ರಂಗಭೂಮಿ, ಚಿತ್ರನಟನಷ್ಟೇ ಅಲ್ಲದೇ ನಿರ್ದೇಶಕನೂ ಆಗಿದ್ದ ಪಾದರಸದಂತಹ ವ್ಯಕ್ತಿತ್ವದ ಶಂಕರ್ ನಾಗ್ ಹೆಸರು ಕರ್ನಾಟಕ ಇರುವವರೆಗೆ ಚಿರಸ್ಥಾಯಿಯಾಗಿರಲಿದೆ ಎಂದು ಮಂಕುತಿಮ್ಮ ಟ್ರಸ್ಟ್‌ನ ವಿನಯ್ ಕುಮಾರ್ ಎಂದರು.
ಚಿತ್ರಕೂಟ ಬಳಗದಿಂದ ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆದ ಮಿಂಚಿನ ಓಟಗಾರ ಶಂಕರ್‌ನಾಗ್ ಜನ್ಮದಿನ ಮತ್ತು ನಿತ್ಯಸಚಿವ ಕೆವಿ ಶಂಕರಗೌಡರ ನೆನಪಿನಲ್ಲಿ ಸಂಗೀತ, ಶ್ರಮದಾನ, ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿಯುವ ‘ಶಂಕರ ನಿರಂತರ’ ಕಾರ್ಯಕ್ರಮದಲ್ಲಿ ‘ಸಮಾಜಮುಖಿ ಶಂಕರ್ ನಾಗ್ ಒಂದು ಅವಲೋಕನ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಚಿತ್ರರಂಗದಲ್ಲಿ ಹೆಸರು ಹೇಳಿದ ಕೂಡಲೇ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಟ ಯಾರಾದರೂ ಇದ್ರೆ, ಅದು ಶಂಕರ್ ನಾಗ್ ಮಾತ್ರ. ಅತ್ಯಂತ ಹೆಚ್ಚು ಚುರುಕಿನ ವ್ಯಕ್ತಿತ್ವದ ಶಂಕರ್ ನಾಗ್, ಅದ್ಭುತವಾಗಿ ಸಮಯ ಪರಿಪಾಲನೆಯಲ್ಲಿ ಮಾಡುತ್ತಿದ್ದರು. ಇದರಿಂದಾಗಿ ಅವರು ಕೇವಲ 34 ವರ್ಷಗಳ ಜೀವಿತಾವಧಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಿದ್ದಾರೆ. ಒಂದೇ ವರ್ಷದಲ್ಲಿ 15 ಚಿತ್ರಗಳನ್ನು ಮಾಡಿದ ದಾಖಲೆ ಶಂಕರ್ ನಾಗ್‌ರಿಗೆ ಸಲ್ಲುತ್ತದೆ. ಸತ್ತಾಗ ಎಲ್ಲರೂ ಮಲಗುವುದು ಇದ್ದೇ ಇದೆ, ಆದರೆ ಬದುಕಿದ್ದಾಗ ಕೆಲಸ ಮಾಡಬೇಕೆಂದು ಶಂಕರ್ ನಾಗ್‌ರ ನುಡಿಯಾಗಿತ್ತು. ಅದರಂತೆ ಅವರು ಜೀವಿಸಿದ್ದರು ಎಂದರು.

ಸುಮಾರು 35 ವರ್ಷಗಳ ಹಿಂದೆಯೇ ಅವರು ಸುರಂಗ ಮೆಟ್ರೋದ ಬಗ್ಗೆ ಚಿಂತನೆ ನಡೆಸಿ, ಪ್ಯಾರಿಸ್‌ಗೆ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ ಬಂದಿದ್ದರು. ಬೆಂಗಳೂರಿಗೂ ಅಂತಹ ಮೆಟ್ರೋ ಬೇಕು ಎಂಬ ಕನಸು ಕಂಡಿದ್ದರು. ಅಲ್ಲದೇ, ಕಾರ್ಖಾನೆಗಳ ಹಾರುಬೂದಿಯಿಂದ ಇಟ್ಟಿಗೆ ತಯಾರಿಸುವ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದರು. ಆಗಿದ ಕಾಲದಲ್ಲಿ ತುರ್ತು ಆರೋಗ್ಯ ಸೇವೆ ಒದಗಿಸಲು ಹೆಲಿಕಾಪ್ಟರ್ ಬಳಕೆ ಮಾಡುವ ಕನಸ್ಸು ಕಂಡಿದ್ದರು. ಅಲ್ಲದೇ, ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದರು. ಬೇರೆ ದೇಶಗಳ ಹೊಸ ತಂತ್ರಜ್ಞಾನವನ್ನು ಅರಿಯಲು ಕಾತರಿಸುತ್ತಿದ್ದರು. ಇಷ್ಟೇ ಅಲ್ಲದೇ ರೆಕಾರ್ಡಿಂಗ್‌ಗೆ ಚೆನ್ನೈಗೆ ಹೋಗಬೇಕಾಗಿದ್ದ ಸಂದರ್ಭದಲ್ಲಿ ಕಲಾವಿದರನ್ನೆಲ್ಲ ಒಟ್ಟುಗೂಡಿಸಿ ಸಂಕೇತ್ ಸ್ಟುಡಿಯೋ ಸ್ಥಾಪಿಸಿದ್ದರು. ಇದು ಅವರ ಬಹುಮುಖಗಳನ್ನು ಅನಾವರಣಗೊಳಿಸುತ್ತದೆ ಎಂದು ನುಡಿದರು.
ಕರ್ನಾಟಕ ಜನಶಕ್ತಿ ಹೋರಾಟಗಾರ್ತಿ ಪೂರ್ಣಿಮಾ, ಶಿಲ್ಪ ಅವರು ‘ಅರಿವಿನ ಪಯಣ’ ಎಂಬ ಕಿರುನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು. ಧೀರ ಭಗತ್ ರಾಯ್ ಚಿತ್ರದ ಉದಯೋನುಖ ನಟ ರಾಜೇಶ್ ದಳವಾಯಿ ಅವರನ್ನು ಚಿತ್ರಕೂಟ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ? ಮಂಗಳೂರು | ಚೆಂಬುಗುಡ್ಡೆ ಅಪಘಾತ: ಟ್ಯಾಂಕರ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ವೇದಿಕೆಯಲ್ಲಿ ರೈತರ ಶಾಲೆಯ ಸಂಸ್ಥಾಪಕ ಪ್ರೊ.ಸತ್ಯಮೂರ್ತಿ, ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ, ಚಿಕ್ಕಮಂಡ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್ ದೇವರಾಜು, ನುಡಿಕರ್ನಾಟಕ ಸಂಪಾದಕ ಸಂತೋಷ್ ಜಿ, ಚಿತ್ರಕೂಟ ಬಳಗದ ಅರವಿಂದ ಪ್ರಭು, ಧನುಷ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
