ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ದಲಿತ ಯುವಕನ ಸಾವಿನ ಪ್ರಕರಣದಲ್ಲಿ ಲೋಪ ಎಸಗಿರುವ ಆರೋಪ ಇರುವ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ್ ಅವರನ್ನು ಅಮಾನತು ಮಾಡಿ, ಪ್ರಕರಣದ ತನಿಖೆ ನಡೆಸಬೇಕು ಎಂದು ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಬಿ ಗೌಡ ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಯಲ್ಲಿ ಲೋಪ ಇವೆ. ಹೀಗಾಗಿ ಆರೋಪಿತ ಅಧಿಕಾರಿಗಳನ್ನು ಅಮಾನತು ಮಾಡಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೀನಾಮೇಷ ತೋರುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಸಾವಿಗೀಡಾದ ಜಯಕುಮಾರ್ ಹಿಂದಿನ ದಿನವೇ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಪೊಲೀಸ್ ಅಧಿಕಾರಿಗಳಾದ ಆನಂದೇ ಗೌಡ, ದಪೇದಾರ್ ವೈರಮುಡಿ, ಸುಬ್ಬಯ್ಯ, ಚಲುವರಾಜು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿವಾಕರ್ ಅವರು ಮೃತದೇಹವನ್ನು ಹೂಳುವ ಬದಲಿಗೆ ಸುಟ್ಟು ಹಾಕಿದ್ದಾರೆ. ಇದರಿಂದ ಉನ್ನತ ತನಿಖೆಗೆ ಮತ್ತೆ ಮರಣೋತ್ತರ ಪರೀಕ್ಷೆಗೆ ಮೃತದೇಹವೇ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಈ ಅಧಿಕಾರಿಗಳೇ ನಡೆಸುತ್ತಿದ್ದಾರೆ. ಹೀಗಿರುವಾಗ ನ್ಯಾಯ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಆರೋಪಿತ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಿ ಬಳಿಕ ಸಾವಿನ ಪ್ರಕರಣವನ್ನು ತನಿಖೆ ನಡೆಸಬೇಕು. ಆರೋಪಿತ ಅಧಿಕಾರಿಗಳನ್ನು ಅಮಾನತು ಮಾಡದಿದ್ದರೆ ಜೂನ್ 9ರಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ವಿ.ಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.