ಪಟಾಕಿ ಸಿಡಿಸುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಜನರು ಜಾಗೃತರಾಗಿ ಮಣ್ಣಿನ ಹಣತೆಯನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬ ಆಚರಿಸಿ ಪರಿಸರ ಉಳಿಸೋಣ ಎಂದು ಜಯ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್ ಕರೆ ನೀಡಿದರು.
ಅವರು ಗುರುವಾರ ನಗರದ ಬಾಲ ಭವನದಲ್ಲಿ ಜಯ ಕರ್ನಾಟಕ ಪರಿಷತ್ ವತಿಯಿಂದ ನಡೆದ ಮಣ್ಣಿನ ಹಣತೆ ಹಚ್ಚಿ ಜಾಗೃತಿ ಮೂಡಿಸುವ ಪಟಾಕಿ- ಬಿಟ್ಹಾಕಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಟಾಕಿ ಸಿಡಿಸುವುದರಿಂದ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಉಂಟಾಗುತ್ತದೆ. ರಾಸಾಯನಿಕ ವಸ್ತು ಬಳಕೆಯಿಂದ ಭೂಮಿಗೂ ಹಾನಿ ಉಂಟಾಗುತ್ತದೆ. ಶಬ್ದ ಮಾಲಿನ್ಯದಿಂದ ಪಕ್ಷಿಗಳಿಗೆ ತಮ್ಮ ಗೂಡಿನಲ್ಲಿ ಮೊಟ್ಟೆ ಮರಿಗಳನ್ನು ಬಿಟ್ಟು ಬೇರೆ ಕಡೆ ಅನಿವಾರ್ಯವಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಅಧಿಕಾರಿಗಳು ನೆಪ ಮಾತ್ರಕ್ಕೆ ಹಸಿರು ಪಟಾಕಿ ಸಿಡಿಸಿ ಎನ್ನುತ್ತಾರೆ. ಮಾರುಕಟ್ಟೆಯಲ್ಲಿ ರಾಸಾಯನಿಕ ವಸ್ತು ಬಳಸಿದ ಪಟಾಕಿ ಮಾರಾಟವಾಗುತ್ತಿದೆ. ಇದಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ವಾಯು ಮಾಲಿನ್ಯದಿಂದ ಉಸಿರಾಟದ ಸಮಸ್ಯೆಗಳಿಗೆ ವಯಸ್ಸಿನ ಅಂತರವಿಲ್ಲದೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪಟಾಕಿ ಸಿಡಿತದಿಂದ ಹಲವು ಜನರ ಕಣ್ಣುಗಳಿಗೆ ಹಾನಿ ಉಂಟಾಗುತ್ತಿದೆ. ಜನರು ಜಾಗೃತರಾಗಿ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದು ಜನರಿಗೆ ಜಾಗೃತಿ ಮೂಡಿಸಿದರು.
ಇದನ್ನು ಓದಿದ್ದೀರಾ? ಉಡುಪಿ | ಡಿಕ್ಕಿ ಹೊಡೆದು ದ್ವಿಚಕ್ರ ವಾಹನದ ಮೇಲೆಯೇ ಬಿದ್ದ ಮಣ್ಣು ತುಂಬಿದ್ದ ಲಾರಿ: ಸ್ಕೂಟಿಯಲ್ಲಿದ್ದ ಮಹಿಳೆಯ ರಕ್ಷಣೆ
ಇದೇ ಸಂದರ್ಭದಲ್ಲಿ ಬಾಲ ಭವನದ ಆವರಣದಲ್ಲಿ ಜೈ ಕರ್ನಾಟಕ ಪರಿಷತ್ ಕಾರ್ಯಕರ್ತರು ಹೂವಿನ ಅಲಂಕಾರ ಮಾಡಿ ಮಣ್ಣಿನ ಹಣತೆ ಹಚ್ಚುವ ಮೂಲಕ ದೀಪಾವಳಿ ಜಾಗೃತಿ ಕಾರ್ಯಕ್ರಮ ಆಚರಿಸಿದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಪರಿಷತ್ತಿನ ಇಂದಿರಾ, ಸವಿತಾ, ಮಂಜುಳಾ, ತನುಜಾ, ಸುಶೀಲಮ್ಮ, ವಿಜಯಲಕ್ಷ್ಮಿ, ಕೆಂಪೇಗೌಡ, ಪ್ರಸಾದ್, ನಾರಾಯಣಸ್ವಾಮಿ, ಸತೀಶ್, ಪುಟ್ಟಸ್ವಾಮಿ, ರಾಜು, ಲಲಿತ ರಾಜಕುಮಾರ್, ಬಸವರಾಜ್ ಭಾಗವಹಿಸಿದ್ದರು.
