 2024-25ನೇ ಸಾಲಿನಲ್ಲಿ ಯಶಸ್ವಿಯಾಗಿ ಕಬ್ಬು ನುರಿಸಲಾಗುತ್ತಿದೆ. ಕಬ್ಬು ಕಟಾವು ಮಾಡುವ ತಂಡಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿದೆ. ಕೆಲ ತಂಡಗಳು ಮುಂಗಡವಾಗಿ ಹಣ ಪಡೆದು ಕಬ್ಬು ಕಟಾವು ಮಾಡಲು ಬಂದಿಲ್ಲ. ಆದರೆ ಅವರು ಪಡೆದ ಮುಂಗಡ ಹಣಕ್ಕಾಗಿ ಭದ್ರತೆಯನ್ನು ಪಡೆದು, ಅವರಿಗೆ ನೋಟಿಸ್ ನೀಡಿ, ಹಣವನ್ನು ವಸೂಲಿ ಮಾಡಲು ದಾವೆ ಹೂಡಲಾಗಿದೆ” ಎಂದು ವಿವರಿಸಿದರು.
“ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಜನತೆ, ರೈತರು ಮತ್ತು ಕಾರ್ಯಕರ್ತರ ಒತ್ತಾಸೆಯಿಂದ ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲಿ ಉಳಿದುಕೊಂಡಿದೆ. ಕಾರ್ಖಾನೆಯ ಎಲ್ಲ ಕಾರ್ಯಗಳನ್ನು ದಕ್ಷತೆಯಿಂದ ನಿರ್ವಹಿಸಲಾಗುತ್ತಿದ್ದು, ಕಾರ್ಖಾನೆಯ ಹಣಕಾಸು ಸ್ಥಿತಿಯು ಉತ್ತಮವಾಗಿದೆ. ಯಾವುದೇ ತಪ್ಪು ಮಾಹಿತಿಗಳಿಗೆ ಕಿವಿಕೊಡದೆ, ಕಾರ್ಖಾನೆಯ ಯಶಸ್ಸಿಗೆ ಪಕ್ಷಾತೀತವಾಗಿ ಎಲ್ಲರೂ ಸಹಕರಿಸಬೇಕು” ಎಂದು ಗಂಗಾಧರ್ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವೃದ್ಧಾಪ್ಯ ವೇತನ, ಅನ್ನಭಾಗ್ಯ ಸಿಗದೆ ವೃದ್ಧೆ ಪರದಾಟ
“ಮೈಷುಗರ್ ಸಕ್ಕರೆ ಕಾರ್ಖಾನೆ ಏಳಿಗೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂಪನಿಯ ಎಲ್ಲ ಆಸ್ತಿಗಳನ್ನು ಸ್ಥಳ ಪರಿಶೀಲನೆ ಮಾಡುವುದರ ಜೊತೆಗೆ, ಪ್ರತಿ ಗುರುವಾರ ತಾಂತ್ರಿಕ ಪರಿಣಿತರ ಸಭೆ, ಪ್ರತಿ ತಿಂಗಳು ನೌಕರರ, ನ್ಯಾಯಾಲಯ ಮತ್ತು ವಕೀಲರ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಂಬಂಧ ಪಕ್ಷಾತೀತವಾಗಿ ಹಿರಿಯ ಮುಖಂಡರು, ರೈತ ಪ್ರತಿನಿಧಿಗಳು ಮತ್ತು ಹಿಂದಿನ ಅಧ್ಯಕ್ಷರ ಜೊತೆ ಚರ್ಚೆಗಳು ನಡೆಯುತ್ತಿವೆ” ಎಂದು ತಿಳಿಸಿದರು.
ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮುಖಂಡರಾದ ಅಪ್ಪಾಜಿಗೌಡ, ನಾಗರಾಜು, ದ್ಯಾವಣ್ಣ, ಸುಂಡಹಳ್ಳಿ ಮಂಜುನಾಥ್, ಮಂಗಲ ಯೋಗೀಶ್, ಉಮೇಶ್ ಸೇರಿದಂತೆ ಇತರರು ಇದ್ದರು.