ಕನ್ನಂಬಾಡಿಯಲ್ಲಿ ನಡೆಸಲು ಉದ್ದೇಶಿಸಿರುವ ಕಾವೇರಿ ಆರತಿ ಕಾರ್ಯಕ್ರಮ ಕೈಬಿಟ್ಟು ವಚನಗಳನ್ನು ಪಸರಿಸಲು ಯೋಜನೆ ಹಾಕಿಕೊಳ್ಳಬೇಕೆಂದು ‘ನಾವು ದ್ರಾವಿಡ ಕನ್ನಡಗರು’ ಸಂಘಟನೆ ಮುಖಂಡರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಆಡಳಿತಕ್ಕೆ ಒತ್ತಾಯಿಸಿದರು.
“ಮಂಡ್ಯ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಇಂಡಿಯಾ ಒಕ್ಕೂಟದ ಹಿಂದುಳಿದ ನಾಡುಗಳಾದ ಉತ್ತರಖಂಡ, ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ, ಜಾತಿ ಅಸಮಾನತೆ ಹೆಚ್ಚಿಸುವ ಮತ್ತು ನದಿ ನೀರನ್ನು ಕೊಳಕು ಮಾಡುವ ಗಂಗಾರತಿ ಕಾರ್ಯಕ್ರಮ ನೋಡಿಕೊಂಡು ಬಂದು ಅದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಆರತಿ ಮಾಡಲು ಮುಂದಾಗಿರುವುದನ್ನು ಸುದ್ದಿ ಪತ್ರಿಕೆಗಳಲ್ಲಿ ನೋಡಿ ಅಚ್ಚರಿಯಾಗಿದೆ. ಅಂತಹ ಕಾರ್ಯಕ್ರಮವನ್ನು ಮಂಡ್ಯದಲ್ಲಿ ನಡೆಸುವುದನ್ನು ಕೈಬಿಡಬೇಕು” ಎಂದು ಮನವಿ ಮಾಡಿದರು.
“ವಿಶ್ವ ಮಾನವ ಕುವೆಂಪು ಹೇಳಿದಂತೆ, ʼಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು ದಕ್ಷಿಣದ ದೇಶಕದು ಕುದುರೆಯಹುದೆ?, ಗಂಗಾ ಮಾತ್ರ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಪವಿತ್ರ ಅಲ್ಲವೇ?ʼ ಎಂಬ ಸಾಲುಗಳನ್ನು ಉಲ್ಲೇಖಿಸಿರುವ ದ್ರಾವಿಡ ಕನ್ನಡಿಗರು, ಈಗಾಗಲೇ ಒಕ್ಕೂಟ ಆಳಿಕೆ ಸರ್ವಾಧಿಕಾರ ಧೋರಣೆಯಿಂದ ಕನ್ನಡನಾಡು, ನುಡಿ ಆಚರಣೆಗಳಿಗೆ ಅವಕಾಶ ಕೊಡದೆ, ಬಡಗ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಇದು ಯಾರೂ ಒಪ್ಪಲಾರದ ನಡೆ. ಈ ಹುನ್ನಾರವನ್ನು ತೆಂಕಣದ ನಾಡುಗಳೆಲ್ಲ ಒಕ್ಕೊರಲಿನಿಂದ ಖಂಡಿಸುತ್ತಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ದಲಿತ ಅಪ್ರಾಪ್ತೆಯರ ಅತ್ಯಾಚಾರ, ಕುಟುಂಬಗಳಿಗೆ ಬಹಿಷ್ಕಾರ; ಸವರ್ಣೀಯರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ
“ಕನ್ನಡ ಆಳಿಕೆ ಕೂಡ ಒಕ್ಕೂಟ ನಡೆಯನ್ನು ಖಂಡಿಸಿದೆ. ಹೀಗಿರುವಾಗ, ಕರ್ನಾಟಕ ಸರ್ಕಾರ ಕೂಡ ಬಡಗ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಹಣ ವ್ಯಯಿಸುವುದು ತಪ್ಪು ನಡೆಯಾಗಿದೆ. ಇದು ದ್ವಂದ್ವ ನಿಲುವು. ಹಾಗಾಗಿ ಕಾವೇರಿ ಆರತಿ ಕೈಬಿಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದರ್ಶನ್, ಬಸವರಾಜ ನಾಯಕ ಹಾಗೂ ಮನುಗೌಡ ಇದ್ದರು.