ದೇಶದ ಅಭಿವೃದ್ಧಿ, ಭವಿಷ್ಯದ ನಾಯಕತ್ವ ಮಕ್ಕಳಲ್ಲಿ ಅಡಗಿದೆ ಎಂದು ಕೆ ಆರ್ ಪೇಟೆ ಶಾಸಕ ಹೆಚ್ ಟಿ ಮಂಜು ಹೇಳಿದರು.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ನಗರದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ನೌಕರರ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಸ್ವಾಭಿಮಾನಿ ನೌಕರರ ಬಳಗದಿಂದ, ತಾಲೂಕು ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
“ವಿದ್ಯಾರ್ಥಿ ಜೀವನದ ಬದುಕು ಬೆಳಗುವುದು ಉತ್ತಮ ಶಿಕ್ಷಕರಿಂದ ಮಾತ್ರ. ಗುರುವಿನಿಂದ ಶಾಲೆಯಲ್ಲಿ ಪೆಟ್ಟು ತಿಂದವನು ಕೆಟ್ಟ ಮಾರ್ಗಕ್ಕೆ ಒಳಗಾಗುವುದಿಲ್ಲ. ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಶಿಕ್ಷಕ ಇರದೇ ಇದ್ದರೆ ಸಮಾಜದಲ್ಲಿ ಬದುಕು ಅಸಾಧ್ಯ. ಹಾಗಾಗಿ ದೇಶದ ಅಭಿವೃದ್ಧಿ ಹಾಗೂ ನಾಯಕತ್ವ ಮಕ್ಕಳಲ್ಲಿದೆ” ಎಂದು ಹೇಳಿದರು.

“ವಿದ್ಯಾರ್ಥಿಗಳು ಹೆಚ್ಚಿನ ಬೆಳವಣಿಗೆ ಹೊಂದಿ ಉನ್ನತ ಹುದ್ದೆ ಅಲಂಕರಿಸಿದಾಗ, ಶಿಕ್ಷಕರಿಗೆ ಆನಂದವಾಗುತ್ತದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಭಾವನೆಯ ಜೊತೆಗೆ ಪ್ರತಿಭಾವಂತ ಮಕ್ಕಳಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಲು ಸಂಘಟನೆಯ ಮೂಲಕ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಪ್ರಶಂಸಿಸಿದರು.
ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಮಾತನಾಡಿ, “ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೇ ಕಷ್ಟ ಬಂದರೂ ಅವುಗಳನ್ನು ಎದುರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಬೇಕು. ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಸ್ಥಾನಮಾನಗಳನ್ನು ಪಡೆದು, ಸಮಾಜದ ಮೇಲೆ ಕಳಕಳಿಯನ್ನಿಟ್ಟುಕೊಂಡು ಸೇವೆಯನ್ನು ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅದರ ಜತೆಗೆ ಓದಿನಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸುವುದರ ಮೂಲಕ ಹೆತ್ತವರನ್ನು ಸಂತಸಪಡಿಸಬೇಕು. ಜತೆಗೆ ಸಂಸ್ಕಾರ ಸಂಸ್ಕೃತಿಯನ್ನೂ ಮೈಗೂಡಿಸಿಕೊಳ್ಳಬೇಕು” ಎಂದರು.
ಅತಿಹೆಚ್ಚು ಅಂಕ ಗಳಿಸಿದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಹಾಗೂ ಸುದೀರ್ಘ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕರಿಗೆ ಅಭಿನಂದಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಾವುತ, ಕಾವಾಡಿಗ ಕುಟುಂಬದ ಮಹಿಳೆಯರಿಗೆ ಬಾಗಿನ ವಿತರಿಸಿದ ಡಾ ಪುಷ್ಪ ಅಮರನಾಥ್
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ, ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್, ತಾಲೂಕು ಅಧ್ಯಕ್ಷ ಹಳೆಯೂರು ಯೋಗೇಶ್, ಜನಾರ್ದನ್, ಡಾ ಅರುಣ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾಲೂಕು ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಸುಲೋಚನಾ, ಮದ್ದೂರು ತಾಲೂಕು ಅಧ್ಯಕ್ಷ ಶಿವಣ್ಣ, ಮಂಡ್ಯ ದಕ್ಷಿಣ ತಾಲೂಕಿನ ಅಧ್ಯಕ್ಷ ಡಿ ಕೆ ನಾಗರಾಜು, ತಾಲೂಕಿನ ಪದಾಧಿಕಾರಿಗಳಾದ ಅರುಣ್ ಕುಮಾರ್, ನಂಜುಂಡ, ಅಣ್ಣಯ್ಯ, ಗೋಪಾಲಕೃಷ್ಣ, ರತ್ನಮ್ಮ, ಮೋಹನ್, ಮಹೇಶ್, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಕೆ ಎಸ್ ರಾಜು, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಕೃಷ್ಣ ನಾಯಕ್ ಹಾಗೂ ತಾಲೂಕಿನ ಸ್ವಾಭಿಮಾನಿ ನೌಕರರು ಇದ್ದರು.
