ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿ ಉರುಳಿ ಬಿದ್ದ ಪರಿಣಾಮ ಮಗು ಸಾವನ್ನಪ್ಪಿದ ದಾರುಣ ಘಟನೆ ಶನಿವಾರ(ಅ.5) ಮಧ್ಯಾಹ್ನ ಸಂಭವಿಸಿದೆ.
ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಕೋಡಿ ಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಮಗುವನ್ನು ರೋಷಿತ ಎಂದು ಗುರುತಿಸಲಾಗಿದೆ.
ಕಬ್ಬು ಲೋಡ್ ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿ ದಿಢೀರನೆ ತುಂಡಾಗಿ ಮಗುಚಿದೆ. ಪರಿಣಾಮ ಸ್ಥಳದಲ್ಲಿ ಆಟವಾಡುತ್ತಿದ್ದ ಕೂಲಿ ಕಾರ್ಮಿಕ ದಂಪತಿಯ ಮಗು ಮಗು ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.

ಹೊರ ರಾಜ್ಯದಿಂದ ಕಬ್ಬು ಕಟಾವು ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ದಂಪತಿಯ ಮಗು ರಸ್ತೆ ಬದಿಯಲ್ಲಿ ಆಟವಾಡುತ್ತಿತ್ತು. ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ತುಂಬಿಕೊಂಡು ತೆರಳುವಾಗ, ಟ್ರೈಲರ್ ತುಂಡಾಗಿ ಮಗುಚಿದೆ. ಈ ವೇಳೆ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಗು ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರವಾದಿ ಮುಹಮ್ಮದ್ ಕುರಿತು ಯತಿ ನರಸಿಂಹಾನಂದ್ ಪ್ರಚೋದನಾಕಾರಿ ಹೇಳಿಕೆ; ಕ್ರಮಕ್ಕೆ ಆಗ್ರಹ
ಜೆಸಿಬಿ ಯಂತ್ರ ತರಿಸಿ ಟ್ರಾಲಿಯನ್ನು ಮೇಲೆತ್ತಿ ಮಗುವಿನ ಶವ ಹೊರ ತೆಗೆಯಲಾಗಿದೆ. ಘಟನಾ ಸ್ಥಳದಲ್ಲಿದ್ದ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
