ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕೇ ಬೇಕು ಎಂದು ಗಟ್ಟಿದನಿಯಲ್ಲಿ ಕರ್ನಾಟಕದ ಆಹಾರ ಸಂಸ್ಕೃತಿ ಪರವಾಗಿ ಬೇಡಿಕೆ ಇಟ್ಟಿದ್ದ ಹೋರಾಟಗಾರರು ಕೊನೆಗೂ ಗೆದ್ದಿದ್ದಾರೆ.
ಆಹಾರದ ಅಸಮಾನತೆ ತೊಲಗಿಸಲು ಒತ್ತಾಯಿಸಿದ್ದ ಜನಪರ ಮುಖಂಡರು, ಕೊನೆಗೂ ಪೊಲೀಸರ ಪ್ರಬಲ ವಿರೋಧದ ನಡುವೆಯೇ ಭರ್ಜರಿ ಬಾಡೂಟವನ್ನು ಸಾರ್ವಜನಿಕರಿಗೆ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಸಾಹಿತ್ಯ ಸಮ್ಮೇಳನದ ಆಯೋಜಕರಾದ ಕನ್ನಡ ಸಾಹಿತ್ಯ ಪರಿಷತ್, ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಮಧ್ಯಾಹ್ನ ಊಟದೊಂದಿಗೆ ಮೊಟ್ಟೆಯನ್ನು ವಿತರಿಸಲಿದೆ ಎಂಬ ಸುದ್ದಿ ಹರಿದಾಡಿತ್ತಾದರೂ, ಕೊನೆವರೆಗೂ ವಿತರಿಸಲಿಲ್ಲ.
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 'ಬಾಡೂಟ ಬೇಕೇ ಬೇಕು'ಎಂದು ಗಟ್ಟಿದನಿಯಲ್ಲಿ ಕರ್ನಾಟಕದ ಆಹಾರ ಸಂಸ್ಕೃತಿ ಪರವಾಗಿ ಬೇಡಿಕೆ ಇಟ್ಟಿದ್ದ ಹೋರಾಟಗಾರರು ಕೊನೆಗೂ ಗೆದ್ದಿದ್ದಾರೆ. ಮಂಡ್ಯದ ಜನಪರ ಮುಖಂಡರು, ಕೊನೆಗೂ ಪೊಲೀಸರ ಪ್ರಬಲ ವಿರೋಧದ ನಡುವೆಯೇ ಬಾಡೂಟ ಸಾರ್ವಜನಿಕರಿಗೆ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ. pic.twitter.com/RG5L0H3Ki1
— eedina.com ಈ ದಿನ.ಕಾಮ್ (@eedinanews) December 22, 2024
ಇದರಿಂದ ಆಕ್ರೋಶಗೊಂಡ ಮಂಡ್ಯದ ಜನಪರ ಸಂಘಟನೆಗಳ ಮುಖಂಡರು, ಭಾನುವಾರ ಮಧ್ಯಾಹ್ನದ ವೇಳೆಗೆ ಸಮ್ಮೇಳನದ ಊಟ ಹಂಚುತ್ತಿದ್ದ ಸ್ಥಳಕ್ಕೆ ಕೋಳಿ ಸಾರು, ಮುದ್ದೆ ಹಾಗೂ ಮೊಟ್ಟೆ, ಚಿಕನ್ ಕಬಾಬ್ ಅನ್ನು ತಂದು, ಜನರಿಗೆ ಹಂಚಲು ಮುಂದಾದರು. ಈ ವೇಳೆ ಆಹಾರ ಕೌಂಟರ್ ಬಳಿಯಲ್ಲಿ ಭದ್ರತೆ ನೋಡಿಕೊಳ್ಳುತ್ತಿದ್ದ ಪೊಲೀಸರು, ಎಲ್ಲ ಆಹಾರಗಳನ್ನು ಹೋರಾಟಗಾರರಿಂದ ಕಿತ್ತುಕೊಳ್ಳಲು ಯತ್ನಿಸಿದರೂ ಕೂಡ, ಯಶಸ್ಸಾಗಲು ಬಿಡಲಿಲ್ಲ.
ಸಮ್ಮೇಳನದ ಆವರಣಕ್ಕೆ ತಂದಿದ್ದ ಬಾಡೂಟವನ್ನು ಸಮ್ಮೇಳನ ನಡೆಯುತ್ತಿದ್ದ ಸಾರ್ವಜನಿಕರಿಗೆ ಬಡಿಸುವಲ್ಲಿ ಯಶಸ್ವಿಯಾದರು. ಸಮಾನ ಮನಸ್ಕ ವೇದಿಕೆಯ ಕೆಲವು ಮುಖಂಡರು ಊಟ ಹಂಚುತ್ತಲೇ ‘ಬಾಡೇ ನಮ್ಮ ಗಾಡು’ ಎಂಬ ಘೋಷಣೆ ಕೂಡ ಹಾಕಿದರೆ, ಕೆಲವು ಮುಖಂಡರು ‘ಇದು ಆಹಾರ ಅಸಮಾನತೆ ಎತ್ತಿ ಹಿಡಿದ ಸಮ್ಮೇಳನ’ ಎಂಬ ಬ್ಯಾಡ್ಜ್ ಧರಿಸಿದ್ದರು.

ಊಟದಲ್ಲಿ ತಾರತಮ್ಯ ಮಾಡಿದ ಕಸಾಪ ಆಡಳಿತದ ವಿರುದ್ದ ಆಕ್ರೋಶವನ್ನೂ ಹೊರ ಹಾಕಿ, ಶನಿವಾರ ಸಂಜೆ ಸಮ್ಮೇಳನದ ಮಹಾದ್ವಾರದ ಬಳಿ ಪ್ರತಿಭಟನೆ ನಡೆಸಿದ್ದ ಜನಪರ ಹೋರಾಟಗಾರರು, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಕೊಡದಿದ್ದರೇ, ನಾವೇ ಬಾಡೂಟ ಹಾಕಿಸುತ್ತೇವೆ. ಮನೆ ಮನೆಗೆ ತೆರಳಿ ಕೋಳಿ ಸಂಗ್ರಹ ಮಾಡುತ್ತೇವೆ ಎಂದು ಕಸಾಪ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು.

ಬಾಡೂಟ ಹಂಚುವ ವೇಳೆ ಜನಪರ ಹೋರಾಟಗಾರರಾದ ಕರುನಾಡ ಸೇವಕರ ಸಂಘಟನೆಯ ಎಂ.ಬಿ.ನಾಗಣ್ಣಗೌಡ, ವಕೀಲ ಲಕ್ಷ ಣ್ ಚೀರನಳ್ಳಿ, ದಲಿತ ಸಂಘರ್ಷ ಸಮಿತಿಯ ಎಂ.ವಿ. ಕೃಷ್ಣ,ಕೆಎಸ್‌ಎಸ್‌ನ ನರಸಿಂಹ ಮೂರ್ತಿ, ಸಿಐಟಿಯುನ ಸಿ.ಕುಮಾರಿ, ಟಿ.ಎಲ್ ಕೃಷ್ಣೇಗೌಡ, ಟಿ.ಡಿ. ನಾಗರಾಜ್, ಸಮಾನ ಮನಸ್ಕರ ವೇದಿಕೆ ಮುಕುಂದ, ನಿವೃತ್ತ ಪ್ರಾಧ್ಯಾಪಕ, ಚಿಂತಕರಾದ ಎಂ.ವಿ. ಕೃಷ್ಣ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಯಶವಂತ್, ‘ನಾವು ದ್ರಾವಿಡ ಕನ್ನಡಿಗರು’ ಚಳವಳಿಯ ಅಭಿಗೌಡ ಹನಕೆರೆ, ಜಾಗೃತ ಕರ್ನಾಟಕದ ಸಂತೋಷ್ ಮಂಡ್ಯ, ಜಗದೀಶ್ ಜಾಣ ಜಾಣೆಯರು ಸೇರಿದಂತೆ ಹಲವರಿದ್ದರು.




