ಮಂಡ್ಯ ತಮಿಳು ಕಾಲೋನಿ ನಿವಾಸಿಗಳು ಎತ್ತಂಗಡಿ ಭೀತಿಯಲ್ಲಿದ್ದಾರೆ. ಈ ಭೀತಿಯನ್ನು ಹೋಗಲಾಡಿಸುವವರು ಯಾರು ಎಂಬ ಎನ್ನುವ ನೀರೀಕ್ಷೆಯಲ್ಲಿ ಈ ಜನ ಇದ್ದಾರೆ.
ಕೆಲವು ದಿನಗಳ ಹಿಂದೆ ಚಿಕ್ಕಮಂಡ್ಯದಲ್ಲಿರುವ ಸರ್ವೇ ನಂ.507ರಲ್ಲಿ ರಾಜೀವ್ ಅವಾಸ್ ಯೋಜನೆಯಡಿ ನಿರ್ಮಿಸಿರುವ 576 ಮನೆಗಳಿಗೆ ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರಿಸುವ ಸಂಬಂಧ ನಡೆದ ಸಭೆಯ ತೀರ್ಮಾನದಂತೆ ಸರ್ವೇ ಕಾರ್ಯ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತು. ನ್ಯಾಯಾಲಯವು ತಡೆಯಾಜ್ಞೆ ಇರುವ ಕಾರಣ ವಾಪಸ್ಸಾಗಿದೆ. ತಮಿಳು ಕಾಲೋನಿ ಶ್ರಮಿಕ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಸದ್ಯ ತಡೆ ಆಗಿದೆ.
2015ರಲ್ಲಿ ನ್ಯಾಯಾಲಯ ತಮಿಳು ಕಾಲೋನಿ ತೆರವಿಗೆ ಆದೇಶ ನೀಡಿತ್ತು. 2023ರಲ್ಲಿ ನಮ್ಮನ್ನು ಸ್ಥಳಾಂತರಿಸದಂತೆ ತಡೆಯಾಜ್ಞೆ ನೀಡಿದೆ ಎನ್ನುತ್ತಾರೆ ಕಾಲೋನಿಯ ನಿವಾಸಿಗಳು. ಆದರೆ ಜಿಲ್ಲಾಡಳಿತ, ಈ ಪ್ರದೇಶದ ಸರ್ವೇ ನಡೆಸಿ ಫಲಾನುಭವಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಅದಕ್ಕಾಗಿ ಸರ್ವೇ ಕಾರ್ಯ ಮಾಡುತ್ತೇವೆ. ಫಲಾನುಭವಿಗಳು ಯಾರೂ ಸಹ ತೊಂದರೆ ಕೊಡಬಾರದು. ಜಿಲ್ಲಾಡಳಿತದ ವತಿಯಿಂದ ನಾವು ಬಲವಂತವಾಗಿ ಯಾರನ್ನು ತೆರವುಗೊಳಿಸುವುದಿಲ್ಲ ಎನ್ನುತ್ತಿದ್ದಾರೆ.

ಚಿಕ್ಕ ಮಂಡ್ಯದಲ್ಲಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳಿಗೆ ತಮಿಳು ಕಾಲೋನಿ ನಿವಾಸಿಗಳು ಸ್ಥಳಾಂತರಗೊಳ್ಳಲಿ. ಈ ಪ್ರದೇಶದಲ್ಲಿ ಮಿಮ್ಸ್ ಆಸ್ಪತ್ರೆ ವಿಸ್ತರಣೆಗೊಳ್ಳಬೇಕು ಎಂಬುದು ನಗರದ ಕೆಲವು ಸಂಘಟನೆಗಳ ಒತ್ತಾಯವಾಗಿದೆ. ಇದು ಆಸ್ಪತ್ರೆ ಜಾಗ ಎಂಬುದಕ್ಕೆ ಬಗ್ಗೆ ಯಾವ ಪುರಾವೆಯೂ ಇರಲಿಲ್ಲ. 1941ರಲ್ಲಿ ಆಗಿನ ಪುರಸಭೆ ಆಡಳಿತ ನಮ್ಮಿಂದ ಹಣ ಕಟ್ಟಿಸಿಕೊಂಡು ನಿವೇಶನ ನೀಡಿತ್ತು. 1973ರಲ್ಲಿ 250 ನಿವಾಸಿಗಳಿದ್ದರು ಎಂದು ಇಲ್ಲಿನ ನಿವಾಸಿಗಳು ಮಾಹಿತಿ ನೀಡುತ್ತಾರೆ.
1973ನೇ ಇಸವಿಯಲ್ಲಿ ರಾಮಲಿಂಗೇಗೌಡ ಮನಿಸಿಪಲ್ ಪ್ರೆಸಿಡೆಂಟ್ ಆಗಿರುವಾಗ ರೆಗ್ಯೂಲ್ಯೂಷನ್ ನಂ.311 ಅನ್ನು ಪಾಸ್ ಮಾಡಿ, ತಮಿಳು ಕಾಲೋನಿ ನಿವಾಸಿಗಳಿಗೆ ನಿವೇಶವನ್ನು ಹಂಚಿ, ಪೂರ್ತಿ ಕಿಮ್ಮತ್ತನ್ನು 458 ಕುಟುಂಬಗಳಿಂದ ಕಟ್ಟಿಸಿಕೊಂಡಿರುತ್ತಾರೆ. ಅದಕ್ಕೂ ಮುಂಚೆ 1979ನೇ ಇಸವಿಯಲ್ಲಿ ಮುನಿಸಿಪಲ್ ಪ್ರೆಸಿಡೆಂಟ್ ಆಗಿದ್ದ ಹೊನ್ನಯ್ಯ ಈ ಕಾಲೋನಿಯನ್ನು ಸ್ಲಂ ಎಂದು ಘೋಷಣೆ ಮಾಡಿಸಿದ್ದರು ಎಂದು ನಿವಾಸಿಗಳು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಚನ್ನಪಟ್ಟಣ | ತಾಲೂಕಿನ ನೀರಾವರಿಗೆ ವೆಂಕಟೇಗೌಡರ ಕೊಡುಗೆ ಅಪಾರ: ರಮೇಶ್‌ಗೌಡ
ತಮಿಳು ಕಾಲೋನಿಯ ಮುಖಂಡ ವೆಂಕಟೇಶ್ ಮಾತನಾಡಿ, 2002ನೇ ಸಾಲಿನಲ್ಲಿ ಇದೇ ಕಾಲೋನಿಯಲ್ಲಿ 146 ನಿವಾಸಿಗಳಿಗೆ ವಾಂಬೆ ಯೋಜನೆಯಡಿ ಮನೆಗಳನ್ನು ನಗರಸಭೆ/ಸ್ಲಂಬೋರ್ಡ್ ನಿರ್ಮಿಸಿ ಕೊಟ್ಟಿತ್ತು. ಸದರಿ ಮನೆಗಳನ್ನು ಪಡೆದ ಫಲಾನುಭವಿಗಳಿಗೆ ಅಂಬರೀಶ್ ವಸತಿ ಸಚಿವರಾಗಿದ್ದ ಕಾಲಾವಧಿಯಲ್ಲಿ ಪರಿಚಯ ಪತ್ರವನ್ನು ಕೂಡ ಕೊಟ್ಟಿದೆ. ಈಗ ಇದು ಆಸ್ಪತ್ರೆಯ ಜಾಗ ಎನ್ನುತ್ತಿದ್ದಾರೆ. ಬಲವಂತವಾಗಿ ಜಾಗ ಖಾಲಿ ಮಾಡಿಸಲು ಬರುತ್ತಿದ್ದಾರೆ. ನಾವು ಯಾರೂ ಕೂಡ ಜಾಗ ಬಿಟ್ಟು ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಜನಶಕ್ತಿಯ ಸಿದ್ದರಾಜು ಮಾತನಾಡಿ, “ಇಲ್ಲಿ ತಮಿಳು ಸಮುದಾಯದ ಜನರು 113 ವರ್ಷಗಳಿಂದ ಬದುಕುತ್ತಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ನಮ್ಮದೇನು ತಕರಾರು ಇಲ್ಲ. ಇದು ಸಾವಿರಾರು ಜನರಿಗೆ ಉಪಯೋಗವಾಗುವ ಕೆಲಸ. ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡಲು ಹತ್ತಾರು ಕಡೆ ಜಾಗ ಇದ್ದರೂ ಅವನ್ನೆಲ್ಲ ಬಲಾಡ್ಯರಿಗೆ ಪರಭಾರೆ ಮಾಡಿ, ಸರ್ಕಾರಿ ಜಾಗ ಇಲ್ಲದಂತೆ ಮಾಡಿದ್ದಾರೆ. ಅಸಿಟೇಟ್ ಕಾರ್ಖಾನೆ ಇದ್ದಂತಹ ಸರಕಾರಿ ಜಾಗ ಇವತ್ತು ಖಾಸಗಿಯವರ ಪಾಲಾಗಿದೆ. ಕೆರೆಯಂಗಳದ ಬಹಳಷ್ಟು ನಿವೇಶನಗಳು ರಾಜಕಾರಣಿಗಳ ಪಾಲಾಗಿದೆ. ಅಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಹಿಂಜರಿಕೆ” ಎಂದರು.

ಬಡ ಜನರ ನೆಲೆಯನ್ನು ಕಸಿದುಕೊಳ್ಳಲು ಹೊರಟಿರುವುದು ಎಷ್ಟು ಸರಿ? ಬಲಾಢ್ಯ ಶಕ್ತಿಗಳು ಸುಳ್ಳು ಮುಖದ್ದಮೆ ದಾಖಲಿಸಿ ಬಡವರ ಎದುರು ತೀರ್ಮಾನ ಬರುವಂತೆ ಜಾಣ ನಡೆಯನ್ನು ಇಟ್ಟಿದ್ದಾರೆ. ಹಾಗಾಗಿ, ಅಕ್ರಮ ಒತ್ತುವರಿ ಕಾಯಿದೆ ಅಡಿಯಲ್ಲಿ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಎಕರೆಗಟ್ಟಲೆ ಜಾಗಗಳನ್ನು ಸರ್ವೆ ನಡೆಸಿ, ಮೂಲ ಸರಕಾರಿ ಜಾಗಗಳನ್ನು ಗುರುತಿಸಬೇಕು. ಅವುಗಳನ್ನು ತೆರವುಗೊಳಿಸಬೇಕು. ಅಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಿಸಬೇಕೆಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಯಾವುದೇ ನಿರ್ಧಾರ ಮಾಡುವುದು ಮೋದಿಯವರನ್ನು ಕೇಳಿ: ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ ವೈರಲ್
ಕನ್ನಂಬಾಡಿ ಕಟ್ಟಿದವರು ನಾವು, ಮಂಡ್ಯ ಡಿಸಿ ಕಚೇರಿ ಕಟ್ಟಿದವರು ನಾವು, ಕಲ್ಲು ಕಟ್ಟಡ ಕಾಲೇಜು ಕಟ್ಟಿದವರು ನಾವು, ಮಂಡ್ಯದ ಅಭಿವೃದ್ಧಿಗೆ ನಮ್ಮ ಬೆವರನ್ನು ಬಸಿದಿದ್ದೇವೆ. ಈ ಡಿಸೆಂಬರ್ ತಿಂಗಳೊಳಗೆ ಮಂಡ್ಯ ಕೆರೆಯಂಗಳಕ್ಕೆ ಸ್ಲಂ ಬೋರ್ಡ್ ಕಟ್ಟಿಸುತ್ತಿರುವ ಸಬ್‌ಸ್ಟಾಂಡರ್ಡ್ ಮನೆಗೆ ಸ್ಥಳಾಂತರಿಸಿ ನಮ್ಮ ಜಾಗವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕೆಂಬ ಕಾರ್ಯ ನಡೆಯುತ್ತಿದೆ. ನಮ್ಮ ನೆಲ, ನೆಲ ಕಿತ್ತು ಒಕ್ಕಲೆಬ್ಬಿಸುವ ಕೆಲಸ ಆಗುತ್ತಿದೆ. ಸಂವಿಧಾನದ ಆಶಯದ ವಿರುದ್ಧದ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡರೆ ನಾವು ಒಟ್ಟಾಗಿ ಹೋರಾಡುತ್ತೇವೆ. ಆದ್ದರಿಂದ ನಮ್ಮ ಜಾಗದ ಉಳಿವಿಗಾಗಿ ಮಂಡ್ಯದ ಸಮಸ್ತ ಸಂಘಟನೆಗಳು ಹಾಗೂ ನಾಗರಿಕರು ಬೆಂಬಲ ನೀಡಬೇಕಾಗಿ ಕೋರುತ್ತೇವೆ ಎಂದರು.
