ಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿಗಳಾದ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಕಾನ್‌ಸ್ಟೇಬಲ್ ಪ್ರವೀಣ್ ನಾಯ್ಕರಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಜಾಮೀನು ಮಂಜೂರು ಮಾಡಿದ್ದಾರೆ.
ವ್ಯಕ್ತಿಯೊಬ್ಬರ ಸ್ಕೂಟರ್‌ನ್ನು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಠಾಣೆಯ ಇನ್ಸ್ ಪೆಕ್ಟರ್ ಮುಹಮ್ಮದ್ ಶರೀಫ್ ಮತ್ತು ಕಾನ್‌ಸ್ಟೇಬಲ್ ಪ್ರವೀಣ್ ನಾಯ್ಕ ಅವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಜ.28ರಂದು ಬಂಧಿಸಿದ್ದರು. ಅದರಂತೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.
ಆರೋಪಿ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು ಅರ್ಜಿಯನ್ನು ಪರಿಗಣಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾರವರು ಇನ್ಸ್‌ಪೆಕ್ಟರ್ ಮೊಹಮ್ಮದ್ ಶರೀಫ್ ಅವರು ಲಂಚದ ಬೇಡಿಕೆ ಇಟ್ಟ ಬಗ್ಗೆ ಹಾಗೂ ಲಂಚದ ಹಣ ಸ್ವೀಕರಿಸಿದ ಬಗ್ಗೆ ಯಾವುದೇ ಪೂರಕವಾದ ಅಂಶಗಳು ಇಲ್ಲದ ಕಾರಣ ಜಾಮೀನು ಅರ್ಜಿ ಮಂಜೂರು ಮಾಡಿ, ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಆರೋಪಿಗಳ ಪರವಾಗಿ ಮಂಜೂರಿನ ವಕೀಲರಾದ ಬಿ. ಅರುಣ್ ಬಂಗೇರ ಮತ್ತು ರಿಹಾನಾ ಪರ್ವಿನ್ ವಾದಿಸಿದ್ದರು.
ಏನಿದು ಪ್ರಕರಣ?
ಪೊಲೀಸರ ವಶದಲ್ಲಿದ್ದ ಸ್ಕೂಟರ್ ಬಿಡುಗಡೆಗೊಳಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಸಲುವಾಗಿ ದೂರುದಾರರು ಉತ್ತರ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಅವರನ್ನು ಭೇಟಿ ಮಾಡಿದ್ದರು. ಸ್ಕೂಟರ್ ಬಿಡುಗಡೆಗೊಳಿಸಲು ₹5 ಸಾವಿರ ಲಂಚ ನೀಡುವಂತೆ ಇನ್ಸ್‌ಪೆಕ್ಟರ್ ಶರೀಫ್ ಬೇಡಿಕೆ ಇಟ್ಟಿದ್ದರು. ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿದಾಗ ಠಾಣಾ ಬರಹಗಾರರಾದ ನಾಗರತ್ನ ಅವರನ್ನು ಭೇಟಿ ಮಾಡಲು ತಿಳಿಸಿದ್ದರು. ಆಕೆಯ ಬಳಿ ಹೋದಾಗ, ಅವಾಚ್ಯವಾಗಿ ಬೈದು ₹ 3 ಸಾವಿರ ಲಂಚ ನೀಡುವಂತೆ ಹೇಳಿದ್ದರು.
ಕಳೆದ ಜ.27 ರಂದು ವಾಹನ ಬಿಡಿಸಲು ಹೋದ ವಾಹನ ಮಾಲೀಕನಿಗೆ ಉತ್ತರ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಮುಹಮ್ಮದ್ ಶರೀಫ್ ಲಂಚದ ಬೇಡಿಕೆ ಇಟ್ಟಿದ್ದರು. ದೂರುದಾರ ಲಂಚವನ್ನು ನೀಡದಿದ್ದ ಹಿನ್ನೆಲೆಯಲ್ಲಿ ವಾಹನ ಬಿಡಿಸಲು ಸತಾಯಿಸಲಾಗಿತ್ತು. ಆದ್ದರಿಂದ ಅವರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.
ಇದನ್ನು ಓದಿದ್ದೀರಾ? ಮಂಗಳೂರು | ಲಂಚಕ್ಕೆ ಕೈಯ್ಯೊಡ್ಡಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಟ್ರಾಫಿಕ್ ಎಸ್‌ಐ ಶರೀಫ್, ಸಿಬ್ಬಂದಿ!
ಬಳಿಕ ಆ ವ್ಯಕ್ತಿಯಿಂದ ಮುಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ 3000 ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಜ.28ರಂದು ಬಂಧಿಸಿದ್ದರು.
