ಯಾರು ಜನಿವಾರ ಹಾಕುವುದಿಲ್ಲವೋ, ಅವರೆಲ್ಲರೂ ಶೂದ್ರರು. ಬ್ರಾಹ್ಮಣ ಮಹಿಳೆಯರು ಕೂಡ ಜನಿವಾರ ಹಾಕುವುದಿಲ್ಲ. ಹಾಗಾಗಿ, ಅವರು ಸಹ ಶೂದ್ರರೇ ಎಂದು ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ದಸಂಸ ಆಯೋಜಿಸಿದ್ದ ಸಾಮಾಜಿಕ ನ್ಯಾಯ ಜಾರಿಗಾಗಿ ಜನಾಗ್ರಹ ಸಮಾವೇಶದಲ್ಲಿ ಅವರು ಮಾತನಾಡಿದರು. “ಚಾತುರ್ವಣಗಳಲ್ಲಿ ಈಗ ಉಳಿದಿರುವುದು ಬ್ರಾಹ್ಮಣ ಮತ್ತು ಶೂದ್ರ ಮಾತ್ರ. ಬ್ರಾಹ್ಮಣರಲ್ಲಿ ಮಹಿಳೆಯರಿಗೆ ಉಪನಯನ ಇಲ್ಲ, ಜನಿವಾರ ಧರಿಸುವಂತಿಲ್ಲ. ಯಾರೂ ಜನಿವಾರ ಹಾಕುವುದಿಲ್ಲವೋ ಅವರೆಲ್ಲರೂ ಶೂದ್ರರೇ” ಎಂದಿದ್ದಾರೆ.
“ಸ್ವಾಮಿ ವಿವೇಕಾನಂದ ಅವರನ್ನು ಹಿಂದು ಧರ್ಮದ ಪ್ರತಿಪಾಕರು ಎಂದು ಕೆಲವು ಬಲಪಂಥೀಯರು ಬಿಂಬಿಸಲು ಹೊರಟಿದ್ದಾರೆ. ಆದರೆ, ಅವರು ವಾಸ್ತವದಲ್ಲಿ ಮೇಲು ಕೀಳಿನಿಂದ ಕೂಡಿದ್ದ, ಅಸಮಾನತೆಯ ಹಿಂದು ಧರ್ಮದ ಕಟು ಟೀಕಾಕಾರರಾಗಿದ್ದರು. ಅವರು ನಾನೊಬ್ಬ ಬೌದ್ಧ ಎಂದು ಹೇಳಿಕೊಂಡಿದ್ದರು. ನನ್ನದು ಸಂಕುಚಿತ ಹಿಂದು ಧರ್ಮವಲ್ಲ, ಬದಲಾಗಿ ಮಾನವ ಧರ್ಮ ಎಂದಿದ್ದರು” ಎಂದು ಭಗವಾನ್ ಪ್ರತಿಪಾದಿಸಿದ್ದಾರೆ.
“ರಾಷ್ಟ್ರಕವಿ ಕುವೆಂಪು ಕಾನೂನು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿ ಹಿಂದು ಧರ್ಮವನ್ನು ಸಿಗಿದು ತೋರಣ ಕಟ್ಟಿದ್ದಾರೆ” ಎಂದಿದ್ದಾರೆ.
“ಪೆರಿಯಾರ್, ನಾರಾಯಣಗುರು, ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ಮೌಢ್ಯ, ಅಂಧಕಾರ, ಶೋಷಣೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದಾರೆ, ಹಾಗಾಗಿ ಬುದ್ಧ, ಅಶೋಕ, ಬಸವಣ್ಣ, ಸ್ವಾಮಿ ವಿವೇಕಾನಂದರ ಜೊತೆಗೆ ಇಂತಹ ಮಹನೀಯರ ಅಧ್ಯಯನ ಮಾಡಬೇಕು, ಅಂಬೇಡ್ಕರ್ ನಮ್ಮವರು ಎಂದರೆ ಬಲ ಬರಲ್ಲ, ಬದಲಾಗಿ ಅವರ ಬದುಕು -ಬರಹ ಮತ್ತು ವಿಚಾರದ ಪುಸ್ತಕಗಳನ್ನು ಓದಬೇಕು, ವಿಶೇಷವಾಗಿ ಜಾತಿ ವಿನಾಶ ಸಂಪುಟವನ್ನು ಓದಿ” ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ಸಂಪನ್ಮೂಲ ಕೇಂದ್ರದ ಮಾಜಿ ನಿರ್ದೇಶಕ ಡಾ.ಎಸ್.ತುಕಾರಾಂ, ವಿಚಾರವಾದಿ ಮಾಯಿಗೌಡ ಸೇರಿದಂತೆ ಮತ್ತಿತರರಿದ್ದರು.