ಟೋಲ್ ಸಂಗ್ರಹದ ನೆಪದಲ್ಲಿ ಮಂಡ್ಯ ಜಿಲ್ಲೆಯ ಬಹುತೇಕ ಕಡೆ ಎಂಟ್ರಿ ಮತ್ತು ಎಕ್ಸಿಟ್ಗಳನ್ನು ಕ್ಲೋಸ್ ಮಾಡಲಾಗಿದೆ, ಹೀಗಾಗಿ, ಬೆಂಗಳೂರಿನಿಂದ ಮಂಡ್ಯಕ್ಕೆ, ಮೈಸೂರಿನಿಂದ ಮಂಡ್ಯಕ್ಕೆ, ಮಂಡ್ಯದಿಂದ ಮೈಸೂರಿಗೆ ತೆರಳುವ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸದಾ ವಿವಾದಗಳಿಗೆ ಸುದ್ದಿಯಾಗಿದೆ. ಈ ಹಿಂದೆ, ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಎಂಟ್ರಿ ಹಾಗೂ ಎಕ್ಸಿಟ್ಗಳು ಇರಲಿಲ್ಲ. ನೇರವಾಗಿ ಬೆಂಗಳೂರಿನಿಂದ ಮೈಸೂರು ಸಂಚಾರಕ್ಕೆ ಮಾತ್ರ ಅವಕಾಶ ಇತ್ತು. ಆನಂತರ ಪ್ರತಿಭಟನೆ, ಹೋರಾಟಗಳು ನಡೆದ ನಂತರ ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸಂಪರ್ಕ ಕಲ್ಪಿಸಲು ಎಲ್ಲ ಪಟ್ಟಣಗಳ ಬಳಿ ಎಂಟ್ರಿ ಹಾಗೂ ಎಕ್ಸಿಟ್ ಕಲ್ಪಿಸಲಾಗಿತ್ತು.
ಆದರೆ, ಇದೀಗ ಟೋಲ್ ಸಂಗ್ರಹದ ನೆಪವೊಡ್ಡಿ, ಮಂಡ್ಯ ಜಿಲ್ಲೆಯ ಬಹುತೇಕ ಕಡೆ ಎಂಟ್ರಿ ಹಾಗೂ ಎಕ್ಸಿಟ್ಗಳನ್ನ ಕ್ಲೋಸ್ ಮಾಡಲಾಗಿದೆ. ಹೀಗಾಗಿ, ಮಂಡ್ಯದಿಂದ ಮೈಸೂರು ಮತ್ತು ಬೆಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ, ಎಕ್ಸ್‌ಪ್ರೆಸ್ ವೇನಲ್ಲಿ ದುಬಾರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರಿನ ಕಣಮಿಣಿಕೆ ಮತ್ತು ಮಂಡ್ಯದ ಗಣಂಗೂರು ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಬೆಂಗಳೂರಿನಿಂದ ಬರುವ ವಾಹನ ಸವಾರರು ಪಾಂಡವಪುರಕ್ಕೆ ಹೋಗಬೇಕಾದರೆ, ಇಂಡವಾಳು ಬಳಿ ಎಕ್ಸ್‌ಪ್ರೆಸ್ ವೇನಿಂದ ಹೊರ ಬರುತ್ತಿದ್ದರು. ಆದರೆ, ಇದೀಗ ಆ ಎಕ್ಸಿಟ್ಅನ್ನು ಕ್ಲೋಸ್ ಮಾಡಲಾಗಿದೆ.
ಇನ್ನು ಮಂಡ್ಯದಿಂದ ಮೈಸೂರಿಗೆ ಹೋಗುವವರು ಇಂಡುವಾಳು ಬಳಿ ಇರುವ ಎಂಟ್ರಿ ಮೂಲಕ ಎಕ್ಸ್‌ಪ್ರೆಸ್ ವೇಗೆ ಬರುತ್ತಿದ್ದರು. ಎಂಟ್ರಿಯನ್ನು ಬಂದ್ ಮಾಡಲಾಗಿದ್ದು, ಮಂಡ್ಯದಿಂದ ಮೈಸೂರಿನವರೆಗೂ ಸರ್ವೀಸ್ ರಸ್ತೆಯಲ್ಲೇ ಪ್ರಯಾಣಿಸಬೇಕಾಗಿದೆ.