ಪ್ರಸ್ತುತ ವರ್ಷದಲ್ಲಿ ರಾಜ್ಯಾದ್ಯಂತ ಮುಂಗಾರು ವಿಳಂಬ ಮತ್ತು ಜಲಾಶಯಗಳ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾಶಯಗಳ ನೀರು ಬೆಳೆಗೆ ಸಾಕಾಗುವುದಿಲ್ಲವೆಂಬ ಆತಂಕದಿಂದ ಕಾವೇರಿ ಜಲಾನಯನ ಪ್ರದೇಶದ ಬಹುತೇಕ ರೈತರು ಭತ್ತದ ಕೃಷಿಯನ್ನು ಕೈಬಿಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮದ್ದೂರಿನ ರೈತರು ವಿಶ್ವೇಶ್ವರಯ್ಯ ನಾಲೆ ಮತ್ತು ಫೀಡರ್ ಕಾಲುವೆಗಳನ್ನು ಅವಲಂಬಿಸಿದ್ದಾರೆ. ಟಿ. ನರಸೀಪುರದ ತಲಕಾಡು ಪ್ರದೇಶ ಮತ್ತು ಕೊಳ್ಳೇಗಾಲದ ಕೆಲವು ಭಾಗಗಳ ರೈತರು ಕಬಿನಿ ಜಲಾಶಯದ ನೀರನ್ನು ಅವಲಂಬಿಸಿದ್ದಾರೆ. ಜಲಾಶಯ ಮತ್ತು ಕಾಲುವೆಗಳಲ್ಲಿ ನೀರು ಇಳಿಕೆಯಾಗುತ್ತಿರುವ ಕಾರಣ ಮುಂಗಾರು ಬೆಳೆಯನ್ನು ಬಿತ್ತನೆ ಮಾಡದೆ ಕೃಷಿಯನ್ನು ಕೈಬಿಟ್ಟಿದ್ದಾರೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಜುಲೈ ಅಂತ್ಯದಲ್ಲಿ 113 ಅಡಿಗೆ ಮತ್ತು ಕಬಿನಿ ಜಲಾಶಯದ ನೀರಿನ ಮಟ್ಟ 2,282 ಅಡಿಗೆ ಏರಿದಾಗ ಕೃಷಿ ಚಟುವಟಿಕೆಗಳು ಚುರುಕುಗೊಂಡವು. ಅರೆ ಬೆಳೆ ಬೆಳೆಯಲು ಕೆಆರ್‌ಎಸ್ ಮತ್ತು ಕಬಿನಿ ಜಲಾಶಯ ಪ್ರದೇಶದಲ್ಲಿ ತಿಂಗಳಿಗೆ 15 ದಿನ ನೀರು ಹರಿಸುವುದಾಗಿ ನೀರಾವರಿ ಸಲಹಾ ಸಮಿತಿ ಭರವಸೆ ನೀಡಿತ್ತು. ಆದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸರ್ಕಾರವು ತಮಿಳುನಾಡಿಗೆ 25 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿದ್ದರಿಂದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವು 97.38 ಅಡಿಗೆ ಇಳಿದಿದ್ದು, ಕಬಿನಿ ಜಲಾಶಯದ ನೀರಿನ ಮಟ್ಟ 2276.25 ಅಡಿಗೆ ಇಳಿದಿದೆ.
“ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮದ್ದೂರು ತಾಲೂಕುಗಳಲ್ಲಿ ಭತ್ತದ ಕೃಷಿ ಮತ್ತು ಇತರೆ ಕೃಷಿಗೆ ಹೊಡೆತ ಬಿದ್ದಿದೆ. ಆದರೂ ಕೆರೆಗಳು ಮತ್ತು ನೀರಾವರಿ ಪಂಪ್‌ಸೆಟ್‌ಗಳ ನೀರನ್ನು ಅವಲಂಬಿಸಿರುವ ಕೆಲವು ಭಾಗಗಳಲ್ಲಿ ಭತ್ತದ ನಾಟಿಯನ್ನು ಕೈಗೊಂಡಿದ್ದಾರೆ” ಎಂದು ಸ್ಥಳೀಯ ರೈತರೊಬ್ಬರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ರೋಗಿಗಳ ಜೀವ ಉಳಿಸಲು ರಕ್ತದಾನ ಮಾಡಿದ ಕಿಮ್ಸ್ ವೈದ್ಯರು, ಸಿಬ್ಬಂದಿ
“ಭತ್ತದ ಕೃಷಿಗೆ ಹೆಸರುವಾಸಿಯಾದ ತಲಕಾಡು ಪ್ರದೇಶವು ಹಾನಿಗೊಳಗಾಗಿದ್ದು, ಬೆಳೆಗೆ ಸಾಕಷ್ಟು ನೀರು ಸಿಗುವುದಿಲ್ಲವೆಂಬ ಭಯದಿಂದ ಬಹುತೇಕ ರೈತರು ಕಂಗಾಲಾಗಿದ್ದಾರೆ. ಕೆಲ ರೈತರು ದ್ವಿದಳ ಧಾನ್ಯಗಳನ್ನು ಬೆಳೆಯಲು ಪ್ರಯತ್ನಿಸಿ, ಬಿತ್ತನೆ ಮಾಡಿದ್ದರು. ಆದರೆ ಮಳೆಯ ಕೊರತೆಯಿಂದಾಗಿ ಉತ್ತಮ ಇಳುವರಿ ಸಿಗಲಿಲ್ಲ” ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಕೊಳ್ಳೇಗಾಲ ತಾಲೂಕಿನ ಸಿಸಳೆ, ಮೂಗೂರು ಮತ್ತು ಕೆಲವು ಭಾಗಗಳಲ್ಲಿ ಅನೇಕರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಆಕಾಶದತ್ತ ನೋಡುತ್ತಿದ್ದರೆ, ಫೀಡರ್ ಕಾಲುವೆಗಳಿಂದ ಸಾಕಷ್ಟು ನೀರಿಲ್ಲದೆ ನಿಂತಿರುವ ಕಬ್ಬಿನ ಬೆಳೆಗಳು ಸಹ ಕೆಟ್ಟದಾಗಿ ಹಾನಿಗೊಳಗಾಗಿವೆ.