ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವ ಹುನ್ನಾರದ ವಿರುದ್ಧ ನಾಡಿನ ಸಾರ್ವಜನಿಕರು ಮತ್ತು ಸಾಹಿತ್ಯ ವಲಯ ಅಕ್ಟೋಬರ್ 22ರ ಮಂಗಳವಾರ ಬೆಳಿಗ್ಗೆ 11ಕ್ಕೆ ಮಂಡ್ಯದಲ್ಲಿ ಸಾಮೂಹಿಕ ಪ್ರತಿರೋಧಕ್ಕೆ ಕರೆ ನೀಡಿದೆ.
ಸಾಹಿತ್ಯ ವಲಯದಿಂದ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದು, “ಅಕ್ಟೋಬರ್ 22ರ ಮಂಗಳವಾರ 11.30ಕ್ಕೆ ಮಂಡ್ಯದ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿದ್ದು, ಜಿಲ್ಲೆಯ ಹಿರಿಯ ಸಾಹಿತಿಗಳು ಮಾತನಾಡಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆಯಲ್ಲಿ ಸಾಹಿತ್ಯಾಸಕ್ತರ ಮೌನ ಮೆರವಣಿಗೆ ಸಾಗಲಿದೆ. 12.30ಕ್ಕೆ ಜಿಲ್ಲಾಧಿಕಾರಿ ಮೂಲಕ ನಾಡಿನ ಮುಖ್ಯಮಂತ್ರಿಗಳಿಗೆ ನಮ್ಮ ಹಕ್ಕೊತ್ತಾಯದ ಪತ್ರ ಸಲ್ಲಿಸಲಿದ್ದೇವೆ. ಕನ್ನಡ ನಾಡಿನ ಸಾಹಿತ್ಯಾಸಕ್ತ ಗೆಳೆಯರೆಲ್ಲರೂ ಜತೆಗೂಡಿ” ಎಂದು ಆಹ್ವಾನಿಸಿದ್ದಾರೆ.
ಹೋರಾಟ ಬೆಂಬಲಿಸುವವರು ಅಕ್ಟೋಬರ್ 22ರ ಮಂಗಳವಾರ ಬೆಳಿಗ್ಗೆ 11ಕ್ಕೆ ಮಂಡ್ಯ ಪತ್ರಕರ್ತರ ಸಂಘದಲ್ಲಿ ಸೇರಲು, ಮತ್ತೊಬ್ಬರಿಗೆ ವಿಚಾರವನ್ನು ದಾಟಿಸಿ ಹೆಚ್ಚಿನ ಜನರನ್ನು ಕರೆ ತರಲು ಕರೆ ನೀಡಿದ್ದಾರೆ.
ಸಾಹಿತ್ಯದ ಪರಿಚಾರಿಕೆಗೆ ಜನ್ಮತಾಳಿದ ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಬೇಕಾದವರು ಸಾಹಿತಿಗಳೇ ಹೊರತು ರಾಜಕಾರಣಿಗಳೋ, ಮಠಾಧೀಶರೋ ಅಥವಾ ಇತರ ಕ್ಷೇತ್ರದ ಸಾಧಕರೋ ಅಲ್ಲ. ಅವರಿಗೆ ಮೀಸಲಾದ ಬೇರೆ ವೇದಿಕೆಗಳಿವೆ. ಈವರೆಗೂ ನಡೆದುಕೊಂಡು ಬಂದ ಪರಂಪರೆಗೆ ಬೆನ್ನು ತಿರುಗಿಸಿ ಸಾಹಿತಿಗಳನ್ನೇ ಹೊರಗಿಟ್ಟು ಸಮ್ಮೇಳನ ನಡೆಸುವ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲು ನಾವು ಬಿಡುವುದಿಲ್ಲ. ಸಾಹಿತ್ಯಾಸಕ್ತಿಗಳ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯ ವಿರುದ್ದ ಸಾಹಿತ್ಯ ವಲಯದ ನಾವೆಲ್ಲರೂ ಒಟ್ಟಾಗಿ ನಿಲ್ಲುತ್ತಿದ್ದೇವೆ.
ಕುವೆಂಪು ಮೆಚ್ಚಿದ, ನಾಲ್ವಡಿ ಹರಸಿದ, ಕೆವಿ ಶಂಕರಗೌಡ ಕಟ್ಟಿದ ಮಂಡ್ಯದ ನೆಲದಲ್ಲಿ ಈಗಾಗಲೇ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಘನತೆಯಿಂದ ಜರುಗಿವೆ. 1964ರಲ್ಲಿ ಜಯದೇವಿತಾಯಿ ಲಿಗಾಡೆ, 1994ರಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ ಇಡೀ ನಾಡು ಕೊಂಡಾಡುವಂತೆ ನಮ್ಮ ಮಂಡ್ಯ ಜಿಲ್ಲೆ ಆತಿಥ್ಯ ವಹಿಸಿ, ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದೆ. ಈ ಇತಿಹಾಸಕ್ಕೆ ಕಪ್ಪು ಚುಕ್ಕೆ ಇಡಲು ಮಂಡ್ಯದ ಜನರು ನಾವು ಬಿಡುವುದಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ʼಗೃಹಲಕ್ಷ್ಮಿʼ ಯೋಜನೆ ಹಣ ಕೂಡಿಟ್ಟು ಎತ್ತು ಖರೀದಿಸಿದ ರೈತ ಮಹಿಳೆ
ಈಗ ಒಂದೆಡೆ ಸಮ್ಮೇಳನಾಧ್ಯಕ್ಷತೆಗೆ ಸಾಹಿತ್ಯೇತರರನ್ನು ಮುನ್ನೆಲೆಗೆ ತಂದು, ಇನ್ನೊಂದೆಡೆ ನಾಡಿನ ವಿದ್ವಾಂಸರ ಮಾತಿಗೆ ಗೌರವ ಕೊಡದೆ ಅವಮಾನ ಮಾಡಲಾಗುತ್ತಿದೆ. ಏಳು ಕೋಟಿ ಕನ್ನಡಿಗರ ಸಾಹಿತ್ಯ ಸಮ್ಮೇಳನವನ್ನು ಏಕಮುಖವಾಗಿ ಕೊಂಡೊಯ್ಯಲಾಗುತ್ತಿದೆ. ಇದೆಲ್ಲದರ ವಿರುದ್ಧ ನಾಳೆ ನಮ್ಮ ಪ್ರತಿರೋಧವಿರಲಿದೆ.