ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ 01 ಜನವರಿ 2025ರಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಗಳ ವಿಶೇಷ ತಿದ್ದುಪಡಿ-2025ರ ವೇಳಾಪಟ್ಟಿಯನ್ನು ಪ್ರಕಟಿಸಿರುವ ಸಂಬಂಧ ಜಿಲ್ಲೆಯಲ್ಲಿ ಆಗಸ್ಟ್ 20ರಿಂದ ಅಕ್ಟೋಬರ್ 18ರವರೆಗೆ ಮತದಾರರ ಪಟ್ಟಿಯ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ತಿದ್ದುಪಡಿ-2025ರ ಸಂಬಂಧ ಹಮ್ಮಿಕೊಂಡಿದ್ದ ವೀಡಿಯೊ ಸಂವಾದ ಸಭೆಯಲ್ಲಿ ಮಾತನಾಡಿದರು.
“ಜಿಲ್ಲೆಯಲ್ಲಿ 18 ವರ್ಷ ತುಂಬಿರುವ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಮತದಾರರ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಅಳವಡಿಸಲಾಗುವುದು” ಎಂದರು.
“ಮತಗಟ್ಟೆಗಳ ಭೌತಿಕ ಪರಿಶೀಲನೆ ನಡೆಸುವುದು, 1 ಮತಗಟ್ಟೆಯಲ್ಲಿ 1,500ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ್ದರೆ ಅಲ್ಲಿ 2 ಮತಗಟ್ಟೆಯನ್ನು ಸ್ಥಾಪಿಸಲು ತಯಾರಿ ನಡೆಸಲಾಗುವುದು” ಎಂದರು.
“ಇ-ಜನ್ಮ ತಂತ್ರಾಶದಿಂದ ಜಿಲ್ಲೆಯಲ್ಲಿ ಮರಣ ಹೊಂದಿರುವ ಮತದಾರರ ವಿವರವನ್ನು ಪಡೆದು ಪರಿಶೀಲಿಸಿ ನಂತರ ಮರಣ ಹೊಂದಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು” ಎಂದರು.
“ಜಿಲ್ಲೆಯ ಮತದಾರರ ಪಟ್ಟಿ/ಮತದಾರರ ಗುರುತಿನ ಚೀಟಿಗಳಲ್ಲಿ ಹೆಸರು, ವಿಳಾಸ ಮುಂತಾದ ಯಾವುದೇ ರೀತಿಯ ತಿದ್ದುಪಡಿಗಳು ಇದ್ದಲ್ಲಿ ಮತದಾರರು ಲೋಪದೋಷಗಳನ್ನು ಸರಿಪಡಿಸಿಕೊಂಡು ಪರಿಷ್ಕರಿಸಿಕೊಳ್ಳಬಹುದು. ಒಂದೇ ಕುಟುಂಬದ ಮತದಾರರನ್ನು ಒಂದೇ ಮತಗಟ್ಟೆಯಲ್ಲಿ ಹೆಸರು ಬರುವಂತೆ ಸರಿಪಡಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ| ಸಾಮಾಜಿಕ ಜಾಲತಾಣಗಳು ಸಾಹಿತ್ಯವನ್ನು ನುಂಗುತ್ತಿವೆ : ಸಾಹಿತಿ ಡಾ.ಚಂದ್ರಶೇಖರ್ ಬೇಸರ
“ಜಿಲ್ಲೆಯ ಉಪ ವಿಭಾಗಾಧಿಕಾರಿಗಳು ಮತದಾರರ ನೊಂದಣಾಧಿಕಾರಿಯಾಗಿ ಹಾಗೂ ತಹಶೀಲ್ದಾರರು ಸಹಾಯಕ ನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ” ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು, ಉಪ ವಿಭಾಗಧಿಕಾರಿ ನಂದೀಶ್, ಚುನಾವಣಾ ತಹಶೀಲ್ದಾರ್ ರವಿಶಂಕರ್ ಸಿ ಜಿ ಹಾಗೂ ಎಲ್ಲ ತಾಲೂಕಿನ ತಹಶೀಲ್ದಾರರು ಸೇರಿದಂತೆ ಇತರರು ಇದ್ದರು.